ಧಾರವಾಡ: ಧಾರವಾಡದಲ್ಲಿ ಮಂಗಳವಾರ ಸಂಭವಿಸಿದ ನಿರ್ಮಾಣ ಹಂತದ ಕಟ್ಟಡ ಕುಸಿತ ಪ್ರಕರಣದಲ್ಲಿ ಸಾವನ್ನಪ್ಪಿದವರ ಸಂಖ್ಯೆ 8ಕ್ಕೆ ಏರಿಕೆಯಾಗಿದೆ. ಸತತ 38 ಗಂಟೆಗಳ ಕಾರ್ಯಾಚರಣೆ ಬಳಿಕ ಎನ್ ಡಿ ಆರ್ ಎಫ್ ತಂಡ ಅವಶೇಷಗಳಡಿ ಸಿಲುಕಿದ್ದ ಇಬ್ಬರನ್ನು ರಕ್ಷಿಸಿದ್ದಾರೆ. 


COMMERCIAL BREAK
SCROLL TO CONTINUE READING

ಕಟ್ಟಡದ ಅವಶೇಷಗಳಡಿ ಸಿಲುಕಿದ್ದ ಪ್ರೇಮಾ ಉಣಕಲ್(38), ನಬಿಸಾಬ(45) ಎಂಬವರನ್ನು ರಕ್ಷಣೆ ಮಾಡಲಾಗಿದ್ದು, ಈವರೆಗೆ 60 ಜನರನ್ನು ಸುರಕ್ಷಿತವಾಗಿ ಕರೆತರಲಾಗಿದೆ.


ನಗರದ ಕುಮಾರೇಶ್ವರ ನಗರದಲ್ಲಿರುವ ನಿರ್ಮಾಣ ಹಂತದ 5 ಅಂತಸ್ತಿನ ಕಟ್ಟಡ ಕುಸಿದು ಪರಿಣಾಮ ಇದುವರೆಗೂ ಸುಮಾರು 50 ಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದ್ದು, ಇನ್ನೂ ಹಲವರು ಅವಶೇಷಗಳಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಸತತ ಮೂರನೇ ದಿನವೂ ರಕ್ಷಣಾ ಕಾರ್ಯ ಮುಂದುವರೆದಿದೆ. 150 ಪೊಲೀಸ್ ಸಿಬ್ಬಂದಿಗಳು, ಅಗ್ನಿಶಾಮಕ, ತುರ್ತು ಪರಿಸ್ಥಿತಿ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಅಗ್ನಿಶಾಮಕ ಹಾಗೂ ತುರ್ತು ಸೇವೆಗಳ ವಿಭಾಗದ ಮುಖ್ಯಸ್ಥರಾಗಿರುವ ಎಂಎನ್ ರೆಡ್ಡಿ ಹೇಳಿದ್ದಾರೆ.


ಧಾರವಾಡದ ಹೊಸ ಬಸ್ ನಿಲ್ದಾಣದ ಬಳಿ ಇದ್ದ ಐದು ಅಂತಸ್ತಿನ ಬೃಹತ್ ಕಾಂಪ್ಲೆಕ್ಸ್ ನ ನಾಲ್ಕು ಮತ್ತು ಐದನೇ ಅಂತಸ್ತಿನಲ್ಲಿ ನಿರ್ಮಾಣ ಕಾರ್ಯ ನಡೆಯುತ್ತಿತ್ತು ಎನ್ನಲಾಗಿದೆ. ಈ ಕಾಂಪ್ಲೆಕ್ಸ್ ನಲ್ಲಿ ಮೆಡಿಕಲ್ ಸ್ಟೋರ್, ಹೋಟೆಲ್, ಬಾರ್ಬರ್ ಶಾಪ್ ಸೇರಿದಂತೆ ಅನೇಕ ವಾಣಿಜ್ಯ ಮಳಿಗೆಗಳಿದ್ದವು ಎನ್ನಲಾಗಿದೆ. ಕಟ್ಟಡ ಕುಸಿದ ಸಂದರ್ಭದಲ್ಲಿ ಸುಮಾರು 80 ಮಂದಿ ಸ್ಥಳದಲ್ಲಿದ್ದರು ಎಂದು ಹೇಳಲಾಗಿದೆ.