ಪ್ರವಾಹ ಪೀಡಿತ ಕೊಡಗಿಗೆ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಭೇಟಿ
ಕೊಡಗು ಜಿಲ್ಲೆಯ ಮರುಸ್ಥಾಪನೆಗೆ ಮತ್ತು ಜನರ ಶ್ರೇಯೋಭಿವೃದ್ಧಿಗೆ ಕೇಂದ್ರ ಸರ್ಕಾರ ಸದಾ ಬದ್ಧವಾಗಿರಲಿದೆ ಎಂದು ನಿರ್ಮಲಾ ಸೀತಾರಾಮನ್ ಭರವಸೆ ನೀಡಿದರು.
ಕೊಡಗು: ಭಾರೀ ಮಳೆಯಿಂದ ತತ್ತರಿಸಿ ಭೀಕರ ಪ್ರವಾಹ ಎದುರಿಸುತ್ತಿರುವ ಕೊಡಗು ಜಿಲ್ಲೆಗೆ ಇಂದು ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಸೋಮವಾರಪೇಟೆಯ ಮಾದಾಪುರದ ಬಳಿ ಪ್ರವಾಹದಿಂದ ಹಾನಿಗೊಳಗಾದ ಪ್ರದೇಶಗಳ ವೀಕ್ಷಣೆ ನಡೆಸಿದ ಅವರು, ಪ್ರವಾಹ ಸಂತ್ರಸ್ತರ ಸಮಸ್ಯೆಗಳನ್ನು ಆಲಿಸಿದರು. ನಂತರ ಮಾತನಾಡಿದ ಅವರು, ಕೊಡಗಿನಲ್ಲಿ ಪ್ರವಾಹದಿಂದ ಉಂಟಾಗಿರುವ ಹಾನಿ ಬಗ್ಗೆ ಪರಿಶೀಲಿಸಿ ರಸ್ತೆಗಳು, ಮನೆಗಳು, ಕಟ್ಟಡಗಳು, ನೀರು ಮತ್ತು ವಿದ್ಯುತ್ ಸಂಪರ್ಕಗಳ ಮರುಸ್ಥಾಪನೆಗೆ ಸೇನಾ ಪಡೆ ಕಾರ್ಯನಿರ್ವಹಿಸಲಿದೆ. ವಾಯುಪಡೆ ಸಹ ಈ ಕಾರ್ಯಕ್ಕೆ ಸಹಾಯ ಮಾಡಲಿದೆ. ಕೊಡಗು ಜಿಲ್ಲೆಯ ಮರುಸ್ಥಾಪನೆಗೆ ಮತ್ತು ಜನರ ಶ್ರೇಯೋಭಿವೃದ್ಧಿಗೆ ಕೇಂದ್ರ ಸರ್ಕಾರ ಸದಾ ಬದ್ಧವಾಗಿರಲಿದೆ ಎಂದು ನಿರ್ಮಲಾ ಸೀತಾರಾಮನ್ ಭರವಸೆ ನೀಡಿದರು.
ಕೊಡಗು ಜಿಲ್ಲಾಧಿಕಾರಿ ಶ್ರೀವಿದ್ಯಾ, ಸಂಸದ ಪ್ರತಾಪ್ ಸಿಂಹ, ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ಕೆಲ ಅಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.