ಬಿಜೆಪಿ ಅಧ್ಯಕ್ಷ ನಡ್ಡ ಭೇಟಿ ಮಾಡಿದ ಕತ್ತಿ, ಇಂದು ಶಾ ಭೇಟಿ
ಎಂಟನೇ ಬಾರಿಗೆ ಶಾಸಕನಾಗಿರುವ ಉಮೇಶ್ ಕತ್ತಿ ತನಗೆ ಮಂತ್ರಿ ಸ್ಥಾನ ಕೊಡಲೇಬೇಕೆಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬಳಿ ಕೇಳಿದ್ದರು.
ನವದೆಹಲಿ: ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿರುವ ಹಿರಿಯ ಶಾಸಕ ಉಮೇಶ್ ಕತ್ತಿ ಬುಧವಾರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡ ಅವರನ್ನು ಭೇಟಿ ಮಾಡಿ ತಮಗೆ ಸಚಿವ ಸ್ಥಾನವನ್ನು ನೀಡಲೇಬೇಕೆಂಬ ಪಟ್ಟನ್ನು ಪ್ರತಿಪಾದಿಸಿದ್ದಾರೆ.
ಎಂಟನೇ ಬಾರಿಗೆ ಶಾಸಕನಾಗಿರುವ ಉಮೇಶ್ ಕತ್ತಿ ತನಗೆ ಮಂತ್ರಿ ಸ್ಥಾನ ಕೊಡಲೇಬೇಕೆಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬಳಿ ಕೇಳಿದ್ದರು. ಪರಿಣಾಮವಾಗಿ ವಲಸಿಗರು ಸಚಿವರಾದ ಸಮಯದಲ್ಲೇ ಉಮೇಶ್ ಕತ್ತಿ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಬೇಕಿತ್ತು. ಕೊನೆ ಕ್ಷಣದಲ್ಲಿ ಉಮೇಶ್ ಕತ್ತಿ ಪ್ರಮಾಣ ವಚನ ಸ್ವೀಕಾರಕ್ಕೆ ತಡೆ ನೀಡಲಾಗಿತ್ತು. ಇದರಿಂದ ಬೇಸರಗೊಂಡಿರುವ ಉಮೇಶ್ ಕತ್ತಿ, ತಮಗೆ ಮಂತ್ರಿ ಸ್ಥಾನ ತಡೆಹಿಡಿದಿರುವ ಕಾರಣ ತಿಳಿಯಲು ಮತ್ತು ಸಚಿವ ಸ್ಥಾನವನ್ನು ಪಡೆಯಲು ದೆಹಲಿಗೆ ಬಂದಿದ್ದಾರೆ.
ದೆಹಲಿಯಲ್ಲಿ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿ ತನ್ನ ಹಿರಿತನ ಪರಿಗಣಿಸುವಂತೆ ಕೇಳಲಿದ್ದಾರೆ ಮತ್ತು ಹೈಕಮಾಂಡ್ ಮೂಲಕವೇ ಯಡಿಯೂರಪ್ಪ ಅವರಿಗೆ ಒತ್ತಡ ಹೇರಲಿದ್ದಾರೆ ಎಂದು ಹೇಳಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡ ಅವರನ್ನು ಭೇಟಿ ಮಾಡಿದ್ದ ಉಮೇಶ್ ಕತ್ತಿ ಗುರುವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿ ಅವರನ್ನೂ ಭೇಟಿ ಮಾಡಲಿದ್ದಾರೆ.
ಇದಲ್ಲದೆ ಸಚಿವ ಸ್ಥಾನ ಪಡೆದೇ ತೀರಲು ಪಣ ತೊಟ್ಟಿರುವ ಉಮೇಶ್ ಕತ್ತಿ ಈಗ ಹೊಸ ವರಸೆ ಆರಂಭಿಸಿದ್ದಾರೆ. ತಮ್ಮ ಸಹೋದರ ರಮೇಶ್ ಕತ್ತಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಕ್ಷೇತ್ರ ಬಿಟ್ಟುಕೊಟ್ಟಿದ್ದರು. ಹಾಗಾಗಿ ಈಗ ರಾಜ್ಯದಿಂದ ಖಾಲಿಯಾಗುವ ರಾಜ್ಯಸಭಾ ಸ್ಥಾನವನ್ನು ರಮೇಶ್ ಕತ್ತಿಗೆ ಕೊಡಿ ಎಂದು ಕೇಳುತ್ತಿದ್ದಾರೆ. ಕ್ಷೇತ್ರ ಬಿಟ್ಟುಕೊಟ್ಟ ಕಾರಣಕ್ಕಾಗಿ ಸಹೋದರನಿಗೆ ರಾಜ್ಯಸಭಾ ಸ್ಥಾನ ಕೊಡಿ ಅಂತಾ ಕೇಳಿದರೆ ತನಗೆ ಮಂತ್ರಿ ಸ್ಥಾನವಾದರೂ ಸಿಕ್ಕೇ ಸಿಗುತ್ತದೆ ಎಂಬುದು ಉಮೇಶ್ ಕತ್ತಿ ಲೆಕ್ಕಾಚಾರವಾಗಿದೆ ಎನ್ನಲಾಗಿದೆ.
ಈ ನಡುವೆ ದೆಹಲಿಯ ಕರ್ನಾಟಕ ಭವನದಲ್ಲಿ ಸಚಿವಾಕಾಂಕ್ಷಿ ಉಮೇಶ್ ಕತ್ತಿ ಮತ್ತು ನೂತನ ಸಚಿವ ರಮೇಶ್ ಜಾರಕಿಹೊಳಿ ಭೇಟಿಯಾಗಿ ಚರ್ಚೆ ನಡೆಸಿದರು. ಇನ್ನೋರ್ವ ಸಚಿವಾಕಾಂಕ್ಷಿ ಸಿ.ಪಿ. ಯೋಗೇಶ್ವರ್ ಕೂಡ ದೆಹಲಿಗೆ ಆಗಮಿಸಿದ್ದು ಹೈಕಮಾಂಡ್ ನಾಯಕರ ಭೇಟಿಗಾಗಿ ಪ್ರಯತ್ನಿಸುತ್ತಿದ್ದಾರೆ.