ಬೆಂಗಳೂರು: ಸರಣಿ ಅಪರಾಧಗಳನ್ನು ಮಾಡಿರುವ ಒಬ್ಬ ಭ್ರಷ್ಟ ಐಪಿಎಸ್ ಅಧಿಕಾರಿಯೊಬ್ಬ ರಾಜ್ಯಪಾಲರ ಕಚೇರಿಯ ಸಿಬ್ಬಂದಿಯನ್ನು ತನಿಖೆ ಮಾಡುವ ಅನುಮತಿ ಕೇಳಿದ್ದಾನೆ. ಈತನಿಗೆ ರಾಜ್ಯ ಕಾಂಗ್ರೆಸ್ ಸರ್ಕಾರದ ಪೂರ್ಣ ಕೃಪಾಕಟಾಕ್ಷವಿದೆ ಎಂದು ಕೇಂದ್ರದ ಭಾರೀ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ನೇರ ಆರೋಪ ಮಾಡಿದರು.


COMMERCIAL BREAK
SCROLL TO CONTINUE READING

ಲೋಕಾಯುಕ್ತ ವಿಶೇಷ ತನಿಖಾ ದಳದ ಐಜಿಪಿ ಎಂ.ಚಂದ್ರಶೇಖರ್ ಆ ಭ್ರಷ್ಟ ಅಧಿಕಾರಿ ಆಗಿದ್ದು, ಇಂಥ ದರೋಡೆಕೋರ ಅಧಿಕಾರಿಗಳನ್ನು ಇಟ್ಟುಕೊಂಡು ರಾಜ್ಯ ಸರ್ಕಾರ ತನಿಖೆ ಮಾಡಿಸುತ್ತಿದೆ ಎಂದು  ಸಚಿವರು ಗಂಭೀರ ಆರೋಪ ಮಾಡಿದರು.


ಇದನ್ನೂ ಓದಿ:   ಐಶ್ವರ್ಯಾ ರೈ-ಅಭಿಷೇಕ್ ಬಚ್ಚನ್ ವಿಚ್ಛೇದನ ಫಿಕ್ಸ್!? ಕೊನೆಗೂ ಸಿಕ್ಕೇ ಬಿಟ್ಟಿತು ದೊಡ್ಡ ಸಾಕ್ಷಿ!!   


ಜೆಡಿಎಸ್ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಸಚಿವರು ಐಜಿಪಿ ಚಂದ್ರಶೇಖರ್ ವಿರುದ್ಧ ಸರಣಿ ದಾಖಲೆಗಳ ಸಮೇತ ಆರೋಪಗಳನ್ನು ಮಾಡಿದರು.


ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಯಾವ ತನಿಖೆಯೂ ಪಾರದರ್ಶಕವಾಗಿ ನಡೆಯುತ್ತಿಲ್ಲ. ರಾಜಕೀಯ ಸೇಡಿಗಾಗಿ ತನಿಖೆ ನಡೆಸಲಾಗುತ್ತಿದೆ. ಅದಕ್ಕೆ ಚಂದ್ರಶೇಖರ್ ಅವರಂಥ ಕಳಂಕಿತ ಅಧಿಕಾರಿಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಈ ಅಧಿಕಾರಿಯ ವಿರುದ್ಧ ಕೇಂದ್ರ ಗೃಹ ಸಚಿವಾಲಯಕ್ಕೆ ದೂರು ನೀಡಲಾಗುವುದು ಎಂದು ಕುಮಾರಸ್ವಾಮಿ ಅವರು ಹೇಳಿದರು.


