ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ ವಿಚಾರಣೆ ಎದುರಿಸುತ್ತಿರುವ ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ಗೆ ಇಂದು ಮಹತ್ವದ ದಿನ. ಇಂದಿಗೆ ಡಿ.ಕೆ. ಶಿವಕುಮಾರ್ ಇಡಿ ಕಸ್ಟಡಿ ಅಂತ್ಯವಾಗಲಿದ್ದು ಅವರನ್ನು ಕೋರ್ಟಿಗೆ ಹಾಜರುಪಡಿಸಲಾಗುತ್ತದೆ.


COMMERCIAL BREAK
SCROLL TO CONTINUE READING

ಮಧ್ಯಾಹ್ನದ ಬಳಿಕ ರೋಸ್ ಅವೆನ್ಯೂನಲ್ಲಿರುವ ಜಾರಿ ನಿರ್ದೇಶನಾಲಯದ ವಿಶೇಷ ನ್ಯಾಯಾಲಯಕ್ಕೆ ಡಿ‌.ಕೆ. ಶಿವಕುಮಾರ್ ಅವರನ್ನು ಹಾಜರುಪಡಿಸಲಾಗುತ್ತದೆ. ಡಿ.ಕೆ. ಶಿವಕುಮಾರ್ ಅವರನ್ನು ಇನ್ನೂ 4 ದಿನ ವಶಕ್ಕೆ ನೀಡುವಂತೆ ಇಡಿ ಮನವಿ ಸಾಧ್ಯತೆ ಇದೆ.


ಡಿ.ಕೆ. ಶಿವಕುಮಾರ್ ವಿಚಾರಣೆಗೆ ಸಹಕರಿಸುತ್ತಿಲ್ಲ. ಪ್ರಕರಣದ ಬಗ್ಗೆ ಸಮರ್ಪಕವಾದ ಮಾಹಿತಿ ನೀಡುತ್ತಿಲ್ಲ . ಸಮನ್ಸ್ ನೀಡಿದ್ದಾಗಲೂ ಡಿಕೆಶಿ ಸರಿ ಉತ್ತರ ನೀಡಿರಲಿಲ್ಲ. ವಶಕ್ಕೆ ಪಡೆದ ಮೇಲೂ ಸರಿಯಾದ ಉತ್ತರ ನೀಡುತ್ತಿಲ್ಲ. ಈ ಹಿನ್ನೆಲೆಯಲ್ಲಿ ಇನ್ನಷ್ಟು ವಿಚಾರಣೆ ನಡೆಸಬೇಕಿದೆ‌ ಎಂದು ಇಡಿ ಪರ ವಕೀಲರು ಕೋರ್ಟ್ ಮುಂದೆ ಮನವಿ ಮಾಡಲಿದ್ದಾರೆ ಎನ್ನಲಾಗಿದೆ.


ಇನ್ನೊಂದೆಡೆ ಜಾಮೀನು ನೀಡುವಂತೆ ಡಿಕೆಶಿ ಪರ ವಕೀಲರು ವಾದ ಮಂಡಿಸಲಿದ್ದಾರೆ.‌ ಈಗಾಗಲೇ ಇಡಿ ವಶದಲ್ಲಿ 10 ದಿನ ವಿಚಾರಣೆ ನಡೆದಿದೆ. ಮೊದಲು 4 ದಿನಾ ಸಮನ್ಸ್ ವಿಚಾರಣೆ ನಡೆದಿತ್ತು. ಇಡಿ ಅಧಿಕಾರಿಗಳು ಒಟ್ಟು 14 ದಿನ ವಿಚಾರಣೆ ನಡೆಸಿದ್ದಾರೆ. ಡಿಕೆಶಿ ತನಿಖೆಗೆ ಎಲ್ಲಾ ರೀತಿಯಲ್ಲೂ ಸಹಕರಿಸುತ್ತಿದ್ದಾರೆ. ಆದರೂ ಇಡಿ ಅಧಿಕಾರಿಗಳು ಇದುವರೆಗೂ ದಾಖಲೆ‌ ಕಲೆಹಾಕಿಲ್ಲ. ಆದುದರಿಂದ ತಮ್ಮ ಜಾಮೀನು ಅರ್ಜಿ ಪುರಸ್ಕರಿಸಬೇಕು ಎಂದು ಮನವಿ ಮಾಡಲಿದ್ದಾರೆ. 


ಈ‌ ವಾದಗಳನ್ನು ಆಲಿಸಲಿರುವ ನ್ಯಾಯಾಲಯ ಡಿಕೆಶಿ ಭವಿಷ್ಯ ನಿರ್ಧರಿಸಲಿದೆ. ಇಡಿ ಮನವಿಗೆ ಸ್ಪಂದಿಸಿ ಇನ್ನೂ 4 ದಿನ ವಶಕ್ಕೆ ನೀಡಬಹುದು. ಡಿಕೆಶಿಯನ್ನು ನ್ಯಾಯಾಂಗ ಬಂಧನಕ್ಕೆ ಆದೇಶಿಸಬಹುದು ಅಥವಾ ಡಿ.ಕೆ. ಶಿವಕುಮಾರ್ ಅವರಿಗೆ ಜಾಮೀನನ್ನೂ ನೀಡಬಹುದಾಗಿದೆ.