ರೈತರ ಬೆಳೆ ಸಾಲ ಮನ್ನಾಗೆ ಯಾವುದೇ ಆಕ್ಷೇಪಣೆ ಇಲ್ಲ- ಮೋಯ್ಲಿ
ಗ್ರಾಮೀಣಾಭಿವೃದ್ಧಿ, ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ರೈತರು ಮಾಡಿರುವ ಸಾಲ ಮನ್ನಾಗೆ ನಮ್ಮ ಸಮ್ಮತಿ ಸೂಚಿಸಿದ್ದೇವೆ.
ಬೆಂಗಳೂರು: ನೂತನ ಸರ್ಕಾರ ಜುಲೈ 5 ರಂದು ಮಂಡಿಸಲಿರುವ ಬಜೆಟ್ ನಲ್ಲಿ 2018ರ ಮೇ ತಿಂಗಳವರೆಗೆ ರೈತರ ಬೆಳೆ ಸಾಲ ಮನ್ನಾಗೆ ಯಾವುದೇ ಆಕ್ಷೇಪಣೆ ಇಲ್ಲ. ಸಮಿತಿ ಸರ್ಕಾರಕ್ಕೆ ಸಾಲ ಮನ್ನಾ ಸಂಬಂಧ ಶಿಫಾರಸು ಮಾಡಲಿದೆ ಎಂದು ಸರ್ಕಾರದ ಸಾಮಾನ್ಯ ಕನಿಷ್ಠ ಕಾರ್ಯಕ್ರಮಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಡಾ. ಎಂ. ವೀರಪ್ಪ ಮೊಯ್ಲಿ ತಿಳಿಸಿದ್ದಾರೆ.
ಬೆಂಗಳೂರಿನ ಕುಮಾರಕೃಪ ಅತಿಥಿಗೃಹದಲ್ಲಿ ಶುಕ್ರವಾರ ಮಾತನಾಡಿದ ಸಂಸದ ವೀರಪ್ಪ ಮೊಯ್ಲಿ, ಇಂದು ಸಮಿತಿ ಸಭೆಯಲ್ಲಿ ಸರ್ವಾನುಮತದಿಂದ ಈ ನಿರ್ಣಯ ಕೈಗೊಳ್ಳಲಾಗಿದೆ. ಜೊತೆಗೆ ಹಿಂದಿನ ಬಜೆಟ್ ನ ಯಾವುದೇ ಕಾರ್ಯಕ್ರಮ ನಿಲ್ಲುವುದಿಲ್ಲ. ಆರ್ಥಿಕವಾಗಿ ಹೊಂದಾಣಿಕೆ ಮಾಡಿಕೊಳ್ಳಲು ಸಲಹೆ ನೀಡುತ್ತೇವೆ ಎಂದರು.
ಗ್ರಾಮೀಣಾಭಿವೃದ್ಧಿ, ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ರೈತರು ಮಾಡಿರುವ ಸಾಲ ಮನ್ನಾಗೆ ನಮ್ಮ ಸಮ್ಮತಿ ಸೂಚಿಸಿದ್ದೇವೆ. ಸದ್ಯ ಸರ್ಕಾರಕ್ಕೆ ಇದೇ ಶಿಫಾರಸು ಮಾಡುತ್ತೇವೆ. ಹಣಕಾಸು ಹೊಂದಾಣಿಕೆ ಹೇಗೆ ಮಾಡಿಕೊಳ್ಳಬೇಕೆಂದು ಸರ್ಕಾರ ತೀರ್ಮಾನಿಸಲಿದೆ. ಸಂತೋಷದ ಸಂಗತಿ ಎಂದರೆ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ಪ್ರನಾಳಿಕೆಯ ಸಮತೋಲನ ಮಾಡಿದ್ದೇವೆ. ಅಂತಿಮ ಅನುಷ್ಠಾನಕ್ಕೆ ಯಾವ ಅಂಶ ಸೇರಿಸಬೇಕೆಂಬ ಚರ್ಚೆ ಆಗಿದೆ ಎಂದು ಮೊಯ್ಲಿ ಹೇಳಿದರು.
ಬೆಂಗಳೂರಿನ ಕುಮಾರಕೃಪ ಅತಿಥಿಗೃಹದಲ್ಲಿ ಶುಕ್ರವಾರ ಸಂಜೆ ಡಾ. ಎಂ. ವೀರಪ್ಪ ಮೊಯ್ಲಿ ಅಧ್ಯಕ್ಷತೆಯಲ್ಲಿ ನಡೆದ ಸಮಿತಿ ಸಭೆಯಲ್ಲಿ ಸದಸ್ಯರಾದ ಆರ್.ವಿ. ದೇಶಪಾಂಡೆ ಡಿ.ಕೆ. ಶಿವಕುಮಾರ್, ಎಚ್.ಡಿ ರೇವಣ್ಣ, ಬಂಡೆಪ್ಪ ಕಾಶೆಂಪೂರ್ ಭಾಗವಹಿಸಿದ್ದರು.