ಬೆಂಗಳೂರು: ಕೇಂದ್ರ ಸಚಿವ ಹೆಚ್.ಎನ್.ಅನಂತ್ ಕುಮಾರ್ ಪಾರ್ಥಿವ ಶರೀರದ ಅಂತ್ಯಕ್ರಿಯೆ ಮಂಗಳವಾರ ಮಧ್ಯಾಹ್ನ 3 ಗಂಟೆಗೆ ಚಾಮರಾಜಪೇಟೆಯಲ್ಲಿರುವ ರುದ್ರಭೂಮಿಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು. ಈ ಅದಮ್ಯ ಚೇತನ, ಜನಾನುರಾಗಿ ನಾಯಕ ಇನ್ನು ನೆನಪು ಮಾತ್ರ...


COMMERCIAL BREAK
SCROLL TO CONTINUE READING

ತೀವ್ರ ಅನಾರೋಗ್ಯದ ಬಳಲುತ್ತಿದ್ದ ಕೇಂದ್ರ ಸಚಿವ ಅನಂತ್ ಕುಮಾರ್ ಕಳೆದ 20 ದಿನಗಳಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಸೋಮವಾರ ಬೆಳಗಿನ ಜಾವ ಸುಮಾರು 3 ಗಂಟೆ ಸಮಯದಲ್ಲಿ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದರು. 


ಅನಂತ್ ಕುಮಾರ್ ಪಾರ್ಥಿವ ಶರೀರವನ್ನು ಸೋಮವಾರ ಅವರ ಬಸವನಗುಡಿ ನಿವಾಸದಲ್ಲಿ ಇರಿಸಲಾಗಿತ್ತು. ಈ ವೇಳೆ ಪ್ರಧಾನಿ ಮೋದಿ, ರಾಜ್ಯ ನಾಯಕರು ನಿವಾಸಕ್ಕೆ ತೆರಳಿ ಅಂತಿಮ ದರ್ಶನವನ್ನು ಪಡೆದರು. ಇಂದು ಬೆಳಗ್ಗೆ 8 ರಿಂದ 9 ಗಂಟೆವರೆಗೆ ಬಿಜೆಪಿ ಕಾರ್ಯಕರ್ತರಿಗೆ ಅಂತಿಮ ನಮನ ಸಲ್ಲಿಸಲು ಅವಕಾಶ ಕಲ್ಪಿಸಲಾಗಿತ್ತು. ನಂತರ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆವರೆಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಹಿಂದೂ ಬ್ರಾಹ್ಮಣ ವಿಧಿಗಳಂತೆ ಅಂತಿಮ ಸಂಸ್ಕಾರ ನೆರವೇರಿತು. ಅನಂತ್ ಕುಮಾರ್ ತಮ್ಮ ನಂದ ಕುಮಾರ್ ಅಂತ್ಯ ಸಂಸ್ಕಾರ ನೆರವೇರಿಸಿದರು. 


ಕೇಂದ್ರ ಸಚಿವರಾದ ಕೇಂದ್ರ ಸಚಿವರಾದ ರಾಜ್‌ನಾಥ್‌ ಸಿಂಗ್‌, ನಿರ್ಮಲಾ ಸೀತಾರಾಮನ್‌, ರವಿಶಂಕರ ಪ್ರಸಾದ್​ ಡಿ.ವಿ.ಸದಾನಂದ ಗೌಡ, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಅಡ್ವಾಣಿ, ಆರ್​ಎಸ್​ಎಸ್​ ಪ್ರಧಾನ ಕಾರ್ಯದರ್ಶಿ ಭಯ್ಯಾಜಿ ಜೋಷಿ, ಮಾಜಿ ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ, ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್, ಕಾಂಗ್ರೆಸ್ ಅಧ್ಯಕ್ಷ ದಿನೇಶ್ ಗುಂಡೂರಾವ್ ಸೇರಿದಂತೆ ಅನೇಕ ಗಣ್ಯರು ಅನಂತಕುಮಾರ್​ ಅವರ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದರು. 


ಅಂತ್ಯಕ್ರಿಯೆ ವೇಳೆ ಸಾವಿರಾರು ಮಂದಿ ಅಭಿಮಾನಿಗಳು, ಬಿಜೆಪಿ ಕಾರ್ಯಕರ್ತರು, ಮುಖಂಡರು ಅಮರ್‌ ರಹೇ ಅನಂತ್‌ ಕುಮಾರ್‌...ಅಮರ್‌ ರಹೇ ಅನಂತ್‌ ಕುಮಾರ್‌ ಎಂಬ ಘೋಷಣೆಗಳನ್ನು ಮೊಳಗಿಸಿದರು.