ನನ್ನ ಪ್ರಕರಣಕ್ಕೆ ಸಂಬಂಧಿಸಿ ರಾಜ್ಯಪಾಲರು ಲೋಕಾಯುಕ್ತಕ್ಕೆ ಬರೆದಿದ್ದ ಅತಿ ಗೌಪ್ಯ ಪಾತ್ರವೊಂದು ಸೋರಿಕೆ ಆಗಿತ್ತು. ಅದು ನಮ್ಮ ಕುಟುಂಬದ ವಿರುದ್ಧ ಅನೇಕ ತಿಂಗಳಿನಿಂದ ವೈಯಕ್ತಿಕವಾಗಿ ತೇಜೋವಧೆ ಮಾಡುತ್ತಿರುವ ಖಾಸಗಿ ಸುದ್ದಿವಾಹಿನಿಗೆ ಆ ಪತ್ರ ಸೋರಿಕೆ ಆಗಿತ್ತು. ಅದು ಐಜಿಪಿ ಚಂದ್ರಶೇಖರ್ ಅವರಿಂದಲೇ ಸೋರಿಕೆ ಆಗಿದೆ. ಆದರೆ, ಅದೇ ಅಧಿಕಾರಿ ರಾಜ್ಯಪಾಲರ ಕಚೇರಿಯಿಂದಲೇ ಪತ್ರ ಸೋರಿಕೆ ಆಗಿದೆ ಎಂದು ಕಥೆ ಕಟ್ಟಿ ರಾಜ್ಯಪಾಲರ ಕಾರ್ಯಾಲಯದ ಸಿಬ್ಬಂದಿಯನ್ನು ತನಿಖೆಗೆ ಒಳಪಡಿಸಲು ಅನುಮತಿ ಕೊಡುವಂತೆ ಲೋಕಾಯುಕ್ತ ತನಿಖಾ ಸಂಸ್ಥೆಯ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ. ಸಂವಿಧಾನ ಮತ್ತು ರಾಷ್ಟ್ರಪತಿಗಳ ಪ್ರತಿನಿಧಿಯಾಗಿ ರಾಜ್ಯದಲ್ಲಿ ಕರ್ತವ್ಯ ನಿರ್ವಹಿಸುವ ರಾಜ್ಯಪಾಲರ ಕಾರ್ಯಾಲಯದ ಬಗ್ಗೆ ತನಿಖೆಗೆ ಅನುಮತಿ ಕೋರುವ ದರ್ಪವನ್ನು ಈ ಅಧಿಕಾರಿ ತೋರಿಸಿದ್ದಾರೆ. ಈ ಅಧಿಕಾರಿಗೆ ತಕ್ಕ ಶಾಸ್ತಿ ಕಾದಿದೆ ಎಂದು ಕುಮಾರಸ್ವಾಮಿ ಅವರು ಆಕ್ರೋಶ ವ್ಯಕ್ತಪಡಿಸಿದರು.


ಮೊದಲೇ ಸರಣಿ ಅಪರಾಧಗಳನ್ನು ಮಾಡಿ ಸಿಕ್ಕಿ ಹಾಕಿಕೊಂಡಿರುವ ಐಜಿಪಿ ಚಂದ್ರಶೇಖರ್ ಅವರಿಗೆ ರಾಜ್ಯ ಸರ್ಕಾರ ಆಮಿಷಗಳನ್ನು ಒಡ್ಡಿ ಇಂತಹ ಕಾನೂನು ಬಾಹಿರ ಕೃತ್ಯ ಮಾಡಿಸುತ್ತಿದೆ. ಅವರಿಗೆ ಬೆಂಗಳೂರು ನಗರದ ಪೊಲೀಸ್ ಆಯುಕ್ತರ ಹುದ್ದೆಯ ಆಮಿಷ ಒಡ್ಡಲಾಗಿದೆ. ಈ ಸರ್ಕಾರ ಒಬ್ಬರಿಗೆ ಈ ರೀತಿಯ ಆಮಿಷ ಒಡ್ಡಿಲ್ಲ.. ಬಿ.ಕೆ.ಸಿಂಗ್, ಎಂ.ಚಂದ್ರಶೇಖರ್, ಗುಪ್ತದಳ ಮುಖ್ಯಸ್ಥರು ಸೇರಿದಂತೆ ಅನೇಕರಿಗೆ ಕಮಿಷನರ್ ಮಾಡುತ್ತೇವೆ ಎಂದು ಟೋಪಿ ಹಾಕಿದ್ದಾರೆ. ಇಂಥ ಸರ್ಕಾರದಲ್ಲಿ ತನಿಖೆಗಳು ಪಾರದರ್ಶಕವಾಗಿ ನಡೆಯುತ್ತವೆ ಎನ್ನುವ ನಂಬಿಕೆ ಇಲ್ಲ ಎಂದು ಕೇಂದ್ರ ಸಚಿವರು ದೂರಿದರು.


