ವಿಶ್ವವಿದ್ಯಾಲಯಗಳು ಜನಸ್ನೇಹಿ ತಾಣಗಳಾಗಬೇಕು: ಡಿಸಿಎಂ ಡಾ. ಅಶ್ವತ್ಥನಾರಾಯಣ
ಬದಲಾದ ಸಾಮಾಜಿಕ ಪರಿಸ್ಥಿತಿಯಲ್ಲಿ ಸವಾಲುಗಳು ಸಹ ಬದಲಾಗುತ್ತಿರುತ್ತವೆ. ಅದಕ್ಕೆ ಅನುಗುಣವಾಗಿ ಕೋರ್ಸ್‌ಗಳನ್ನು ಪರಿಷ್ಕರಿಸಿ ಹೊಸದಾಗಿ ಆರಂಭಿಸಬೇಕು.
ಬೆಂಗಳೂರು: ವಿಶ್ವವಿದ್ಯಾಲಯಗಳು ಸಮಾಜದ ಎಲ್ಲ ವರ್ಗದ ಜನರನ್ನು ಒಳಗೊಂಡಿರಬೇಕು, ಅವರು ಎದುರಿಸುತ್ತಿರುವ ಸವಾಲುಗಳಿಗೆ ಪರಿಹಾರ ಕೇಂದ್ರವಾಗಿ ಸಮಾಜಕ್ಕೆ ಪ್ರಸ್ತುತವಾಗಿರಬೇಕು ಎಂದು ಉನ್ನತ ಶಿಕ್ಷಣ ಸಚಿವರು ಆಗಿರುವ ಉಪಮುಖ್ಯಮಂತ್ರಿ ಡಾ. ಸಿ ಎನ್ ಅಶ್ವತ್ಥನಾರಾಯಣ ಗುರುವಾರ ಹೇಳಿದ್ದಾರೆ.
ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿ ಕುಲಪತಿ ಪ್ರೊ.ಜಾಫೆಟ್ ಹಾಗೂ ಅಲ್ಲಿನ ಸಿಬ್ಬಂದಿ ಜತೆ ಸಮಾಲೋಚನೆ ನಡೆಸಿದ ನಂತರ ಸುದ್ದಿಗಾರರ ಜತೆ ಮಾತನಾಡಿದ ಡಾ. ಅಶ್ವತ್ಥನಾರಾಯಣ, "ಈಗಿನ ಸಂದರ್ಭಕ್ಕೆ ಪ್ರಸ್ತುತವಾಗಿರುವ ವಿಷಯಗಳನ್ನು ಬೆಂಗಳೂರು ಕೇಂದ್ರ ವಿವಿ ಅಳವಡಿಸಿಕೊಳ್ಳುವ ಮೂಲಕ ಶಿಕ್ಷಣದ ಗುಣಮಟ್ಟ ಹೆಚ್ಚಿಸುವ ಜತೆಗೆ ಲಭ್ಯ ಇರುವ ಸ್ಥಳವನ್ನೇ ಉತ್ತಮವಾಗಿ ಬಳಸಿಕೊಂಡು ಕಾರ್ಯ ನಿರ್ವಹಿಸುವ ಸಂಬಂಧ ಸಿದ್ಧವಾಗಿರುವ ನೀಲಿ ನಕ್ಷೆಯನ್ನು ಪ್ರೊ. ಜಾಫೆಟ್ ಪ್ರಸ್ತುತ ಪಡಿಸಿದ್ದಾರೆ. ಬೆಂಗಳೂರು ವಿವಿ ತ್ರಿಭಜನೆಯಾದ ಬಳಿಕ ಕೇಂದ್ರ ವಿವಿ ಸ್ಥಾಪನೆ ಆಗಿದ್ದು, ಹಳೆಯ ವಿವಿಯಲ್ಲಿದ್ದಂಥ ಉತ್ತಮ ವ್ಯವಸ್ಥೆ ಪುನರ್ ನಿರ್ಮಾಣ ಆಗಬೇಕು ಎಂಬುದು ಕುಲಪತಿ, ಸಿಬ್ಬಂದಿ ಹಾಗೂ ಸಿಂಡಿಕೇಟ್ ಸದಸ್ಯರ ಅಭಿಪ್ರಾಯ. ಈ ನಿಟ್ಟಿನಲ್ಲಿ ಅಭಿವೃದ್ಧಿ ಕಾರ್ಯಗಳು ಆಗಲಿವೆ. ಸದ್ಯ 4-5 ಲಕ್ಷ ಚದರಡಿ ಜಾಗವಿದ್ದು, ಅದನ್ನು ಸಮಪರ್ಕ ರೀತಿಯಲ್ಲಿ ಬಳಸಿಕೊಳ್ಳಬಹುದು," ಎಂದರು.
