ಬೆಂಗಳೂರು: ಒಂದು ಕಾಲದಲ್ಲಿ ಬೆಂಗಳೂರು, ಮುಂಬೈಗಳನ್ನು ನಡುಗಿಸಿದ್ದ ಇತ್ತೀಚೆಗೆ ಕ್ಯಾನ್ಸರ್ ಕಾಯಿಲೆಯಿಂದ ನಲುಗಿಹೋಗಿದ್ದ ಭೂಗತಲೋಕದ ಮಾಜಿ ದೊರೆ ಮುತ್ತಪ್ಪ ರೈ ಕೊನೆಯುಸಿರೆಳೆದಿದ್ದಾರೆ. ನಾಲ್ಕೈದು ದಿನಗಳಿಂದಲೇ ಮುತ್ತಪ್ಪ ರೈ ಇನ್ನಿಲ್ಲ ಎಂಬ ವದಂತಿ ಹರಡಿತ್ತು‌. ಈಗ ಅಧಿಕೃತವಾಗಿ ಅವರ ಸಾವಿರ ಸುದ್ದಿ ಹೊರಬಿದ್ದಿದೆ.


COMMERCIAL BREAK
SCROLL TO CONTINUE READING

‌ಇತ್ತೀಚೆಗೆ ಅವರು ಮಾದ್ಯಮ ಗೋಷ್ಠಿ ಉದ್ದೇಶಿಸಿ ಮಾತನಾಡುತ್ತಾ 'ನನಗೆ ಕ್ಯಾನ್ಸರ್ ಇರುವುದು ನಿಜ. ಬದುಕುಳಿದಿರುವ ಮಿರಾಕಲ್ ನಡೆಯುತ್ತಿರುವುದು ನನ್ನ ವಿಲ್​ ಪವರ್​ನಿಂದ ಮಾತ್ರ. ನನ್ನ ಟಿಕೆಟ್ ಯಾವಾಗಲೋ ಕನ್ಫರ್ಮ್ ಆಗಿದೆ. ಟಿಕೆಟ್ ಕನ್ಫರ್ಮ್ ಆದ ಮೇಲೆ ಫ್ಲೈಟ್ ಹತ್ತಬೇಕು ಅಷ್ಟೇ. ಎಂದು ಹೇಳಿದ್ದರು. ಇಂದು ಬೆಳಿಗ್ಗೆ ಅವರ ಜೀವನ ಪ್ರಯಾಣ ಮುಗಿದಿದೆ. ಜೊತೆಗೆ ಕ್ಯಾನ್ಸರ್​ವಿರುದ್ಧದ ಅವರ ಹೋರಾಟವು ಕೂಡ ಕೊನೆಗೊಂಡಿದೆ. 


ಮುತ್ತಪ್ಪ ರೈ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ನೆಟ್ಟಾಲ ನಾರಾಯಣ ರೈ ಮತ್ತು ಸುಶೀಲಾ ರೈ ದಂಪತಿಗಳ ಪುತ್ರ. ಬಂಟ ಸಮುದಾಯದಕ್ಕೆ ಸೇರಿದ ಮುತ್ತಪ್ಪ ರೈ ಅವರ ಮನೆ ಮಾತು ತುಳು. 
ರೇಖಾ ಅವರನ್ನು ಮದುವೆಯಾದ ಮುತ್ತಪ್ಪ ರೈ ಅವರಿಗೆ ರಾಕಿ ಮತ್ತು ರಿಕ್ಕಿ ಎಂಬ ಇಬ್ಬರು ಮಕ್ಕಳಿದ್ದಾರೆ. 2013ರಲ್ಲಿ ಇವರ ಪತ್ನಿ ರೇಖಾ ಅವರು ಅನಾರೋಗ್ಯದಿಂದ ಸಿಂಗಾಪುರದ ಎಲಿಜಬೆತ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು. ಇದೀಗ ಕ್ಯಾನ್ಸರ್​ನಿಂದಾಗಿ ಮುತ್ತಪ್ಪ ರೈ ಅವರು ಇಹಲೋಕ ತ್ಯಜಿಸಿದ್ದಾರೆ.


ಮುತ್ತಪ್ಪ ರೈ ಬೆಂಗಳೂರಿನ ಮಣಿಪಾಲ್​ ಆಸ್ಪತ್ರೆಯಲ್ಲಿ ಮೃತರಾಗಿದ್ದು ಅವರ ಅಂತ್ಯಕ್ರಿಯೆಯನ್ನು ಬಿಡದಿಯ ಮುತ್ತಪ್ಪ ರೈ ಜಮೀನಿನಲ್ಲಿ ಬಂಟ ಸಮುದಾಯದ ಸಂಪ್ರದಾಯದ ರೀತಿ ನೆರವೇರಿಸಲಾಗುತ್ತದೆ‌. ಆದುದರಿಂದ ಮೃತದೇಹವನ್ನು ಬೆಂಗಳೂರಿನ ಮಣಿಪಾಲ್​ ಆಸ್ಪತ್ರೆಯಿಂದ ಬಿಡದಿಯ ಮನೆಗೆ ಸಾಗಿಸಲಾಗಿದೆ‌.