ನನ್ನ ಹಾಗೂ ಡಿಕೆಶಿ ನಡುವೆ ಯಾವುದೇ ವ್ಯವಹಾರವಿಲ್ಲ: ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್
ಗುರುವಾರ ಇಡಿ ವಿಚಾರಣೆಗೆ ಹಾಜರಾಗುತ್ತೇನೆ: ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್
ಬೆಳಗಾವಿ: ನನ್ನ ಹಾಗೂ ಡಿ.ಕೆ. ಶಿವಕುಮಾರ್ ಅವರ ನಡುವೆ ಯಾವುದೇ ವ್ಯವಹಾರವಿಲ್ಲ. ಆದರೂ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ನನಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಿದ್ದಾರೆ. ಸೆ.19ರಂದು ನಾನು ಇಡಿ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗುತ್ತೇನೆ ಎಂದು ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದ್ದಾರೆ.
ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ ವಿಚಾರಣೆ ಎದುರಿಸುತ್ತಿರುವ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿರುವ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಸೆ.14ರಂದು ವಿಚಾರಣೆಗೆ ಹಾಜರಾಗಲು ಇಡಿ ಸಮನ್ಸ್ ನೀಡಿತ್ತು. ಆದರೆ ಅಂದು ಲಕ್ಷ್ಮೀ ಹೆಬ್ಬಾಳ್ಕರ್ ವಿಚಾರಣೆಗೆ ಹಾಜರಾಗಲು ಸಾಧ್ಯವಾಗದ ಕಾರಣ ಇದೀಗ ಸೆ.19 ರಂದು ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಸೂಚಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್, ಜಾರಿ ನಿರ್ದೇಶನಾಲಯದಿಂದ ನೋಟೀಸ್ ಬಂದಿರುವುದನ್ನು ಖಚಿತ ಪಡಿಸಿದರು. ಯಾವ ವಿಚಾರಕ್ಕಾಗಿ ವಿಚಾರಣೆಗೆ ಕರೆದಿದ್ದಾರೆಂದು ತಿಳಿದಿಲ್ಲ. 'ವಿಚಾರಣೆಗೆ ಹಾಜರಾಗಿ' ಎಂಬ ಒಂದು ಸಾಲಿನ ಪತ್ರ ಮಾತ್ರ ನನಗೆ ಸಿಕ್ಕಿದೆ. ನಾನು ಬೆಂಗಳೂರಿನಲ್ಲಿ ವಿಚಾರಣೆಗೆ ಹಾಜರಾಗುವುದಾಗಿ ಮನವಿ ಮಾಡಿದ್ದೆ. ಆದರೆ ಈ ಸಂಬಂಧ ಇಡಿ ಅಧಿಕಾರಿಗಳಿಂದ ಯಾವುದೇ ಸಮರ್ಪಕವಾದ ಪ್ರತಿಕ್ರಿಯೆ ಬಂದಿಲ್ಲ. ಈ ಮೊದಲು ಸೆ.14 ರಂದು ವಿಚಾರಣೆಗೆ ಹಾಜರಾಗುವಂತೆ ನೋಟೀಸ್ ನೀಡಿದ್ದರು. ಕಾರಣಾಂತರಗಳಿಂದ ನನಗೆ ವಿಚಾರಣೆಗೆ ಹೋಗಲು ಸಾಧ್ಯವಾಗಲಿಲ್ಲ. ಇದೀಗ ಸೆ.19 ರಂದು ವಿಚಾರಣೆಗೆ ಬರುವಂತೆ ತಿಳಿಸಿದ್ದಾರೆ. ಗುರುವಾರ ದೆಹಲಿಯಲ್ಲಿ ನಾನು ಇಡಿ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗಲಿದ್ದೇನೆ. ವಿಚಾರಣೆಗೆ ಸಂಪೂರ್ಣ ಸಹಕಾರ ನೀಡುತ್ತೇನೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಡಿ.ಕೆ. ಶಿವಕುಮಾರ್ ಹಾಗೂ ನನ್ನ ನಡುವೆ ಯಾವುದೇ ಹಣಕಾಸಿನ ವ್ಯವಹಾರಗಳೂ ಇಲ್ಲ ಎಂದು ಸ್ಪಷ್ಟಪಡಿಸಿದ 'ಕೈ' ಶಾಸಕಿ, ಹೀಗಿದ್ದರೂ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ನನ್ನನ್ನು ಏಕೆ ವಿಚಾರಣೆಗೆ ಕರೆದಿದ್ದಾರೆ ಎಂಬುದು ವಿಚಾರಣೆ ಬಳಿಕವಷ್ಟೇ ತಿಳಿಯಬೇಕಿದೆ ಎಂದರು.