ಸಂಸತ್ತಿನಲ್ಲಿ ಮಹಿಳೆ ,ರೈತ ಹಾಗೂ ಶೋಷಿತರ ಪರ ಧ್ವನಿಯೇ ಇಲ್ಲ - ನ್ಯಾ.ನಾಗಮೋಹನ್ ದಾಸ್
ಧಾರವಾಡ: ಗದುಗಿನ ಲಡಾಯಿ ಪ್ರಕಾಶನ ಕವಲಕ್ಕಿಯ ಕವಿ ಪ್ರಕಾಶನ ಹಾಗೂ ಧಾರವಾಡ ಚಿತ್ತಾರ ಕಲಾ ಬಳಗ ಜಂಟಿಯಾಗಿ ಆಯೋಜಿಸಿದ್ದ ಮೇ ಸಾಹಿತ್ಯ ಮೇಳದಲ್ಲಿ ಬಹುತ್ವದ ಭಾರತ ಇಂದು ಮತ್ತು ನಾಳೆ' ಎನ್ನುವ ಆಶಯದ ಮೇಲೆ ಮಾತನಾಡಿದ ನ್ಯಾ,ನಾಗಮೋಹನ್ ದಾಸ್ ಸಂಸತ್ತಿನಲ್ಲಿ ಮಹಿಳೆ ,ರೈತ ಹಾಗೂ ಶೋಷಿತರ ಪರ ಮಾತನಾಡುವವರೇ ಇಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
ಭಾರತದ ಬಹುತ್ವದ ಪರಂಪರೆಯ ಬಗ್ಗೆ ಮಾತನಾಡಿದ ಅವರು " ಈ ದೇಶದಲ್ಲಿ 4,600 ಜಾತಿಗಳಿವೆ. ಇಸ್ಲಾಂ ಭಾರತವನ್ನು ಬಿಟ್ಟು ಬೇರೆ ಕಡೆ ಎರಡೇ ಜಾತಿಗಳಿದ್ದರೆ ಇಲ್ಲಿ 200 ಇವೆ. ಮತ್ತು ಕ್ರೈಸ್ತರು ಹೊರಗಡೆ 2 ಇದ್ದರೆ ನಮ್ಮ ದೇಶದಲ್ಲಿ 400 ಇವೆ. ನೂರಾರು ಭಾಷೆಗಳು ಆನೇಕ ಧರ್ಮ, ಸಂಸ್ಕೃತಿಗಳಿದೆ. ಇವರೆಲ್ಲ ಶಾಂತಿಯಿಂದ ಸೌಹಾರ್ಧದಿಂದು ಬದುಕುತ್ತಿದ್ದರು. ಇದೇ ಬಹುತ್ವದ ಸಂಕೇತ. ನಮ್ಮ ಸಂಸ್ಕೃತಿ, ಆಹಾರ, ಉಡುಪು, ಸಂಪ್ರದಾಯ, ಭಾಷೆ ಎಲ್ಲವೂ ಬದಲಾಗುತ್ತಲೇ ಇರುತ್ತದೆ. ಇದು ಪ್ರಜಾಪ್ರಭುತ್ವದ ದೇಶ ಕಲಿಸುತ್ತದೆ. ಇದರಿಂದಲೇ ಬಹುತ್ವದ ದೇಶದಲ್ಲಿ ಕಷ್ಟ ಸುಖ, ಹೋರಾಟಗಳಲ್ಲಿ ಒಬ್ಬರಿಗೊಬ್ಬರು ಹೆಗಲಿಗೆ ಹೆಗಲಾಗಿ ಸಹಾಯ ಮಾಡಿದ್ದಾರೆ ಎಂದು ತಿಳಿಸಿದರು.
