ನವದೆಹಲಿ: ರಾಜ್ಯದ ಜನಪ್ರಿಯ ಕವಿ ಫ್ರೊ. ಕೆ.ಎಸ್. ನಿಸಾರ್ ಅಹ್ಮದ್ ಅವರ ನಿಧನಕ್ಕೆ ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರ ಸಚಿವ ಡಿ.ವಿ. ಸದಾನಂದಗೌಡ ಸಂತಾಪ ಸೂಚಿಸಿದ್ದಾರೆ.


COMMERCIAL BREAK
SCROLL TO CONTINUE READING

ಸಂತಾಪ ಸೂಚಿಸಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ‌ ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ, “ನಿತ್ಯೋತ್ಸವ ಕವಿ ಡಾ ನಿಸಾರ್‌ ಅಹ್ಮದ್‌ ಅವರ ಅಗಲಿಕೆಯು ಕನ್ನಡ ಸಾರಸ್ವತ ಲೋಕದಲ್ಲಿ ದೊಡ್ಡ ಶೂನ್ಯ ಸೃಷ್ಟಿಸಿದೆ, ಅವರ ಆತ್ಮಕ್ಕೆ ಚಿರಶಾಂತಿ ದೊರೆಯಲಿ, ಭಗವಂತನು ಅವರ ಕುಟುಂಬಕ್ಕೆ, ಬಂಧು ಬಳಗದವರಿಗೆ, ಅಪಾರ ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿನೀಡಲಿ” ಎಂದು ತಿಳಿಸಿದ್ದಾರೆ.



“ಜೋಗದ ಸಿರಿ ಬೆಳಕಿನಲ್ಲಿ....” ಎಂಬ ಕವಿತೆಯೊಂದಿಗೆ ನಿಸಾರ್‌ ಅಹ್ಮದ್ ಅವರು ಕನ್ನಡಿಗರ ಹೃದಯಕ್ಕೆ ಲಗ್ಗೆಯಿಟ್ಟರು 1974ರಲ್ಲಿ ಹೊರಬಂದ ನಿತ್ಯೋತ್ಸವ ಭಾವಗೀತೆ ಧ್ವನಿಸುರುಳಿ ಕನ್ನಡ ಸಂಗೀತ ಲೋಕದಲ್ಲಿ ಬಿರುಗಾಳಿ ಎಬ್ಬಿಸಿತು. ಅದು ಎಷ್ಟು ಜನಪ್ರಿಯವಾಯಿತು ಎಂದರೆ ಜನ ಅವರನ್ನು ನಿತ್ಯೋತ್ಸವ ಕವಿ ಎಂದೇ ಗುರುತಿಸತೊಡಗಿದರು. ಮುಂದೆ ಅವರು ರಚಿಸಿದ ಕವಿತೆಗಳನ್ನು ಆಧರಿಸಿ ಹೊರತರಲಾದ ಎಲ್ಲ 13 ಧ್ವನಿಸುರುಳಿಗಳೂ ಜನಪ್ರೀಯವಾದವು. ತಮ್ಮ ಶ್ರೀಮಂತ ಬರವಣಿಗೆ, ಭಾವಗೀತೆಗಳ ಮೂಲಕ ಜನಮನ ಗೆದ್ದಿದ್ದ ಅವರನ್ನು ಹತ್ತಾರು ಪ್ರಶಸ್ತಿಗಳು ಹುಡುಕಿಕೊಂಡು ಬಂದವು. ಪ್ರತಿಷ್ಠಿತ ಪಂಪ, ನಾಡೋಜ ಪ್ರಶಸ್ತಿಗಳು, ಕೇಂದ್ರ ಹಾಗೂ ರಾಜ್ಯ ಸಾಹಿತ್ಯ ಅಕಾಡೆಮಿಗಳ ಪ್ರಶಸ್ತಿಗಳು, ಪದ್ಮಶ್ರೀ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಹೀಗೆ ಹತ್ತು ಹಲವು ಸನ್ಮಾನ ಗೌರವಗಳು ಅವರಿಗೆ ಸಂದವು ಎಂದು ತಿಳಿಸಿದ್ದಾರೆ.


ತಮ್ಮ 10ನೇ ವಯಸ್ಸಿನಿಂದಲೇ ಬರವಣಿಗೆಯ ಗೀಳು ಹತ್ತಿಸಿಕೊಂಡ ಡಾ ನಿಸಾರ್ ಅಹ್ಮದ್ ಅವರು 21 ಕವನ ಸಂಕಲನಗಳು, 14 ವೈಚಾರಿಕೆ ಕೃತಿಗಳು, ತಲಾ 5 ಮಕ್ಕಳ ಸಾಹಿತ್ಯ ಹಾಗೂ ಅನುವಾದ ಕೃತಿಗಳು ಹಾಗೂ 13 ಸಂಪಾದನಾ ಗ್ರಂಥಗಳನ್ನು ಸಾಹಿತ್ಯ ಲೋಕಕ್ಕೆ ಕೊಟ್ಟುಹೋಗಿದ್ದಾರೆ. ಅವರು ಇಂದು ನಮ್ಮ ಮಧ್ಯೆ ಭೌತಿಕವಾಗಿ ಇಲ್ಲದಿರಬಹುದು. ಆದರೆ ಅವರು ರಚಿಸಿದ ಸಾಹಿತ್ಯ, ಭಾವಗೀತೆಗಳು ನಮ್ಮ ಮನಸ್ಸಿನಲ್ಲಿ ಸದಾ ಹಸಿರಾಗಿರುತ್ತವೆ ಎಂದು ಸದಾನಂದಗೌಡ ತಿಳಿಸಿದ್ದಾರೆ.