ಬೆಂಗಳೂರು: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಇವಿಎಂ ಬೇಡ, ಬ್ಯಾಲೆಟ್ ಪೇಪರ್‌ ತರುವಂತೆ ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದರು ಪ್ರಯೋಜನವಾಗಿಲ್ಲ. ಇವಿಎಂ ಹ್ಯಾಕ್ ಮಾಡುವ ಸಾಧ್ಯತೆಯ ಬಗ್ಗೆ ಉದಾಹರಣೆ ನೋಡಿದ್ದೇವೆ.‌ ಆ ಅನುಮಾನವೂ ಮೂಡಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ಅನುಮಾನ ವ್ಯಕ್ತಪಡಿಸಿದ್ದಾರೆ.


COMMERCIAL BREAK
SCROLL TO CONTINUE READING

ಸದಾಶಿವನಗರ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ ಪರಮೇಶ್ವರ, ಬಿಜೆಪಿ ಪರವಾದ ಫಲಿತಾಂಶ ಸಮೀಕ್ಷೆ ಅವರೇ ಹೇಳಿ ಮಾಡಿಸಿದ ರೀತಿ ವರದಿ ಇದೆ.‌ ಆದರೆ ವಸ್ತು ಸ್ಥಿತಿಯಲ್ಲಿ ಬಿಜೆಪಿ ಸೋಲಲಿದೆ ಎಂದು ಭವಿಷ್ಯ ನುಡಿದಿದ್ದು, 300-400 ಸೀಟು ಬರುತ್ತೆ ಎಂದು ಎಕ್ಸಿಟ್‌ ಪೋಲ್ ಮೂಲಕ ಹೇಳಿಸಿಕೊಂಡು ಬಿಜೆಪಿ ಸಮಾಧಾನ ಪಟ್ಟುಕೊಳ್ಳುವ ಕೆಲಸ ಮಾಡುತ್ತಿದೆ ಎಂದಿದ್ದಾರೆ.


ವಾಸ್ತವದಲ್ಲಿ ಯುಪಿಎ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂಬ ಮಾಹಿತಿ ಲಭಿಸಿದೆ. ಭಾನುವಾರ ನವದೆಹಲಿಯಲ್ಲಿ ನಾಯಕರನ್ನು ಭೇಟಿ ಮಾಡಿದಾಗಲೂ ಇದೇ ಅಭಿಪ್ರಾಯ ಕೇಳಿ ಬಂದಿದೆ ಎಂದು ಪರಮೇಶ್ವರ್ ಹೇಳಿದ್ದಾರೆ.


ಕರ್ನಾಟಕದಲ್ಲಿ ಬಿಜೆಪಿಗೆ 18 ಸೀಟು ಸಾಧ್ಯವೇ?
ಕರ್ನಾಟಕದಲ್ಲಿ 18 ಸೀಟು ಬಿಜೆಪಿಗೆ ಬರಲಿದೆ ಎಂಬ ವರದಿಯನ್ನು ನಂಬಲಾದರೂ ಸಾಧ್ಯವೇ? ಎಂದು ಪ್ರಶ್ನಿಸಿದ ಪರಮೇಶ್ವರ್,  ಈ ಬಾರಿ ಸಮೀಕ್ಷಾ ವರದಿ ಸಂಪೂರ್ಣ ತಪ್ಪಿದೆ. ಅದರಲ್ಲೂ ಕರ್ನಾಟಕದ ಸ್ಥಿತಿ ಗೊತ್ತಿದೆ. ಜೆಡಿಎಸ್‌ ಕಾಂಗ್ರೆಸ್ ಪಕ್ಷವೇ ಹೆಚ್ಚು ಸ್ಥಾನ ಗಳಿಸಲಿದೆ. ಇದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.