ಉಡುಪಿ: ಉಡುಪಿಯ ಅಷ್ಠಮಠಗಳಲ್ಲಿ ಒಂದಾಗಿರುವ ಶಿರೂರು ಮಠದ 30ನೇ ಶ್ರೀಗಳಾದ ಲಕ್ಷ್ಮೀವರತೀರ್ಥ ಸ್ವಾಮೀಜಿಯವರು ಇಂದು ಬೆಳಿಗ್ಗೆ ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ. ಈ ಮೂಲಕ ಶ್ರೀಗಳು ಅಪಾರ ಭಕ್ತವೃಂದವನ್ನು ಅಗಲಿದ್ದಾರೆ.


COMMERCIAL BREAK
SCROLL TO CONTINUE READING

ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಿಗ್ಗೆ ಮೃತಪಟ್ಟಿದ್ದಾರೆ. ಮೂರು ಪರ್ಯಾಯ ಪೂರೈಸಿದ್ದ ಶಿರೂರು ಸ್ವಾಮಿಜಿಗಳಿಗೆ 55 ವರ್ಷ ವಯಸ್ಸಾಗಿತ್ತು.


ಇತ್ತೀಚೆಗೆ ಕರ್ನಾಟಕ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ಶ್ರೀಗಳವರು ಉಡುಪಿ ವಿಧಾನಸಭಾ ಕ್ಷೇತ್ರದಿಂದ ಭಾರತೀಯ ಜನತಾ ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಆ ಪಕ್ಷದಿಂದ ಟಿಕೆಟ್ ಸಿಗದೇ ಇದ್ದಾಗ ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು. ಆದರೆ ಬಳಿಕ ನಾಮಪತ್ರ ಹಿಂಪಡೆದು ಸ್ಪರ್ಧೆಯಿಂದ ಸರಿದಿದ್ದರು. 


ಉಡುಪಿಯ ಅಷ್ಠಮಠಾಧೀಶರಲ್ಲಿಯೇ ವಿಶಿಷ್ಠವಾಗಿದ್ದ ವ್ಯಕ್ತಿತ್ವವನ್ನು ಹೊಂದಿದ್ದ ಲಕ್ಷ್ಮೀವರತೀರ್ಥ ಶ್ರೀಪಾದರು ಬಹುಮುಖ ವ್ಯಕ್ತಿತ್ವವನ್ನು ಹೊಂದಿದವರು. ಉತ್ತಮ ಈಜುಪಟುವಾಗಿದ್ದ ಶ್ರೀಗಳವರು ಈ ಹಿಂದೆ ಗೋಪಾಲ ಖಾರ್ವಿ ಅವರು ಮಲ್ಪೆ ಸಮುದ್ರದಲ್ಲಿ ಗಿನ್ನೆಸ್ ರೆಕಾರ್ಡ್ ನಿರ್ಮಿಸುವ ಉದ್ದೇಶದಿಂದ ಮ್ಯಾರಥಾನ್ ಈಜಿನ ಸಂದರ್ಭದಲ್ಲಿ ಶ್ರೀಗಳವರೂ ಸಹ ಕೆಲವು ಕಿಲೋಮೀಟರುಗಳಷ್ಟು ದೂರ ಸಮುದ್ರದಲ್ಲಿ ಈಜಿ ತಾವೊಬ್ಬ ಉತ್ತಮ ಈಜುಪಟು ಎಂಬುದನ್ನು ನಿರೂಪಿಸಿದ್ದರು.