ಬೆಳಗಾವಿ-ಬೆಂಗಳೂರು ವಿಶೇಷ ರೈಲಿಗೆ ಕೇಂದ್ರ ಸಚಿವ ಸುರೇಶ್ ಅಂಗಡಿ ಚಾಲನೆ
ರಾಜ್ಯದಿಂದ ರಾಜ್ಯಕ್ಕೆ ಸಂಪರ್ಕ ಕಲ್ಪಿಸುವ ಇನ್ನಷ್ಟು ರೈಲ್ವೆ ಮಾರ್ಗಗಳನ್ನು ಆರಂಭಿಸಲು ಎಲ್ಲ ಕ್ರಮ ಕೈಗೊಳ್ಳಲಾಗುವುದು ಎಂದು ಸುರೇಶ ಅಂಗಡಿ ತಿಳಿಸಿದ್ದಾರೆ.
ಬೆಳಗಾವಿ: ಜನರ ಬಹುದಿನಗಳ ಬೇಡಿಕೆಯಾದ ಬೆಳಗಾವಿ-ಬೆಂಗಳೂರು ಸೂಪರ್ ಫಾಸ್ಟ್ ವಿಶೇಷ ರೈಲಿಗೆ ಕೇಂದ್ರ ರೈಲ್ವೆ ಸಚಿವ ಸುರೇಶ ಅಂಗಡಿ ಅವರು ಶನಿವಾರ ಸಂಜೆ ಚಾಲನೆ ನೀಡಿದರು.
ನಗರದ ರೈಲ್ವೆ ನಿಲ್ದಾಣದ ಆವರಣದಲ್ಲಿ ವಿಶೇಷ ರೈಲಿಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು, ರೈಲ್ವೆ ಇಲಾಖೆಗೆ ಆರ್ಥಿಕ ಕೊರತೆ ಇಲ್ಲ. ವಿಮಾನ ನಿಲ್ದಾಣ ಮಾದರಿಯಲ್ಲಿ ರಾಜ್ಯದ ರೈಲ್ವೆ ನಿಲ್ದಾಣಗಳನ್ನು ಅಭಿವೃದ್ಧಿ ಮಾಡಲಾಗುತ್ತಿದೆ. ಶೀಘ್ರದಲ್ಲೇ ಎಲ್ಲಾ ಕಾಮಗಾರಿಗಳೂ ಪೂರ್ಣಗೊಳ್ಳಲಿವೆ ಎಂದು ಹೇಳಿದ್ದಾರೆ.
ಬೆಳಗಾವಿ-ಪುಣೆ ನಡುವೆ ಪುಲ್ ಮತ್ತು ಪುಷ್ ರೈಲು ಆರಂಭಿಸಲಾಗುವುದು. ಬೆಳಗಾವಿ- ಬೆಂಗಳೂರು ಮಾರ್ಗ ಯಶಸ್ವಿಯಾದರೆ ಮೀರಜ್ನಿಂದ ಬೆಂಗಳೂರಿಗೆ ಮಾರ್ಗ ವಿಸ್ತರಣೆಯಾಗಲಿದೆ. ರಾಜ್ಯದಿಂದ ರಾಜ್ಯಕ್ಕೆ ಸಂಪರ್ಕ ಕಲ್ಪಿಸುವ ಇನ್ನಷ್ಟು ರೈಲ್ವೆ ಮಾರ್ಗಗಳನ್ನು ಆರಂಭಿಸಲು ಎಲ್ಲ ಕ್ರಮ ಕೈಗೊಳ್ಳಲಾಗುವುದು ಎಂದು ಸುರೇಶ ಅಂಗಡಿ ತಿಳಿಸಿದ್ದಾರೆ.
ಕಳೆದ ನಾಲ್ಕು ಲೋಕಸಭೆ ಚುನಾವಣೆಯಲ್ಲಿ ನನ್ನನ್ನು ಜನತೆ ಗೆಲ್ಲಿಸಿದ್ದಾರೆ. ಈ ಬಾರಿ ಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದೇನೆ. ಹಾಗಾಗಿ ಈ ಭಾಗದ ಜನರ ಬೇಡಿಕೆಗಳನ್ನು ಈಡೇರಿಸುವುದು ನನ್ನ ಕರ್ತವ್ಯ. ಈ ಭಾಗದ ಜನರಿಗೆ ಹೆಚ್ಚು ಸವಲತ್ತುಗಳನ್ನು ಒದಗಿಸುವುದು ನನ್ನ ಆದ್ಯತೆ. ಅದರಲ್ಲಿ ಮೊದಲನೆಯದಾಗಿ ಯುವಕರಿಗೆ ಉದ್ಯೋಗ ಕಲ್ಪಿಸುವುದು. ರೈಲ್ವೆ ಇಲಾಖೆಯಲ್ಲಿ ಸಾಕಷ್ಟು ಉದ್ಯೋಗ ಅವಕಾಶಗಳಿವೆ. ಖಾಲಿ ಹುದ್ದೆಗಳ ಭರ್ತಿಯಲ್ಲಿ ನಮ್ಮವರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಇದನ್ನು ರಾಜ್ಯದ ಯುವಜನತೆ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಸಚಿವ ಸುರೇಶ ಅಂಗಡಿ ಕರೆ ನೀಡಿದರು.