ಬೆಂಗಳೂರು: ಮುಖ್ಯಮಂತ್ರಿಗಳೇ, ನಿಮಗೆ ತಾಕತ್ತಿದ್ದರೆ ನಮ್ಮನ್ನು ರಾಜಕೀಯವಾಗಿ ಎದುರಿಸಿ ಎಂದು ಟ್ವೀಟ್ ಮಾಡಿದ್ದ ಬಿಜೆಪಿ ಸಂಸದ ಪ್ರತಾಪ್ ಸಿಂಹಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಟ್ವಿಟ್ಟರ್ ಮೂಲಕವೇ ಟಾಂಗ್ ನೀಡಿದ್ದಾರೆ.


COMMERCIAL BREAK
SCROLL TO CONTINUE READING

ಅನಂತಕುಮಾರ್ ಹೆಗಡೆ,  ಸಂಸದ ಪ್ರತಾಪ್ ಸಿಂಹ್ ವಿರುದ್ಧ ಟ್ವೀಟ್ಟರ್ ಮೂಲಕ ಟಾಂಗ್ ನೀಡಿರುವ ಸಿದ್ದರಾಮಯ್ಯ, ಕರ್ನಾಟಕ ಬಿಜೆಪಿಯಲ್ಲಿ ನಾಯಕತ್ವದ ಸಮಸ್ಯೆ ಇದೆ. ಯಡಿಯೂರಪ್ಪರನ್ನ ಒವರ್ ಟೇಕ್ ಮಾಡೋ ಯತ್ನ ನಡೆದಿದೆ. ಅನಂತ ಕುಮಾರ್ ಹೆಗಡೆ, ಪ್ರತಾಪ್ ಸಿಂಹ ಮುಖ್ಯಮಂತ್ರಿ ಅಭ್ಯರ್ಥಿ ಯಡಿಯೂರಪ್ಪ ಅವರನ್ನು ಒವರ್ ಟೇಕ್ ಮಾಡುವ ಸಂಚು ನಡೆಸಿದ್ದಾರೆ. ಅದಕ್ಕಾಗಿಯೇ ಹೆಗಡೆಯವರು ಸಣ್ಣ ಅಪಘಾತವನ್ನು ರಾಜಕೀಯಗೊಳಿಸುತ್ತಿದ್ದಾರೆ ಎಂದು ಟ್ವೀಟ್ ಮಾಡುವ ಮೂಲಕ ಕೇಂದ್ರ ಸಚಿವ ಅನಂತ ಕುಮಾರ್ ಹೆಗಡೆ ಹಾಗೂ ಸಂಸದ ಪ್ರತಾಪ್ ಸಿಂಹಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಟಾಂಗ್ ನೀಡಿದ್ದಾರೆ.



ಏನಿದು ಪ್ರಕರಣ?
ಕೇಂದ್ರ ಕೌಶಲ್ಯಾಭಿವೃದ್ಧಿ ಖಾತೆ ರಾಜ್ಯ ಸಚಿವ ಅನಂತ್ ಕುಮಾರ್ ಹೆಗಡೆ ಮಂಗಳವಾರ(ಏ. 17) ರಾತ್ರಿ ಶಿರಸಿಯಿಂದ ಬೆಂಗಳೂರಿಗೆ ಸಾಗುತ್ತಿದ್ದ ವೇಳೆ ಹಾವೇರಿ ಜಿಲ್ಲೆಯ ರಾಣಿಬೆನ್ನೂರು ತಾಲೂಕಿನ ರಾಷ್ಟ್ರೀಯ ಹೆದ್ದಾರಿಯ ಹಲಗೇರಿ ಕ್ರಾಸ್ ಬಳಿ ಲಾರಿಯೊಂದು ಸಚಿವರ ಬೆಂಗಾವಲು ವಾಹನಕ್ಕೆ ಡಿಕ್ಕಿ ಹೊಡೆದಿದೆ. ಈ ಘಟನೆಯಲ್ಲಿ ಸಚಿವ ಅನಂತ್ ಕುಮಾರ್ ಹೆಗಡೆ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇನ್ನು ಘಟನೆ ಬೆನ್ನಲ್ಲೇ ಸರಣಿ ಟ್ವೀಟ್ ಮಾಡಿದ್ದ ಹೆಗಡೆಯವರು, ಅಪಘಾತದಲ್ಲಿ ಲಾರಿ ಚಾಲಕನ ಗುರಿ ನನ್ನ ಕಾರೇ ಆಗಿತ್ತು ಎಂದು ಗಂಭೀರವಾಗಿ ಆರೋಪ ಮಾಡಿದ್ದರು. 



ಇನ್ನು ಘಟನೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದ ಸಂಸದ ಪ್ರತಾಪ್ ಸಿಂಹ, ಮುಖ್ಯಮಂತ್ರಿಗಳೇ, ನಿಮಗೆ ತಾಕತ್ತಿದ್ದರೆ ಅನಂತ ಕುಮಾರ ಹೆಗಡೆ ಅವರನ್ನು ರಾಜಕೀಯವಾಗಿ ಎದುರಿಸಿ. ಅದನ್ನು ಬಿಟ್ಟು ಈ ರೀತಿಯ ಪ್ರಯತ್ನ ಮಾಡಿದರೆ ನಾವು ಬೀದಿಗಿಳಿದು ಹೋರಾಟ ಮಾಡುತ್ತೇವೆ. ಆಗ ನಿಮ್ಮನ್ನು ಯಾರೂ ಕಾಪಾಡುವುದಿಲ್ಲ ಎಂದು ಟ್ವೀಟ್ ಮಾಡಿದ್ದರು.



'ಹಲಗೇರಿಯಿಂದ ಅಡ್ಡರಸ್ತೆಯ ಮೂಲಕ ಶಿವಮೊಗ್ಗಕ್ಕೆ ತೆರಳಲು ಲಾರಿ ಚಾಲಕ ತಿರುವು ತೆಗೆದುಕೊಂಡ ಪರಿಣಾಮ ಅಪಘಾತ ಸಂಭವಿಸಿದೆ. ಸಚಿವರು ದೂರಿದಂತೆ ಯಾವುದೇ ಹುನ್ನಾರ ನಡೆದಿರುವುದು ಪ್ರಾಥಮಿಕ ವರದಿಯಲ್ಲಿ ಕಂಡು ಬಂದಿಲ್ಲ. ತನಿಖೆ ಮುಂದುವರೆದಿದೆ.' ಲಾರಿ ಚಾಲಕ ವಿಶ್ವಾಸ್ ರೋಡ್ ಲೈನ್ ನ ಲಾರಿಯಲ್ಲಿ ಧಾನ್ಯಗಳನ್ನು ಒಯ್ಯತ್ತಿದ್ದನು. ಮೊಬೈಲ್ ನಲ್ಲಿ ಮಾತನಾಡಿಕೊಂಡು ಮುಂದೆ ಬಂದ ಕಾರಣ ಏಕಾಏಕಿ ತಿರುವು ತೆಗೆದು ಕೊಂಡಿರುವುದಾಗಿ ಪೊಲೀಸರ ಮುಂದೆ ತಿಳಿಸಿದ್ದಾನೆ ಎಂದು ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.