ಈ ದೇಶದ ಸ್ವಾತಂತ್ರ್ಯ ಹೋರಾಟದ ಪರಂಪರೆಯ ಬಗ್ಗೆ ಮಾತನಾಡುತ್ತಾ "ನಮ್ಮ ದೇಶದ ಸ್ವತಂತ್ರ ಹೋರಾಟ ಬೇರೆ ದೇಶದ ರೀತಿ ಕೇವಲ ರಾಜಕೀಯ ಹೋರಾಟವಾಗಿರಲಿಲ್ಲ. ಬದಲಾಗಿ ರಾಜಕೀಯ ಹೋರಾಟದ ಆರ್ಥಿಕ, ಸಮಾಜಿಕ ಮತ್ತು ಸಾಂಸ್ಕೃತಿಕ ಹೋರಾಟವಾಗಿರುವುದು ಒಂದು ವಿಶೇಷವಾಗಿದೆ. ಸ್ವಾತಂತ್ರ್ಯ ಬಂದಾಗ ಹಲವಾರು ಪ್ರಶ್ನೆಗಳು ಬಂದವು ಇದು ಹಿಂದೂ ರಾಷ್ಟ್ರವಾಗಬೇಕ ಅನ್ನುವುದು, ಆದರೆ ಇದನ್ನು ಹಾಗೆ ಮಾಡಲು ಬಿಡದೆ ಇದು ಒಂದು ಧರ್ಮದ ಹೋರಾಟವಲ್ಲ ಹಾಗಾಗಿ ಇದು ಜಾತ್ಯಾತೀತ ರಾಷ್ಟ್ರವಾಗಬೇಕು ಎಂದು ಈ ದೇಶ ಕಟ್ಟಲಾಗಿದೆ ಎಂದು ವಿವರಿಸಿದರು
ಮಿಣುಕು ಹುಳುವಾಗಿ ಕೆಲಸ ಮಾಡಬೇಕಿದೆ
ಇನ್ನು ಪ್ರಸಕ್ತ ದಿನಗಳಲ್ಲಿ ಭಾರತ ಎದುರಿಸುತ್ತಿರುವ ಅಪಾಯಗಳ ಬಗ್ಗೆ ಮಾತನಾಡುತ್ತಾ ಅವರು "ಸಂವಿಧಾನ ಬದಲು ಮಾಡ್ತೀವಿ, ವಿಮರ್ಶೆ ಮಾಡ್ತೀವಿ, ಮೀಸಲಾತಿ ಬೇಡ, ಸಂವಿಧಾನ ತಿದ್ದುಪಡಿ ಮಾಡಿ ಜಿ.ಎಸ್.ಟಿ ತರುತ್ತಾರೆ, ನೋಟ್ ಬ್ಯಾನ್ ಅನ್ನು ಮಾಡಿ ರಿಸರ್ವ್ ಬ್ಯಾಂಕ್ ನ ಕೆಲಸವನ್ನು ಕೆಳಗೆ ಇಳಿಸಿದ್ದಾರೆ. ಇದೆಲ್ಲವನ್ನು ನೋಡುತ್ತಿದ್ದರೆ ನಿಮಗೆ ಗೊತ್ತಾಗಬೇಕು ಅಪಾಯ ಎಲ್ಲಿದೆ ಎಂದು. ಇದೆಲ್ಲವನ್ನು ನೋಡುತ್ತಿದ್ದರೆ ನಮ್ಮ ದೇಶವು ಅಪಾಯದಲ್ಲಿದೆ ಎಂದು ತಿಳಿಯುತ್ತದೆ. ಅದಕ್ಕಾಗಿ ನಮಗೆಲ್ಲ ಒಂದು ಜವಾಬ್ದಾರಿಯಿದೆ ನನಗೂ ಇದೆ ಆದ್ದರಿಂದ ಇಲ್ಲಿಗೆ ಬಂದಿದ್ದೇನೆ. ನಾವು ಸೂರ್ಯನಂತೆ ಪ್ರಕಾಶಿಸಲು ಸಾಧ್ಯವಿಲ್ಲದೆ ಇದ್ದರೂ ಮಿಣುಕು ಹುಳುವಾಗಿ ಕೆಲಸ ಮಾಡಲು ಸಾಧ್ಯವಿದೆ ಮತ್ತು ಅಂತಹ ಕೆಲಸವಾದರೂ ಮಾಡೋಣ" ನ್ಯಾ, ನಾಗಮೋಹನ್ ದಾಸ್ ಅಭಿಪ್ರಾಯಪಟ್ಟರು.