ಬೆಂಗಳೂರು: ಪ್ರಸ್ತುತ ಮುಖ್ಯ ಕಾರ್ಯದರ್ಶಿಗಳ ಅಧಿಕಾರಾವಧಿ ಈ ತಿಂಗಳ ಕೊನೆಗೆ ಮುಕ್ತಾಯಗೊಳ್ಳಲಿದ್ದು, ಮುಂದಿನ ಮುಖ್ಯ ಕಾರ್ಯದರ್ಶಿ ಹುದ್ದೆ ರೇಸ್ ನಲ್ಲಿ ಇಬ್ಬರು ಹಿರಿಯ ಐಎಎಸ್ ಅಧಿಕಾರಿಗಳ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಅದರಲ್ಲಿ ಒಬ್ಬರು ಮಹಿಳಾ ಅಧಿಕಾರಿಯಾದರೆ, ಮತ್ತೊಬ್ಬರು ಪುರುಷ ಅಧಿಕಾರಿಯಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕೃಪಾ ಕಟಾಕ್ಷ ಯಾರ ಮೇಲೆ ಬೀರಲಿದೆ ಎಂದು ಕಾದುನೋಡಬೇಕಿದೆ.


COMMERCIAL BREAK
SCROLL TO CONTINUE READING

ಯಾರಾಗಲಿದ್ದಾರೆ ಸರ್ಕಾರದ ಮುಂದಿನ ಮುಖ್ಯ ಕಾರ್ಯದರ್ಶಿ? ಎಂಬ ಕುತೂಹಲ ಎಲ್ಲರಲ್ಲೂ ಮೂಡಿದೆ. ಪ್ರಸ್ತುತ ಮುಖ್ಯ ಕಾರ್ಯದರ್ಶಿಯಾಗಿರುವ ಸುಭಾಶ್ ಚಂದ್ರ ಕುಂಟಿಯಾ ಅವರ ಅವಧಿ ನ. 31ಕ್ಕೆ ಕೊನೆಯಾಗಲಿದ್ದು, ಕುಂಟಿಯಾ ಅವಧಿ ಮತ್ತೆ ಮೂರು ತಿಂಗಳು ಮುಂದೂಡ್ತಾರಾ? ಅಥವಾ ನೂತನ ಮುಖ್ಯ ಕಾರ್ಯದರ್ಶಿಯನ್ನು ಆಯ್ಕೆ ಮಾಡುತ್ತಾರಾ ಎಂಬುದು ಇನ್ನೂ ರಹಸ್ಯವಾಗಿಯೇ ಉಳಿದಿದೆ. 


1981ರ ಬ್ಯಾಚ್ ನ ಐಎಎಸ್ ಅಧಿಕಾರಿ ರತ್ನಪ್ರಭಾ ಹಾಗೂ 1983ರ ಬ್ಯಾಚ್ ನ ಅಧಿಕಾರಿ ಟಿ.ಎಂ.ವಿಜಯ ಭಾಸ್ಕರ್ ನಡುವೆ ಮುಖ್ಯ ಕಾರ್ಯದರ್ಶಿ ಹುದ್ದೆಗಾಗಿ ತೀವ್ರ ಪೈಪೋಟಿ ಏರ್ಪಟ್ಟಿದ್ದು ರತ್ನ ಪ್ರಭಾ ಪರವಾಗಿ ಕೆಲ ದಲಿಗ್ತಾ ನಾಯಕರು ಲಾಭಿ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ. ಕೆ. ರತ್ನಪ್ರಭಾ ದಲಿತ ವರ್ಗಕ್ಕೆ ಸೇರಿದವರಾಗಿದ್ದು, ಈ ಹಿಂದೆ 2016ರಲ್ಲೂ ರತ್ನಪ್ರಭಾ ಹೆಸರು ಮುಂಚೂಣಿಯಲ್ಲಿತ್ತು. ಕೊನೆ ಕ್ಷಣದಲ್ಲಿ ಸಿಎಂ ಸುಭಾಷ್ ಚಂದ್ರ ಕುಂಟಿಯಾ ಅವರನ್ನು ನೇಮಕ ಮಾಡಿದ್ದರು. ಈಗ ಚುನಾವಣೆ ಹತ್ತಿರವಾಗುತ್ತಿರುವುದರಿಂದ, ಸಿಎಂ ಅಹಿಂದಾ ಬಳಗಕ್ಕೆ ಸದಾ ಬೆಂಬಲ ನೀಡುವುದರಿಂದ ರತ್ನಪ್ರಭಾ ಅವರನ್ನೇ ಮುಖ್ಯಕಾರ್ಯದರ್ಶಿಯಾಗಿ ಪರಿಗಣಿಸುವ ಸಾಧ್ಯತೆ ಇದೆ.


ಈ ನಡುವೆ ರತ್ನಪ್ರಭಾ ಅವರ ಅಧಿಕಾರವಧಿ 2018ಕ್ಕೆ ಕೊನೆಗೊಳ್ಳಲಿದ್ದು, ವಿಜಯ ಭಾಸ್ಕರ್ ಅವರ ಅಧಿಕಾರವಧಿಯು 2020ಕ್ಕೆ ಕೊನೆಗೊಳ್ಳಲಿದೆ. ಒಂದುವೇಳೆ ರತ್ನಪ್ರಭಾ ಮುಖ್ಯ ಕಾರ್ಯದರ್ಶಿ ಆಗಿ ಆಯ್ಕೆಗೊಂಡರೆ ರಾಜ್ಯದ ಮೂರನೇ ಮಹಿಳಾ ಮುಖ್ಯಕಾರ್ಯದರ್ಶಿ ಎಂಬ ಹೆಗ್ಗಳಿಕೆಗೆ ಪಾತ್ರರಾಗುತ್ತಾರೆ.


ಡಿಜಿಪಿ ನೇಮಕದಲ್ಲೂ ಮಹಿಳಾ ಅಧಿಕಾರಿಗೆ ಮಣೆ ಹಾಕಿದ್ದ ಸಿಎಂ, ಮುಖ್ಯ ಕಾರ್ಯದರ್ಶಿ ನೇಮಕದ ವಿಚಾರದಲ್ಲೂ ಅದೇ ರೀತಿ ತೀರ್ಮಾನ ಕೈಗೊಳ್ಳುವರೆ ಎಂಬುದು ಕುತೂಹಲ ಮೂಡಿಸಿದೆ.