ಜನಾರ್ಧನ ರೆಡ್ಡಿ ವಿಚಾರದಲ್ಲಿ ದ್ವೇಷದ ರಾಜಕಾರಣ ಮಾಡುತ್ತಿಲ್ಲ: ಸಿಎಂ ಸ್ಪಷ್ಟನೆ
ಆ್ಯಂಬಿಡೆಂಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತಮ್ಮ ಕೆಲಸವನ್ನು ತಾವು ಮಾಡುತ್ತಿದ್ದಾರೆ. ಇದರಲ್ಲಿ ಯಾವುದೇ ದ್ವೇಷದ ರಾಜಕಾರಣವಿಲ್ಲ.
ಬೆಂಗಳೂರು: ಮಾಜಿ ಸಚಿವ ಜನಾರ್ಧನ ರೆಡ್ಡಿ ಡೀಲ್ ಪ್ರಕರಣದಲ್ಲಿ ಸರ್ಕಾರ ಯಾವುದೇ ದ್ವೇಷದ ರಾಜಕಾರಣ ಮಾಡುತ್ತಿಲ್ಲ ಎಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಸ್ಪಷ್ಟನೆ ನೀಡಿದ್ದಾರೆ.
ಮಾಜಿ ಸಚಿವ ಜನಾರ್ದನ ರೆಡ್ಡಿ ವಿರುದ್ಧ ಸಿಸಿಬಿ ತನಿಖೆ ನಡೆಸುತ್ತಿರುವ ಕುರಿತಂತೆ ಮಾಧ್ಯಮ ಮಿತ್ರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿಎಂ, ಆ್ಯಂಬಿಡೆಂಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತಮ್ಮ ಕೆಲಸವನ್ನು ತಾವು ಮಾಡುತ್ತಿದ್ದಾರೆ. ಇದರಲ್ಲಿ ಯಾವುದೇ ದ್ವೇಷದ ರಾಜಕಾರಣವಿಲ್ಲ ಎಂದು ತಿಳಿಸಿದ್ದಾರೆ.
ಇದೇ ವೇಳೆ ರೆಡ್ಡಿಯ ಆಪ್ತರೊಬ್ಬರು 18 ಕೋಟಿರೂಗಳನ್ನು ತಿರುಪತಿ ತಿಮ್ಮಪ್ಪನ ಹುಂಡಿಗೆ ಹಾಕಿರುವುದಾಗಿ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾರೆ. ಇದು ಹಾಸ್ಯವೋ ಅಥವಾ ಗಂಭೀರವೂ ನನಗೆ ಅರ್ಥವಾಗುತ್ತಿಲ್ಲ ಎಂದು ಲೇವಡಿ ಮಾಡಿದ ಕುಮಾರಸ್ವಾಮಿ, ಇದು ಯಾವ ರೀತಿ ಅರ್ಥ ಬರುತ್ತದೆ ಎಂಬುದನ್ನು ಜವಾಬ್ದಾರಿ ಸ್ಥಾನದಲ್ಲಿರುವವರು ಯೋಚನೆ ಮಾಡಬೇಕು. ಸಾರ್ವಜನಿಕರ ಹಣ ತೆಗೆದುಕೊಂಡು ಹೋಗಿ ತಿರುಪತಿಯ ಹುಂಡಿಗೆ ಹಾಕಿದ್ದೇನೆ ಎಂದು ಹೇಳುವ ಹಿಂದಿನ ಅರ್ಥವೇನು ಎಂದು ಪ್ರಶ್ನಿಸಿದರು.