ಬೆಂಗಳೂರು: ಮೇ ತಿಂಗಳಿನಲ್ಲಿ ಹಲವಾರು ಪರೀಕ್ಷೆಗಳು ನಡೆಯುವ ಹಿನ್ನೆಲೆಯಲ್ಲಿ ಒಂದೇ ಹಂತದಲ್ಲಿ ರಾಜ್ಯ ವಿಧಾನಸಭಾ ಚುನಾವಣಾ ನಡೆಸಲು ಮನವಿಗಳು ಬಂದಿದ್ದು, ಈ ಕುರಿತು ಪರಿಶೀಲನೆ ನಡೆಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಕೇಂದ್ರ ಚುನಾವಣೆ ಆಯುಕ್ತ ಓಂ ಪ್ರಕಾಶ್‌ ರಾವತ್‌ ತಿಳಿಸಿದ್ದಾರೆ.


COMMERCIAL BREAK
SCROLL TO CONTINUE READING

ಪ್ರಸ್ತುತ ರಾಜ್ಯ ಸರ್ಕಾರದ ಅವಧಿ ಇನ್ನೇನು ಪೂರ್ಣಗೊಳ್ಳಲಿರುವ  ಹಿನ್ನೆಲೆಯಲ್ಲಿ ಕಳೆದ 2 ದಿನಗಳಿಂದ ಬೆಂಗಳೂರಿನ ವಿಕಾಸ ಸೌಧದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಚುನಾವಣೆ ಸಿದ್ಧತೆ ಬಗ್ಗೆ ಪರಿಶೀಲನೆ ನಡೆಸುತ್ತಿರುವ ಕೇಂದ್ರ ಚುನಾವಣೆ ಆಯುಕ್ತ ಓಂ ಪ್ರಕಾಶ್‌ ರಾವತ್‌ ಈ ಕುರಿತು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. 


ರಾಜ್ಯ ಪೊಲೀಸ್ ಮಹಾ ನಿರ್ದೇಶಕರು ಹಾಗೂ ರಾಜ್ಯ ಸರ್ಕಾರಗಳ ಮುಖ್ಯ ಕಾರ್ಯದರ್ಶಿ ಸೇರಿದಂತೆ  ಹಿರಿಯ ಅಧಿಕಾರಿಗಳ ಜೊತೆ ಸಭೆ ಚುನಾವಣಾ ಸಿದ್ಧತೆ ಕುರಿತು ಈಗಾಗಲೇ ಸಭೆ ನಡೆಸಿದ್ದು, ಮಹದಾಯಿ ಪ್ರತಿಭಟನೆ, ಕಾವೇರಿ ತೀರ್ಪು ಹೊರಬೀಳುತ್ತಿದ್ದು, ಕಾನೂನು ಸುವ್ಯವಸ್ಥೆ ಕಾಪಾಡಲು ಸಮಾಲೋಚನೆ ನಡೆಸಿದ್ದಾಗಿ ಅವರು ಹೇಳಿದರು.


ಚುನಾವಣೆ ಸಂದರ್ಭದಲ್ಲಿ ಭದ್ರತೆ ದೃಷ್ಟಿಯಿಂದಾಗಿ ರಾಜ್ಯದ ಎಲ್ಲ ಮತಗಟ್ಟೆಗಳಲ್ಲಿ ಸಿಸಿ ಟಿವಿ ಕ್ಯಾಮರಾ ಅಳವಡಿಕೆ, ಕೇಂದ್ರ ಮೀಸಲು ಪಡೆ ಮತ್ತು ಭದ್ರತಾ ಪಡೆಗಳನ್ನು ಬಳಸಿಕೊಳ್ಳಲಾಗುವುದು. ಅಲ್ಲದೆ, ಪೊಲೀಸ್‌ ಚೆಕ್‌ಪೋಸ್ಟ್‌, ಫ್ಲೈಯಿಂಗ್‌ ಸ್ಕ್ವಾಡ್‌ ಮತ್ತು ತುರ್ತು ಸಂದರ್ಭಗಳಲ್ಲಿ ಏರ್‌ ಆಂಬುಲೆನ್ಸ್‌ ಬಳಸಲಾಗುವುದು. ಜಿಲ್ಲಾ ಚುನಾವಣೆ ಅಧಿಕಾರಿಗಳು ಚುನಾವಣೆ ವೆಚ್ಚದ ಬಗ್ಗೆ ನಿಗಾ ವಹಿಸಲು ಸಮಿತಿ ರಚಿಸಿ, ಖರ್ಚು ವೆಚ್ಚಗಳ ಬಗ್ಗೆ ವಿವರ ಪಡೆಯಲಿದ್ದಾರೆ ಎಂಡು ರಾವತ್ ತಿಳಿಸಿದರು. 


ಚುನಾವಣೆ ಸಂದರ್ಭದಲ್ಲಿ ಪೊಲೀಸ್ ಚೆಕ್ ಪೋಸ್ಟ್, ಫ್ಲೈಯಿಂಗ್ ಸ್ಕ್ವಾಡ್ಗಳನ್ನು ಬಳಸುವುದಾಗಿ ಹೇಳಿದ ಅವರು, ಮೀಡಿಯಾ ಸರ್ಟಿಫಿಕೇಷನ್‌ ಕಮಿಟಿ ರಚಿಸಿ ಮಾಧ್ಯಮಗಳಲ್ಲಿ ಬರುವ ಜಾಹೀರಾತುಗಳನ್ನು ಪರಿಶೀಲಿಸಲಾಗುವುದು ಮತ್ತು ಪೇಯ್ಡ್ ನ್ಯೂಸ್ಗಳ ಮೇಲೂ ವಿಶೇಷ ಗಮನ ಹರಿಸಲಾಗುವುದು ಎಂದು ಅವರು ತಿಳಿಸಿದರು. 


ಎಲ್ಲ ಕ್ಷೇತ್ರಗಳ ಮತದಾನಕ್ಕೆ ವಿವಿಪ್ಯಾಟ್‌ ಮಷಿನ್‌ಗಳ ಬಳಕೆ ಮಾಡಲಿದ್ದು, ಇವುಗಳ ಬಗ್ಗೆ ಜನರಿಗೆ ತಿಳುವಳಿಕೆ ನೀಡುವುದರೊಂದಿಗೆ ಮತದಾನದ ಗುರುತಿನ ಚೀಟಿಯೊಂದಿಗೆ ಆಧಾರ್‌ ಜೋಡಣೆಗೆ ಮನವಿ ಮಾಡಲಾಗಿದೆ ಎಂಡು ಅವರು ತಿಳಿಸಿದರು.