KSOU ಗೆ ಕೊನೆಗೂ ಸಿಕ್ತು ಯುಜಿಸಿ ಮಾನ್ಯತೆ
ಮೈಸೂರಿನ ಕರ್ನಾಟಕ ಮುಕ್ತ ವಿಶ್ವ ವಿಶ್ವವಿದ್ಯಾಲಯ ಗೊಂದಲಕ್ಕೆ ತೆರೆ. ಪ್ರಸಕ್ತ ಶೈಕ್ಷಣಿಕ ಸಾಲಿಗೆ ವಿದ್ಯಾರ್ಥಿಗಳ ಪ್ರವೇಶಕ್ಕೆ ಅನುಮತಿ.
ಬೆಂಗಳೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ(KSOU)ಕ್ಕೆ ಕೊನೆಗೂ ಮಾನ್ಯತೆ ಸಿಕ್ಕಿದ್ದು, ಮೂರು ವರ್ಷಗಳಿಂದ ನೆನೆಗುದಿಗೆಗೆ ಬಿದ್ದದ್ದ ಕರ್ನಾಟಕ ಮುಕ್ತ ವಿಶ್ವ ವಿಶ್ವವಿದ್ಯಾಲಯ ಗೊಂದಲಕ್ಕೆ ತೆರೆ ಎಳೆದಂತಾಗಿದೆ.
ದೆಹಲಿಯಲ್ಲಿ ಯುಜಿಸಿ ಅಧ್ಯಕ್ಷ ಪ್ರೊ. ಡಿ.ಪಿ. ಸಿಂಗ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕರ್ನಾಟಕ ಮುಕ್ತ ವಿವಿಗೆ ಮಾನ್ಯತೆ ನೀಡಲು ಒಪ್ಪಿಗೆ ಸೂಚಿಸಲಾಯಿತು. ಈಗ ಯುಜಿಸಿ 2018-19ನೇ ಸಾಲಿನಿಂದಲೇ ಅನ್ವಯವಾಗುವಂತೆ ಆಯ್ದ 17 ಕೋರ್ಸ್‌ಗಳ ಪ್ರವೇಶಕ್ಕೆ ಅನುಮತಿ ನೀಡಿದೆ. ಮುಕ್ತ ವಿವಿ 2018-19ರಿಂದ 2022-23ರವರೆಗೆ ತಾಂತ್ರಿಕೇತರ ಕೋರ್ಸ್ಗಳಿಗೆ ವಿಶ್ವವಿದ್ಯಾಲಯಗಳ ಧನಸಹಾಯ ಆಯೋಗವು ಮಾನ್ಯತೆಯನ್ನು ನವೀಕರಣ ಮಾಡಿ ಗುರುವಾರ ಆದೇಶ ಹೊರಡಿಸಿದೆ. ಒಂದೇ ಬಾರಿಗೆ ಐದು ವರ್ಷ ಮಾನ್ಯತೆಯನ್ನು ಕರುಣಿಸಿ ಮಹತ್ವದ ಆದೇಶ ನೀಡಿದೆ. ಈ ಮೂಲಕ ಮುಕ್ತ ವಿವಿ ಬಗ್ಗೆ ಇದ್ದ ಗೊಂದಲ ಬಗೆ ಹರಿದಿದೆ.
2012-13ನೇ ಸಾಲಿನ ಬಳಿಕ ಮುಕ್ತ ವಿವಿಯ ಮಾನ್ಯತೆಯನ್ನು ಯುಜಿಸಿ ನವೀಕರಿಸಿರಲಿಲ್ಲ. ಇಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳ ಪದವಿಗಳು ಅಮಾನ್ಯಗೊಂಡಿದ್ದವು. ಇದರಿಂದ ಸುಮಾರು ಒಂದು ಲಕ್ಷ ವಿದ್ಯಾರ್ಥಿಗಳ ಭವಿಷ್ಯ ಕತ್ತಲೆಗೆ ಸಿಲುಕಿತ್ತು. ನೂರಾರು ಮಂದಿ ಉದ್ಯೋಗ ಕಳೆದುಕೊಳ್ಳುವಂತಾಗಿತ್ತು. ಈಗ ಮಾನ್ಯತೆ ನವೀಕರಣವಾಗಿರುವುದರಿಂದ ಹೊಸ ವಿದ್ಯಾರ್ಥಿಗಳ ಪ್ರವೇಶಾತಿಗೆ ಮುಕ್ತ ವಿವಿಗೆ ಅವಕಾಶ ದೊರೆಯಲಿದೆ. ಆದರೆ, 3 ಲಕ್ಷದಷ್ಟು ಇರುವ ಹಳೇ ವಿದ್ಯಾರ್ಥಿಗಳ ಗತಿ ಏನು ಎನ್ನುವುದು ಈಗಲೂ ಪ್ರಶ್ನೆಯಾಗಿಯೇ ಉಳಿದಿದೆ.
ಕರ್ನಾಟಕ ಮುಕ್ತ ವಿ.ವಿ ಯುಜಿಸಿ ಮಾನ್ಯತೆಗಾಗೆ ಪಟ್ಟು ಹಿಡಿದು ನವದೆಹಲಿಯಲ್ಲೇ ಜಾಂಢಾ ಹೂಡಿದ್ದ ಶಾಸಕ ಎಸ್.ಎ. ರಾಮದಾಸ್ ಕುಲಪತಿ ಪ್ರೊ.ಡಿ.ಶಿವಲಿಂಗಯ್ಯ ಜೊತೆ ಯುಜಿಸಿ ಚೇರ್ಮನ್ ಅವರನ್ನು ಭೇಟಿ ಯಾಗಿ ಯುಜಿಸಿ ಮಾನ್ಯತೆ ಸಂಬಂಧ ಅಗತ್ಯ ದಾಖಲೆಗಳನ್ನು ಒದಗಿಸಿದ್ದರು. ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವಡೇಕರ್ ಮಧ್ಯ ಪ್ರವೇಶದಿಂದಾಗಿ ಕೆಎಸ್ಒಯು ಗೆ ಮತ್ತೆ ಯುಜಿಸಿ ಮಾನ್ಯತೆ ದೊರೆತಿದೆ ಎಂದು ಮೂಲಗಳು ತಿಳಿಸಿವೆ.