ತುಮಕೂರು: ಬೆಂಗಳೂರಿನಂತೆ ತುಮಕೂರನ್ನು ಜಾಗತಿಕ‌ಮಟ್ಟದ ನಗರವನ್ನಾಗಿ ತೆಗೆದುಕೊಂಡು ಹೋಗುವ ನಿಟ್ಟಿನಲ್ಲಿ ರಾಜ್ಯ ಸರಕಾರ ಹಲವು ಕಾರ್ಯಕ್ರಮವನ್ನು ಕೈಗೊಂಡಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ಹೇಳಿದರು


COMMERCIAL BREAK
SCROLL TO CONTINUE READING

ತುಮಕೂರು ಹಾಗೂ ಚಿತ್ರದುರ್ಗ ಜಿಲ್ಲೆಗಳ ಬೃಹತ್‌ ಉದ್ಯೋಗ ಮೇಳವನ್ನು ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಇನ್ನು ಐದು ವರ್ಷದಲ್ಲಿ ತುಮಕೂರು ಕೈಗಾರಿಕಾ ಕ್ಷೇತ್ರದಲ್ಲಿ ದೊಡ್ಡ ಜಿಲ್ಲೆಯಾಗಿ ತಲೆ ಎತ್ತಲಿದೆ. 16,500 ಎಕರೆ ಭೂಮಿಯಲ್ಲಿ ಕೈಗಾರಿಕಾ ಹಬ್ ನಿರ್ಮಾಣ ಮಾಡಲಾಗುತ್ತಿದ್ದು, ಸುಮಾರು 50 ಸಾವಿರ ಕೋಟಿ ರೂ. ಹೂಡಿಕೆಯಾಗುವ ನಿರೀಕ್ಷೆ ಇದೆ. 


ಕೇಂದ್ರ ಸರಕಾರ ಕೂಡ ಹಬ್ ನಿರ್ಮಾಣಕ್ಕೆ 1 ಸಾವಿರ ಕೋಟಿ ನೀಡಿದೆ. ಜೊತೆಗೆ ರಾಜ್ಯ ಸರಕಾರ ಬೆಂಗಳೂರಿನಿಂದ ತುಮಕೂರಿಗೆ ಮೆಟ್ರೋ ಲಿಂಕ್ ಅಥವಾ ಸಬ್ ಅರ್ಬನ್ ರೈಲು ಓಡಿಸಲು ತೀರ್ಮಾನಿಸಿದೆ. ಒಟ್ಟಾರೆ ಇನ್ನು ಐದು ವರ್ಷದಲ್ಲಿ ತುಮಕೂರು ಬೆಂಗಳೂರಿನಂತೆ ದೊಡ್ಡ ನಗರವಾಗಲಿದೆ ಎಂದರು.


ಹಿಂದಿನ‌ ಸಿದ್ದರಾಮಯ್ಯ ಅವರ ಸರಕಾರದಲ್ಲಿ ಕೌಶಲ್ಯಾಭಿವೃದ್ಧಿ ನಿಗಮದ ಮೂಲಕ 5 ಲಕ್ಷ ಮಕ್ಕಳಿಗೆ ವೃತ್ತಿ ಆಧಾರಿತ ತರಬೇತಿ ನೀಡಿದ್ದೆವು. ಇದರಲ್ಲಿ‌ ಶೇ.50 ರಷ್ಟು ಜನರಿಗೆ ಉದ್ಯೋಗ ಸಿಕ್ಕಿದೆ.‌ ಈಗಿನ‌ ಸಮ್ಮಿಶ್ರ ಸರಕಾರ ಕೂಡ ಈ ಕೆಲಸವನ್ನು ಮುಂದುವರೆಸಿಕೊಂಡು ಹೋಗಲಿದೆ ಎಂದರು.


ಇಂದು ತುಮಕೂರಿನಲ್ಲಿ ನಡೆಯುತ್ತಿರುವ ಉದ್ಯೋಗ ಮೇಳದಲ್ಲಿ ಈವರೆಗು 21 ಸಾವಿರ ಯುವಕ-ಯುವತಿಯರು ನೋಂದಣಿ ಮಾಡಿಕೊಂಡಿದ್ದಾರೆ. 106 ಪ್ರತಿಷ್ಠಿತ ಕಂಪನಿಗಳು ಕೂಡ ಆಗಮಿಸಿವೆ.‌ ಉದ್ಯೋಗ ಅರಸಿ ಬಂದ ಎಲ್ಲ ಯುವಕರಿಗೆ ಉದ್ಯೋಗ ಸಿಗುವಂತಾಗಲಿ. ಪ್ರತಿ ವರ್ಷ ಕರ್ನಾಟಕದಲ್ಲಿ 12 ಲಕ್ಷ ವಿದ್ಯಾರ್ಥಿಗಳು ತೇರ್ಗಡೆಗೊಂಡು ಕೆಲಸಕ್ಕಾಗಿ ಎದುರು ನೋಡುತ್ತಾರೆ.‌ಇವರಿಗೆ ಉದ್ಯೋಗ ಸೃಷ್ಟಿಸುವ ಕೆಲಸ ಆಗಬೇಕು. ಕೇಂದ್ರ ಸರಕಾರ ಕಳೆದ ಐದು ವರ್ಷದಲ್ಲಿ ನೀಡಿದ ಭರವಸೆಯಂತೆ ಉದ್ಯೋಗ ಸೃಷ್ಟಿ ಮಾಡಿಲ್ಲ. ಕೇಂದ್ರದ ಕೆಲ ನಿರ್ಧಾರದಿಂದ ಆರ್ಥಿಕ ವೇಗ ಕೂಡ ಕುಂಠಿತವಾಗಿದೆ ಎಂದು ಅವರು ಹೇಳಿದರು.