ಬೆಂಗಳೂರು: ರಾಜ್ಯ ರಾಜಕೀಯ ಬಿಕ್ಕಟ್ಟು ತೀವ್ರವಾಗುತ್ತಿರುವ ಹಿನ್ನಲೆಯಲ್ಲಿ ಜುಲೈ 11 ರಿಂದ ಜುಲೈ 14ರವರೆಗೆ ವಿಧಾನಸೌಧದ ಸುತ್ತಲಿನ 2 ಕಿ.ಮೀ. ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ನಗರ ಪೊಲೀಸ್ ಕಮಿಷನರ್ ಅಲೋಕ್ ಕುಮಾರ್  ಆದೇಶ ಹೊರಡಿಸಿದ್ದಾರೆ.


COMMERCIAL BREAK
SCROLL TO CONTINUE READING

ರಾಜ್ಯ ರಾಜಕಾರಣದ ಇತ್ತೀಚಿನ ಬೆಳವಣಿಗೆಗಳನ್ನು ಗಮನಿಸಿ ವಿಧಾನಸೌಧದ ಒಳ-ಹೊರಗೆ ರಾಜಕೀಯ ಪಕ್ಷಗಳ ನಾಯಕರ ನಡುವ ಘರ್ಷಣೆ ಉಂಟಾಗುವ ಸಾಧ್ಯತೆ ಇರುವ ಬಗ್ಗೆ ಗುಪ್ತಚರ ಇಲಾಖೆಯ ಅಧಿಕಾರಿಗಳು ನೀಡಿದ ಮಾಹಿತಿ ಮೇರಿಗೆ ಅಲೋಕ್ ಕುಮಾರ್ ಈ ನಿರ್ಧಾರ ಕೈಗೊಂಡಿದ್ದಾರೆ.


ದೇಶದೆಲ್ಲೆಡೆ ಭಾರೀ ಕುತೂಹಲ ಮೂಡಿಸಿರುವ ರಾಜ್ಯ ರಾಜಕಾರಣ ಅಂತಿಮ ಘಟ್ಟಕ್ಕೆ ತಲುಪಿದೆ ಎನ್ನಲಾಗುತ್ತಿದೆ. ಈಗಾಗಲೇ ಸಮ್ಮಿಶ್ರ ಸರ್ಕಾರದ ಕಾಂಗ್ರೆಸ್​- ಜೆಡಿಎಸ್​ ಸಚಿವರು ಸಾಮೂಹಿಕ ರಾಜೀನಾಮೆ ನೀಡಿದ್ದಾರೆ. ನಿನ್ನೆ ರಾಜೀನಾಮೆ ನೀಡಿದ ಇಬ್ಬರು ಶಾಸಕರೂ ಸೇರಿದಂತೆ ಒಟ್ಟು 17 ಶಾಸಕರು ರಾಜೀನಾಮೆ ನೀಡಿದ್ದಾರೆ. 


ಸಚಿವರ ರಾಜೀನಾಮೆ ಪಡೆದು ಅತೃಪ್ತರಿಗೆ ಮಂತ್ರಿ ಪದವಿ ನೀಡುವುದಾಗಿ ಪಕ್ಷದ ಹಿರಿಯ ನಾಯಕರು ಬಹಿರಂಗವಾಗಿಯೇ ಘೋಷಿಸಿದ್ದರೂ ಕೂಡ ಮುಂಬೈನಲ್ಲಿ ವಾಸ್ತವ್ಯ ಹೂಡಿರುವ ಅತೃಪ್ತರು ವಾಪಸ್ ಬರಲು ಮನಸ್ಸು ಮಾಡುತ್ತಿಲ್ಲ. ಏತನ್ಮಧ್ಯೆ, ಶಕ್ತಿಸೌಧದಲ್ಲಿ ಇಂದು ಬೆಳಗ್ಗೆ ಮಹತ್ವದ ಸಚಿವ ಸಂಪುಟ ಸಭೆ ನಡೆಯಲಿದೆ.


ಈ ಎಲ್ಲಾ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಶಕ್ತಿ ಸೌಧದ ಒಳಗೆ ಹಾಗೂ ಹೊರಗೆ ರಾಜಕೀಯ ಮುಖಂಡರ, ಕಾರ್ಯಕರ್ತರು ಗುಂಪು ಗಟ್ಟಿ ಪ್ರತಿಭಟನೆ, ಧರಣಿ ನಡೆಸುವ ಸಾಧ್ಯತೆ ಇದೆ. ಈ ಸಂದರ್ಭದಲ್ಲಿ ಪರಸ್ಪರ ಘರ್ಷಣೆ ಉಂಟಾಗುವ ಸಾಧ್ಯತೆ ಇದ್ದು, ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಎಂದು ಅಲೋಕ್ ಕುಮಾರ್ ಹೇಳಿದ್ದಾರೆ.