ಸಿದ್ದರಾಮಯ್ಯ-ಪರಮೇಶ್ವರ ನಡುವೆ ಭಿನ್ನಾಭಿಪ್ರಾಯ ಇಲ್ಲ: ವೇಣುಗೋಪಾಲ್
ಸಿದ್ದರಾಮಯ್ಯ ಮತ್ತು ಪರಮೇಶ್ವರ್ ಸೇರಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸುಳ್ಳು ಸುದ್ದಿ ಹಬ್ಬಿಸುತ್ತಿರುವ ಬಿಜೆಪಿಗೆ ತಕ್ಕ ಪಾಠ ಕಲಿಸಲಿದ್ದಾರೆ-ಕೆ.ಸಿ.ವೇಣುಗೋಪಾಲ್
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ನಡುವೆ ಯಾವುದೇ ಭಿನ್ನಮತ ಅಥವಾ ಅಸಮಾಧಾನ ಇಲ್ಲ. ಇಬ್ಬರ ನಡುವೆ ಉತ್ತಮವಾದ ಸಂಬಂಧವಿದೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಮತ್ತು ಪರಮೇಶ್ವರ್ ಸೇರಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸುಳ್ಳು ಸುದ್ದಿ ಹಬ್ಬಿಸುತ್ತಿರುವ ಬಿಜೆಪಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.
ಸಿದ್ದರಾಮಯ್ಯ ಮತ್ತು ಪರಮೇಶ್ವರ್ ನಡುವೆ ಅಸಮಾಧಾನ ಇದೆ ಅನ್ನೋದೆಲ್ಲಾ ಸುಳ್ಳು, ಇಬ್ಬರ ನಡುವೆ ಉತ್ತಮ ಸಂಬಂಧವಿದೆ ಎಂದ ಅವರು, ರಾಜ್ಯದಲ್ಲಿ ಕಾನೂನು ಸುವವ್ಯಸ್ಥೆ ಉತ್ತಮವಾಗಿದೆ. ಕಾನೂನು ಸುವವ್ಯಸ್ಥೆ ಹಾಳು ಮಾಡುವವರು ಕೂಡ ಬಿಜೆಪಿಯವರೇ ಎಂದು ಹೇಳಿದರು.
ಹತ್ಯೆಗೀಡಾದ ಪತ್ರಕರ್ತೆ ಗೌರಿ ಲಂಕೇಶ್ ಅಂತ್ಯ ಸಂಸ್ಕಾರಕ್ಕೂ ಬಾರದೇ ಸತ್ತವರಿಗೆ ಅಗೌರವ ತೋರಿದವರು ಕೂಡ ಬಿಜೆಪಿಯವರೇ. ಗೌರಿ ಲಂಕೇಶ ಹತ್ಯೆ ಹಿಂದೆ ಯಾರಿದ್ದಾರೆ ಅನ್ನೋದು ಕೆಲವೇ ದಿನದಲ್ಲಿ ಗೊತ್ತಾಗುತ್ತೆ ಎಂದು ವೇಣುಗೋಪಾಲ್ ಬಿಜೆಪಿ ನಾಯಕರ ಮೇಲೆ ಕಿಡಿಕಾರಿದರು.