"ಬದಲಾದ ಸಾಮಾಜಿಕ ಪರಿಸ್ಥಿತಿಯಲ್ಲಿ ಸವಾಲುಗಳು ಸಹ ಬದಲಾಗುತ್ತಿರುತ್ತವೆ. ಅದಕ್ಕೆ ಅನುಗುಣವಾಗಿ ಕೋರ್ಸ್‌ಗಳನ್ನು ಪರಿಷ್ಕರಿಸಿ ಹೊಸದಾಗಿ ಆರಂಭಿಸಬೇಕು. ಸಮಾಜದ ಸಮಸ್ಯೆಗೆ ಪರಿಹಾರ ಸೂಚಿಸುವ ಸಂಶೋಧನೆಗಳು ಇಲ್ಲಿ ಆಗಬೇಕು. ಕ್ಯಾಂಪಸ್‌ಗಳು ಶೈಕ್ಷಣಿಕವಾಗಿ ಅಲ್ಲದೇ ವೃತ್ತಿಪರವಾಗಿಯೂ ಬಳಕೆ ಆಗಬೇಕು. ಇನ್‌ಕ್ಯುಬೇಷನ್ ಸೆಂಟರ್, ಕೋ ವರ್ಕಿಂಗ್ ಸ್ಪೇಸ್, ಸಂಶೋಧನಾ ಕೇಂದ್ರಗಳು ಇರಬೇಕು. ಕಲೆ, ಸಂಸ್ಕೃತಿ, ಕ್ರೀಡೆ, ಸಂಶೋಧನೆಗೆ ಇಲ್ಲಿ ಅವಕಾಶ ಕಲ್ಪಿಸುವುದರಿಂದ ವಿಶ್ವವಿದ್ಯಾಲಯಗಳು ಜನರಿಗೆ ಹತ್ತಿರವಾಗುತ್ತವೆ," ಎಂದು ಅವರು ತಿಳಿಸಿದರು.
ಆರ್ಥಿಕ ಮುಗ್ಗಟ್ಟಿಲ್ಲ:
"ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯಕ್ಕೆ ಹಣಕಾಸಿನ ಕೊರತೆ ಇಲ್ಲ. ಹಾಲಿ 18 ಬೋಧನಾ ಸಿಬ್ಬಂದಿ ಜತೆಗೆ 37 ಹುದ್ದೆಗಳನ್ನು ಭರ್ತಿ ಮಾಡಲಾಗಿದೆ. 106 ಹುದ್ದೆಗಳ ಭರ್ತಿಗೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಹಂತ ಹಂತವಾಗಿ ಎಲ್ಲವನ್ನೂ ಸರಿದೂಗಿಸಲಾಗಿದೆ. ಸಮರ್ಪಕ ಯೋಜನೆಯಿಂದ ಎಲ್ಲವನ್ನೂ ವ್ಯವಸ್ಥಿತವಾಗಿ ರೂಪಿಸಬಹುದು," ಎಂದು ಡಾ. ಅಶ್ವತ್ಥನಾರಾಯಣ ಹೇಳಿದರು.