ಇಂದು ಮಂಗಳೂರಿಗೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್
ಮಂಗಳೂರಿನ ಕೇಂದ್ರ ಮೈದಾನದಲ್ಲಿ ಶನಿವಾರ ಬೆಳಿಗ್ಗೆ 11 ಗಂಟೆಗೆ ನಡೆಯಲಿರುವ ಬಿಜೆಪಿ ಕ್ಲಸ್ಟರ್ ಮಟ್ಟದ ಕಾರ್ಯಕರ್ತರ ಸಮಾವೇಶದಲ್ಲಿ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಭಾಗವಹಿಸಲಿದ್ದಾರೆ.
ಮಂಗಳೂರು: ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಇಂದು ಮಂಗಳೂರಿಗೆ ಆಗಮಿಸಿ ಬಿಜೆಪಿ ಕಾರ್ಯಕರ್ತರೊಂದಿಗೆ ಚರ್ಚೆ ನಡೆಸಲಿದ್ದಾರೆ. ಚುನಾವಣಾ ಪೂರ್ವ ತಯಾರಿ ಹಿನ್ನೆಲೆಯಲ್ಲಿ ರಾಜನಾಥ್ ಸಿಂಗ್ ಭೇಟಿ ನೀಡುತ್ತಿರುವುದು ಭಾರೀ ಮಹತ್ವ ಪಡೆದುಕೊಂಡಿದೆ.
ಮಂಗಳೂರಿನ ಕೇಂದ್ರ ಮೈದಾನದಲ್ಲಿ ಶನಿವಾರ ಬೆಳಿಗ್ಗೆ 11 ಗಂಟೆಗೆ ನಡೆಯಲಿರುವ ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳನ್ನೊಳಗೊಂಡ ಬಿಜೆಪಿ ಕ್ಲಸ್ಟರ್ ಮಟ್ಟದ ಕಾರ್ಯಕರ್ತರ ಸಮಾವೇಶದಲ್ಲಿ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಭಾಗವಹಿಸಲಿದ್ದಾರೆ. ಶಕ್ತಿಕೇಂದ್ರ, ಮಹಾ ಶಕ್ತಿಕೇಂದ್ರ, ಮಂಡಲಗಳ ಪದಾಧಿಕಾರಿಗಳು, ಜಿಲ್ಲಾ ಮಟ್ಟದ ಬಿಜೆಪಿ ಮುಖಂಡರು ಭಾಗವಹಿಸಲಿದ್ದಾರೆ. ಸುಮಾರು 8ರಿಂದ 10 ಸಾವಿರ ಮಂದಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹಾಗೂ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಸಂಜೆ 3.30ಕ್ಕೆ ನಗರದ ಟಿ.ಎಂ.ಎ.ಪೈ ಅಂತಾರಾಷ್ಟ್ರೀಯ ಕನ್ವೆನ್ಶನ್ ಸೆಂಟರ್‌ನಲ್ಲಿ ನಡೆಯಲಿರುವ ಚಿಂತಕರ ಸಮಾವೇಶದಲ್ಲಿ ಭಾಗವಹಿಸಲಿರುವ ರಾಜನಾಥ್ ಸಿಂಗ್ ಅವರು ಉದ್ಯಮಿಗಳು, ವೈದ್ಯರು, ಬುದ್ಧಿ ಜೀವಿಗಳೊಂದಿಗೆ ಸಂವಾದ ನಡೆಸಲಿದ್ದಾರೆ. ಬಳಿಕ ಸಂಜೆ 7 ಗಂಟೆಗೆ ದೆಹಲಿಗೆ ಮರಳಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.