ನವದೆಹಲಿ: ತಮ್ಮ ಅನರ್ಹತೆಯನ್ನು ಪ್ರಶ್ನಿಸಿ ಶಾಸಕರು ಸುಪ್ರೀಂಕೋರ್ಟ್‌ನಲ್ಲಿ ಸಲ್ಲಿಸಿದ್ದ ಅರ್ಜಿ ಇಂದು ವಿಚಾರಣೆಗೆ ಬರಲಿದೆ. ಏತನ್ಮಧ್ಯೆ, ಶನಿವಾರ(ಸೆ.21) ಚುನಾವಣಾ ಆಯೋಗ ರಾಜ್ಯದ 15 ಕ್ಷೇತ್ರಗಳಿಗೆ ಉಪಚುನಾವಣೆ ಘೋಷಿಸಿರುವುದು ಅನರ್ಹರ ಎದೆಯಲ್ಲಿ ನಡುಕ ಹುಟ್ಟಿಸಿದೆ. ಅನರ್ಹರು ಉಪಚುನಾವಣೆಯಲ್ಲಿ ಸ್ಪರ್ಧಿಸಬಹುದೇ ಅಥವಾ ಇಲ್ಲವೇ ಎಂಬುದನ್ನು ಸರ್ವೋಚ್ಚ ನ್ಯಾಯಾಲಯ ನಿರ್ಧರಿಸಬೇಕಿದ್ದು, ಸುಪ್ರೀಂ ತೀರ್ಪಿನ ಮೇಲೆ ಅನರ್ಹರ ರಾಜಕೀಯ ಭವಿಷ್ಯ ನಿರ್ಧಾರವಾಗಲಿದೆ.


COMMERCIAL BREAK
SCROLL TO CONTINUE READING

ಸರ್ಕಾರ ಬೀಳಿಸಿ ಬೀಗಿದ್ದ ಅನರ್ಹ ಶಾಸಕರಿಗೆ ಮತ್ತೊಮ್ಮೆ ನಿರಾಸೆ


ಉಪಚುನಾವಣೆಗೆ ಇಂದಿನಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ಇಂದಿನ ಸುಪ್ರೀಂಕೋರ್ಟ್ ವಿಚಾರಣೆ ಅತ್ಯಂತ ಮಹತ್ವದ್ದಾಗಿದೆ. ಅನರ್ಹ ಶಾಸಕರಿಗೆ ಒಂದು ರೀತಿಯಲ್ಲಿ ಇದು ನಿರ್ಣಾಯಕ ದಿನವೆಂದೇ ಹೇಳಬಹುದು.


ಸ್ಪೀಕರ್ ಆದೇಶದ ಹಿನ್ನಲೆಯಲ್ಲಿ ಅನರ್ಹ ಶಾಸಕರು ಉಪಚುನಾವಣೆಗೆ ಸ್ಪರ್ಧಿಸುವಂತಿಲ್ಲ ಎಂದು ಚುನಾವಣಾ ಆಯೋಗ ಈಗಾಗಲೇ ಸ್ಪಷ್ಟಪಡಿಸಿದೆ. ಇದೀಗ ಸುಪ್ರೀಂಕೋರ್ಟ್ ಇವರ ಹಣೆಬರಹವನ್ನು ನಿರ್ಧರಿಸಬೇಕಿದೆ. 


'ಸುಪ್ರೀಂ' ಮುಂದೆ ಅನರ್ಹರ ಮನವಿ ಏನು?
ಉಪಚುನಾವಣೆಗೆ ನಾಮಪತ್ರ ಸಲ್ಲಿಸಲು ಇನ್ನು ಕೇವಲ 7 ದಿನಗಳು ಮಾತ್ರ ಬಾಕಿ ಉಳಿದಿದೆ. ತಮ್ಮನ್ನು ಅನರ್ಹರನ್ನಾಗಿ ಮಾಡಿರುವ ಸ್ಪೀಕರ್ ಆದೇಶಕ್ಕೆ ತಡೆ ನೀಡಿ ಮತ್ತು ನಮ್ಮ ರಾಜೀನಾಮೆ ಅಂಗೀಕಾರವಾಗುವಂತೆ ಮಾಡಬೇಕು. ಇಲ್ಲವಾದರೆ ಅನರ್ಹತೆಯ ಅರ್ಜಿ ಇತ್ಯರ್ಥವಾಗುವವರೆಗೂ ಬೈ ಎಲೆಕ್ಷನ್ ತಡೆಹಿಡಿಯಿರಿ ಎಂದು ಅನರ್ಹರು ನ್ಯಾಯಪೀಠದಲ್ಲಿ ಮನವಿ ಮಾಡುವ ಸಾಧ್ಯತೆಯೂ ಇದೆ.


ಅನರ್ಹರ ಪರ ವಕೀಲರಾದ ಮುಕುಲ್ ರೋಹ್ಟಗಿ ಉಪಚುನಾವಣೆಗೆ ತಡೆ ಕೋರಿ ಸುಪ್ರೀಂಕೋರ್ಟ್‌ಗೆ ಮನವಿ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ.


ಸೆ.17ರಂದೇ ಸುಪ್ರೀಂ ಕೋರ್ಟಿನ ನ್ಯಾಯಮೂರ್ತಿಗಳಾದ ಎನ್.ವಿ. ರಮಣ, ಅಜಯ್ ರಸ್ತೋಗಿ ಮತ್ತು ಮೋಹನ್ ಶಾಂತನಗೌಡರ್ ಅವರನ್ನೊಳಗೊಂಡ ತ್ರಿಸದಸ್ಯ ಪೀಠದಲ್ಲಿ ಅನರ್ಹ ಶಾಸಕರ ಅರ್ಜಿ ವಿಚಾರಣೆ ನಡೆಯಬೇಕಿತ್ತು. ಆದರೆ ಅನರ್ಹ ಶಾಸಕರ ಅರ್ಜಿ ವಿಚಾರಣೆಯಿಂದ ಜಸ್ಟೀಸ್ ಮೋಹನ್ ಶಾಂತನಗೌಡರ್ ಹಿಂದೆ ಸರಿದ ಹಿನ್ನೆಲೆಯಲ್ಲಿ ವಿಚಾರಣೆಯನ್ನು ಇಂದಿಗೆ ಮುಂದೂಡಲಾಗಿತ್ತು. 


ಇದಕ್ಕೂ ಮೊದಲು ಸಹ ಪ್ರಕರಣದ ತುರ್ತು ವಿಚಾರಣೆ ಕೋರಿ ಅನರ್ಹರ ಪರ ವಕೀಲರು ಈ ಹಿಂದೆ ಮೂರು ಬಾರಿ ಮಾಡಿಕೊಂಡ ಮನವಿಯನ್ನು ನ್ಯಾಯಮೂರ್ತಿ ಎನ್.ವಿ. ರಮಣ ನೇತೃತ್ವದ ಪೀಠ ತಿರಸ್ಕರಿಸಿತ್ತು.