ಸಮ್ಮಿಶ್ರ ಸರ್ಕಾರ ಪತನ ಬಹುತೇಕ ಖಚಿತ: ಸುಮಾರು 13 ಶಾಸಕರಿಂದ ರಾಜೀನಾಮೆ?
ಕಾಂಗ್ರೆಸ್ ಶಾಸಕರಾಗಿದ್ದ ಆನಂದ್ ಸಿಂಗ್ ಮತ್ತು ರಮೇಶ್ ಜಾರಕಿಹೊಳಿ ರಾಜೀನಾಮೆ ಬೆನ್ನಲ್ಲೇ ಸುಮಾರು 13 ಶಾಸಕರು ರಾಜೀನಾಮೆ ನೀಡಲು ಸ್ಪೀಕರ್ ಹುಡುಕಿ ವಿಧಾನಸೌಧಕ್ಕೆ ತೆರಳಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಬೆಂಗಳೂರು: ಮಹತ್ವದ ಬೆಳವಣಿಗೆಯೊಂದರಲ್ಲಿ ಕಾಂಗ್ರೆಸ್ ಪಕ್ಷದ 13 ಬಂಡಾಯ ಶಾಸಕರು ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ.
ಕಾಂಗ್ರೆಸ್ ಶಾಸಕರಾಗಿದ್ದ ಆನಂದ್ ಸಿಂಗ್ ಮತ್ತು ರಮೇಶ್ ಜಾರಕಿಹೊಳಿ ರಾಜೀನಾಮೆ ಬೆನ್ನಲ್ಲೇ ಸುಮಾರು 13 ಶಾಸಕರು ರಾಜೀನಾಮೆ ನೀಡಲು ಸ್ಪೀಕರ್ ಹುಡುಕಿ ವಿಧಾನಸೌಧಕ್ಕೆ ತೆರಳಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಬಂಡಾಯ ಶಾಸಕರ ಗುಂಪಿನಲ್ಲಿ ಮಹಾಲಕ್ಷ್ಮಿ ಲೇಔಟ್ ಶಾಸಕ ಜೆಡಿಎಸ್‌ನ ಕೆ. ಗೋಪಾಲಯ್ಯ ಮತ್ತು ಆರ್‌ಆರ್ ನಗರ ಕಾಂಗ್ರೆಸ್ ಶಾಸಕ ಕೂಡ ಸೇರಿದ್ದು, ಶಾಸಕ ಬಿ.ಸಿ.ಪಾಟೀಲ್, ಬಾಗೇಪಲ್ಲಿ ಶಾಸಕ ಸುಬ್ಬಾರೆಡ್ಡಿ, ಬಳ್ಳಾರಿ ಗ್ರಾಮಾಂತರ ಕ್ಷೇತ್ರದ ಶಾಸಕ ಬಿ.ರಾಘವೇಂದ್ರ, ಕೆ.ಆರ್.ಪುರಂ ಕ್ಷೇತ್ರದ ಶಾಸಕ ಬೈರತಿ ಬಸವರಾಜ್, ಎಸ್.ಟಿ.ಸೋಮಶೇಖರ್, ನಾರಾಯಣಗೌಡ, ಹುಣಸೂರು ಶಾಸಕ ಹೆಚ್.ವಿಶ್ವನಾಥ್, ರಾಜರಾಜೇಶ್ವರಿ ನಗರದ ಶಾಸಕ ಮುನಿರತ್ನ, ಪ್ರತಾಪ್ ಗೌಡ ಪಾಟೀಲ್ ಕೂಡ ರಾಜೀನಾಮೆ ಸಲ್ಲಿಸಲಿದ್ದಾರೆ ಎನ್ನಲಾಗಿದೆ.
ಒಂದೆಡೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಅಮೇರಿಕ ಪ್ರವಾಸದಲ್ಲಿದ್ದು, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸಹ ವಿದೇಶಕ್ಕೆ ತೆರಳಿರುವ ಬೆನ್ನಲ್ಲೇ ರಾಜ್ಯ ರಾಜಕೀಯದಲ್ಲಿ ಮಹತ್ವದ ಬೆಳವಣಿಯಾಗಿದ್ದು ಉಪ ಮುಖ್ಯಮಂತ್ರಿ ಪರಮೇಶ್ವರ್ ಮತ್ತು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಅವರು ಅತೃಪ್ತರ ಮನವೊಲಿಸಲು ಕೊನೆ ಕ್ಷಣದ ಕಸರತ್ತು ನಡೆಸಿದ್ದಾರೆ. ಮತ್ಪತೊಂದೆಡೆ ಪಕ್ಷದ ಮೂವರು ಶಾಸಕರು ರಾಜೀನಾಮೆ ನೀಡುತ್ತಿರುವುದರಿಂದ ಆಘಾತಕ್ಕೆ ಒಳಗಾಗಿರುವ ಜೆಡಿಎಸ್ ಪಕ್ಷದ ವರಿಷ್ಠ ಹೆಚ್.ಡಿ.ದೇವೇಗೌಡರು ಶಾಸಕರಿಗೆ ಬುಲಾವ್ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.