ಪತ್ರ ಸೋರಿಕೆ ಬಗ್ಗೆ ರಾಜ್ಯಪಾಲರ ಸಿಬ್ಬಂದಿ ವಿಚಾರಣೆಗೆ ಚಂದ್ರಶೇಖರ್ ಪತ್ರ ಬರೆದು ಉದ್ದಟತನ ತೋರಿಸಿದ್ದಾರೆ. ರಾಜ್ಯಪಾಲರ ಕಚೇರಿ ಪರಿಶೀಲನೆ ಮಾಡುತ್ತೇನೆ ಎಂದು ಚಂದ್ರಶೇಖರ್ ಕೇಳುತ್ತಾರೆ ಎಂದರೆ ಆತನಿಗೆ ಎಷ್ಟು ಉದ್ದಟತನ ಇರಬೇಕು? ರಾಜ್ಯಪಾಲರ ಕಚೇರಿ ಸರ್ಚ್ ಮಾಡುವ ಸೂಪರ್ ಕಾಪ್ ಯಾರಿರಬೇಕು ಎಂದು ಕೆದಕಿದರೆ ಇವರ ಹಿನ್ನಲೆ ಗೊತ್ತಾಯಿತು ನನಗೆ ಎಂದು ಚಂದ್ರಶೇಖರ್ ಹಿನ್ನೆಲೆಯನ್ನು ಬಿಡಿಸಿಟ್ಟರು ಕುಮಾರಸ್ವಾಮಿ ಅವರು.


ಈ ಚಂದ್ರಶೇಖರ್ ಮೂಲತಃ ಹಿಮಾಚಲ ಪ್ರದೇಶದ ಕೇಡರ್ ನ ಐಪಿಎಸ್ ಅಧಿಕಾರಿ. 1998ರಲ್ಲಿ ಹಿಮಾಚಲ ಪ್ರದೇಶದ ಕೇಡರ್ ಆಗಿ ಆಯ್ಕೆಯಾಗಿದ್ದವರು. ಐದು ವರ್ಷಗಳ ಅವಧಿಗೆ ನಿಯೋಜನೆ ಮೇಲೆ ಕರ್ನಾಟಕಕ್ಕೆ ಬಂದರು ಇವರು. ಈ ಅಧಿಕಾರಿ ಹಿಮಾಚಲ ಪ್ರದೇಶದಲ್ಲಿ ಹವಾಮಾನ ಸರಿಯಾಗಿಲ್ಲ ಎಂದು ಸುಳ್ಳು ದಾಖಲೆ ಸೃಷ್ಟಿ ಮಾಡಿ ಕರ್ನಾಟಕದಲ್ಲೇ ಅಧಿಕಾರದಲ್ಲಿ ಮುಂದುವರೆದಿದ್ದಾರೆ ಎಂದು ಕುಮಾರಸ್ವಾಮಿ ಅವರು ಮಾಹಿತಿ ನೀಡಿದರು.


ನಿಯೋಜನೆ ಮೇಲೆ ಬಂದ ಈ ವ್ಯಕ್ತಿ ಆಮೇಲೆ ಕರ್ನಾಟಕ ಕೇಡರ್ ಅಧಿಕಾರಿ ಆಗುತ್ತಾರೆ. ಅದಕ್ಕೆ ಏನೆಲ್ಲಾ ಅಕ್ರಮ ಎಸಗಿದರು? ಯಾರು ಯಾರ ನೆರವು ಪಡೆದುಕೊಂಡರು ಎನ್ನುವುದನ್ನು ನಾನು ಇಲ್ಲಿ ಹೇಳುವಂತಿಲ್ಲ. ಅದು ಬಹಳ ಸೂಕ್ಷ್ಮ ವಿಚಾರ ಎಂದು ಕೇಂದ್ರ ಸಚಿವರು ಪ್ರಶ್ನೆಯೊಂದಕ್ಕೆ ಉತ್ತರ ಕೊಟ್ಟರು.


ಐಜಿಪಿ ಚಂದ್ರಶೇಖರ್ ವಿರುದ್ಧ ಹಲವಾರು ದೂರುಗಳು ದಾಖಲಾಗಿ, ಆರೋಪ ಪಟ್ಟಿಗಳು ಸಲ್ಲಿಕೆಯಾಗಿವೆ. ಈ ವ್ಯಕ್ತಿ ಸರಣಿ ಅಪರಾಧಗಳನ್ನು ಮಾಡಿರುವ ಅಧಿಕಾರಿ. ತಮ್ಮ ಅಧೀನದಲ್ಲಿದ್ದ ಅಧಿಕಾರಿಯಿಂದ ಭೂಮಿ ವ್ಯವಹಾರಕ್ಕೆ ಸಂಬಂಧಿಸಿ ₹20 ಕೋಟಿ ಹಣಕ್ಕೆ ಬೇಡಿಕೆ ಇಟ್ಟಿದ್ದರು.  ಈ ಬಗ್ಗೆ ಇನ್ಸ್ಪೆಕ್ಟರ್ ಒಬ್ಬರು ದೂರು ನೀಡಿದ್ದು, ಆ ದಾಖಲೆಯನ್ನು ಕೂಡ ಕೇಂದ್ರ ಸಚಿವರು ಓದಿ ಹೇಳಿದರು.


