ಬೆಂಗಳೂರು: ಕೆ.ಆರ್.ಪುರಂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾರಾಯಣಸ್ವಾಮಿ ಹೊರಮಾವು ಬಿಬಿಎಂಪಿ ಕಂದಾಯ ಕಚೇರಿಗೆ ಪೆಟ್ರೋಲ್ ಸುರಿದು ಬೆಂಕಿ ಹಾಕುವ ಬೆದರಿಕೆ ಒಡ್ಡಿದ ಘಟನೆ ಮಂಗಳವಾರ ಬೆಳಕಿಗೆ ಬಂದಿದೆ. 


COMMERCIAL BREAK
SCROLL TO CONTINUE READING

ಜಮೀನು ಖಾತೆ ಮಾಡಿಕೊಡದಿದ್ದರೆ ಕಚೇರಿಗೆ ಬೆಂಕಿ ಹಚ್ಚುವುದಾಗಿ ಅಲ್ಲಿದ್ದ ಅಧಿಕಾರಿಗಳನ್ನು ಬೆದರಿಸಿದ ನಾರಾಯಣ ಸ್ವಾಮಿ ಅವರು ತನ್ನ ಆಪ್ತನ ಕೈಯಲ್ಲಿದ್ದ  ಪೆಟ್ರೋಲ್ ಬಾಟಲ್ ಅನ್ನು ಕಿತ್ತುಕೊಂಡು ಕಚೇರಿಯ ಕಡತಗಳಿರುವ ಕವಾಟಿಗೆ ಪೆಟ್ರೋಲ್ ಎರಚಿದರು ಎಂದು ಮೂಲಗಳಿಂದ ತಿಳಿದುಬಂದಿದೆ. 
ಈ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.


ಶಾಸಕ ಭೈರತಿ ಬಸವರಾಜ್ ಆಪ್ತರಾಗಿರುವ ಸದಸ್ಯ ನಾರಾಯಣ ಸ್ವಾಮಿ ಎಂಬವರು ಫೆಬ್ರವರಿ 16ರಂದು ಈ ಕೃತ್ಯ ನಡೆಸಿದ್ದು, ಅವರ ಗೂಂಡಾಗಿರಿ ವರ್ತನೆಯ ವೀಡಿಯೋ ಸಾಮಾಜಿಕ ಜಾಲಾತಾಣಗಳಲ್ಲಿ ವೈರಲ್ ಆಗಿದ್ದು, ಸಿಸಿಟಿವಿ ಫೂಟೇಜ್ ಜೀ ವಾಹಿನಿಗೆ ದೊರೆತಿದೆ. 



ಕಾಂಗ್ರೆಸ್ ಶಾಸಕ ಹ್ಯಾರಿಸ್ ಪುತ್ರ ಮೊಹಮದ್ ಹ್ಯಾರಿಸ್ ನಲಪಾಡ್ ಉದ್ಯಮಿ ಪುತ್ರ ವಿದ್ವತ್ ಮೇಲೆ ಗುಂಡಾಗಿರಿ ನಡೆಸಿದ ಘಟನೆ ಇನ್ನೂ ಹಸಿಯಾಗಿರುವಾಗಲೇ, ಈ ಘಟನೆ ಬೆಳಕಿಗೆ ಬಂದಿದ್ದು, ಕಾಂಗ್ರೆಸ್ ವಲಯದಲ್ಲಿ ಕಸಿವಿಸಿ ಉಂಟುಮಾಡಿದೆ. 


ಬಂಧನಕ್ಕೆ ಸೂಚನೆ
ಮಾಧ್ಯಮಗಳಲ್ಲಿ ನಾರಾಯಣಸ್ವಾಮಿ ಗುಂಡಾಗಿರಿ ಪ್ರಕರಣ ವರದಿಯಾಗುತ್ತಿದ್ದಂತೆ, ಮುಖ್ಯಮಂತ್ರಿ  ಸಿದ್ದರಾಮಯ್ಯ ಅವರು, ಯಾರೇ ತಪ್ಪು ಮಾಡಿದ್ದರೂ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ. ನಾರಾಯಣಸ್ವಾಮಿ ತಪ್ಪು ಮಾಡಿದ್ದರೆ ಅವರನ್ನು ಬಂಧಿಸಿ, ಕೂಡಲೇ ಕಾನೂನು ರೀತಿ ಕ್ರಮ ತೆಗೆದುಕೊಳ್ಳುವಂತೆ ಸಿದ್ದರಾಮಯ್ಯ ಪೊಲೀಸರಿಗೆ ಸೂಚನೆ ನೀಡಿದ್ದಾರೆ.