ಇದೇ ಅಧಿಕಾರಿ ಚಂದ್ರಶೇಖರ್ ತನ್ನ ಪತ್ನಿ ಹೆಸರಿನಲ್ಲಿ 38 ಮಹಡಿಯ ವಾಣಿಜ್ಯ ಕಟ್ಟಡ ಕಟ್ಟುತ್ತಿದ್ದಾರೆ. ಅದು ರಾಜಕಾಲುವೆ ಮೇಲೆ ಮಹಡಿ ಕಟ್ಟುತ್ತಿದ್ದಾರೆ. ಅಲ್ಲದೆ, ಕೆರೆಯನ್ನು ಕೂಡ ಒತ್ತುವರಿ ಮಾಡಿಕೊಳ್ಳಾಗಿದೆ. ಇದರ ಬಗ್ಗೆ ತನಿಖೆ ನಡೆಯಬೇಕು. ಇಂಥ ಅಧಿಕಾರಿಗಳನ್ನು ಇಟ್ಟುಕೊಂಡರೆ ರಾಜ್ಯ ಹೇಗೆ ಉದ್ದಾರ ಆಗುತ್ತದೆ. ಕಾನೂನುಬಾಹಿರವಾಗಿ ತನ್ನ ಅಧೀನದ ಅಧಿಕಾರಿಗಳನ್ನು, ಬಿಲ್ಡರುಗಳನ್ನು ಹೆದರಿಸಿ ಐಪಿಎಸ್ ಅಧಿಕಾರಿ ಚಂದ್ರಶೇಖರ್ ಎಷ್ಟು ಕೋಟಿ ವಸೂಲಿ ಮಾಡಿದ್ದಾರೆ? ಎನ್ನುವುದು ಹೊರಗೆ ಬರಬೇಕು. ಇವರು ಒಂದು ಖಾಸಗಿ ತಂಡ ಇದೆ ಇಟ್ಟುಕೊಂಡು ಈ ದಂಧೆ ನಡೆಸುತ್ತಿದ್ದಾರೆ. ಈತನ ಬಗ್ಗೆ ದಾಖಲೆ ಸಮೇತ ಕೇಂದ್ರ ಗೃಹ ಕಾರ್ಯದರ್ಶಿಗೆ ಪತ್ರ ಬರೆಯುತ್ತೇನೆ ಎಂದು ಕುಮಾರಸ್ವಾಮಿ ಅವರು ಹೇಳಿದರು.


ನನ್ನ ಬಳಿ ಈತನ ವ್ಯವಹಾರಗಳ ಬಗ್ಗೆ ದಾಖಲೆಗಳು ಇವೆ. ವಿಜಯ್ ತಾತಾ ಎಂಬ ವ್ಯಕ್ತಿ ಇದ್ದ. ರಾಜ್ಯದಲ್ಲಿ ಆತ ಒಂದು ಮಾಧ್ಯಮ ಸಂಸ್ಥೆ ನಡೆಸುತ್ತಿದ್ದ. ಈತನದು ಕೂಡ ಸುಲಿಗೆ ದಂಧೆಯೇ. ಈತನ ವಿರುದ್ಧ ಸುಮಾರು ಎರಡು ಸಾವಿರಕ್ಕೂ ಹೆಚ್ಚು ಆರೋಪ ಪಟ್ಟಿಗಳು ದಾಖಲಾಗಿವೆ. ಇಂಥವನ ಜತೆ ಸೇರಿಕೊಂಡು ಐಜಿಪಿ ಚಂದ್ರಶೇಖರ್ ಜನರನ್ನು ಹೆದರಿಸಿ ಬೆದರಿಸಿ ಹಣ ವಸೂಲಿ ಮಾಡಿದ್ದಾರೆ ಎಂದು ಕುಮಾರಸ್ವಾಮಿ ಅವರು ಆರೋಪ ಮಾಡಿದರು.


ಮಾಧ್ಯಮಗೋಷ್ಟಿಯಲ್ಲಿ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು, ಮಾಜಿ ಸಚಿವ ಬಂಡೆಪ್ಪ ಕಾಶೆಂಪೂರ್, ಜೆಡಿಎಸ್ ನಗರ ಘಟಕದ ಅಧ್ಯಕ್ಷ ಹೆಚ್.ಎಂ.ರಮೇಶ್ ಗೌಡ, ಮಾಜಿ ಶಾಸಕ ಅಶ್ವಿನ್ ಕುಮಾರ್, ಮಂಜುನಾಥ್, ಪಕ್ಷದ ಹಿರಿಯ ನಾಯಕರಾದ ಜಪ್ರುಲ್ಲಾ ಖಾನ್, ಸುಧಾಕರ ಶೆಟ್ಟಿ ಸೇರಿದಂತೆ ಹಲವಾರು ಉಪಸ್ಥಿತರಿದ್ದರು.


ರಾಜ್ಯ ಸಚಿವ ಸಂಪುಟದಲ್ಲಿ ಒಬ್ಬರಿಗಿಂತ ಒಬ್ಬರು ಪೈಪೋಟಿಯಲ್ಲಿ ಲೂಟಿ ಮಾಡುತ್ತಿದ್ದಾರೆ. ನನ್ನ  ಬಳಿ ಇರುವ ದಾಖಲೆಗಳನ್ನು ಬಯಲು ಮಾಡಿದರೆ ಕೊನೇಪಕ್ಷ 6ರಿಂದ 7 ಸಚಿವರು ರಾಜೀನಾಮೆ ನೀಡಬೇಕಾಗುತ್ತದೆ. ಶೀಘ್ರದಲ್ಲಿಯೇ ಎಲ್ಲಾ ದಾಖಲೆಗಳನ್ನು ಬಿಡುತ್ತೇನೆ ಎಂದು ಕುಮಾರಸ್ವಾಮಿ ಅವರು ಹೇಳಿದರು.


ನಾನು ಬಹಳ ಕ್ಲೀನ್, ಪಾರದರ್ಶಕ, ನನ್ನ ಜೀವನ ತೆರೆದ ಪುಸ್ತಕ ಎಂದೆಲ್ಲಾ ಹೇಳುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಲೋಕಾಯುಕ್ತದಲ್ಲಿ 70ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಆ ಪ್ರಕರಣಗಳ ಕಥೆ ಏನಾಗಿದೆ? ಅವುಗಳ ತನಿಖೆ ಎಲ್ಲಿಗೆ ಬಂದಿದೆ ಎಂಬುದನ್ನು ಜನರಿಗೆ ಹೇಳಬೇಕಲ್ಲವೇ? ಎಂದು ಕೇಂದ್ರ ಸಚಿವರು ಒತ್ತಾಯ ಮಾಡಿದರು.


ಇದನ್ನೂ ಓದಿ:  ಬರೀ 13 ವರ್ಷಕ್ಕೆ ಐಶ್ವರ್ಯಾ ರೈ ಮಗಳು ಆರಾಧ್ಯ ಬಚ್ಚನ್ ಆಸ್ತಿ ಎಷ್ಟಿದೆ ಗೊತ್ತಾ? ತಂದೆಗಿಂತಲೂ ದುಪ್ಪಟ್ಟು ಸಂಪತ್ತಿಗೆ ʼರಾಣಿʼ ಈಕೆ...!!


ಇವರು ಕ್ಲೀನ್, ಸ್ವಚ್ಚ ಆಗಿದ್ದರೆ ಇಷ್ಟು ಪ್ರಕರಣಗಳು ಇವರ ಮೇಲೆ ಏಕೆ ದಾಖಲಾಗುತ್ತಿದ್ದವು ಎಂದು ಪ್ರಶ್ನಿಸಿದ ಕುಮಾರಸ್ವಾಮಿ ಅವರು; ಇಂಥ ಪ್ರಕರಣಗಳನ್ನು ಮುಚ್ಚಿ ಹಾಕಿಕೊಳ್ಳಲು ಹಿಂದೆ ಲೋಕಾಯುಕ್ತವನ್ನು ಮುಗಿಸಿ ಎಸಿಬಿಯನ್ನು ರಚನೆ ಮಾಡಿಕೊಂಡಿದ್ದರು ಎಂದು ಅವರು ಹೇಳಿದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