ಮಕ್ಕಳ ನಿರಂತರ ಕಲಿಕೆಗೆ ವಿದ್ಯಾಗಮ ಕಾರ್ಯಕ್ರಮ ಪೂರಕ -ಸಚಿವ ಎಸ್.ಸುರೇಶ ಕುಮಾರ್
ಮಕ್ಕಳನ್ನು ಕೊರೊನಾ ಸೋಂಕಿನಿಂದ ರಕ್ಷಿಸುವುದು ಹಾಗೂ ನಿರಂತರವಾಗಿ ಕಲಿಕೆಯ ಸಂಪರ್ಕದಲ್ಲಿ ಇರಿಸುವ ಉದ್ದೇಶದಿಂದ ರಾಜ್ಯದಾದ್ಯಂತ ವಿದ್ಯಾಗಮ ಕಾರ್ಯಕ್ರಮ ಜಾರಿಗೊಳಿಸಲಾಗಿದೆ. ಬಾಲ್ಯವಿವಾಹ, ಬಾಲಕಾರ್ಮಿಕ ಪದ್ಧತಿ ನಿಯಂತ್ರಣಕ್ಕೂ ವಿದ್ಯಾಗಮ ಸಹಕಾರಿಯಾಗಲಿದೆ ಎಂದು ಪ್ರಾಥಮಿಕ, ಪ್ರೌಢಶಿಕ್ಷಣ ಹಾಗೂ ಸಕಾಲ ಸಚಿವರಾದ ಎಸ್.ಸುರೇಶಕುಮಾರ್ ಹೇಳಿದರು.
ಬೆಂಗಳೂರು: ಮಕ್ಕಳನ್ನು ಕೊರೊನಾ ಸೋಂಕಿನಿಂದ ರಕ್ಷಿಸುವುದು ಹಾಗೂ ನಿರಂತರವಾಗಿ ಕಲಿಕೆಯ ಸಂಪರ್ಕದಲ್ಲಿ ಇರಿಸುವ ಉದ್ದೇಶದಿಂದ ರಾಜ್ಯದಾದ್ಯಂತ ವಿದ್ಯಾಗಮ ಕಾರ್ಯಕ್ರಮ ಜಾರಿಗೊಳಿಸಲಾಗಿದೆ. ಬಾಲ್ಯವಿವಾಹ, ಬಾಲಕಾರ್ಮಿಕ ಪದ್ಧತಿ ನಿಯಂತ್ರಣಕ್ಕೂ ವಿದ್ಯಾಗಮ ಸಹಕಾರಿಯಾಗಲಿದೆ ಎಂದು ಪ್ರಾಥಮಿಕ, ಪ್ರೌಢಶಿಕ್ಷಣ ಹಾಗೂ ಸಕಾಲ ಸಚಿವರಾದ ಎಸ್.ಸುರೇಶಕುಮಾರ್ ಹೇಳಿದರು.
ಜಿಲ್ಲೆಯ ಸಲಕಿನಕೊಪ್ಪ ಮತ್ತು ಬಾಡ ಗ್ರಾಮಗಳಲ್ಲಿ ವಿದ್ಯಾಗಮ ಚಟುವಟಿಕೆಗಳನ್ನು ಪರಿಶೀಲಿಸಿ ಅವರು ಮಾತನಾಡಿದರು.
ಶಾಲೆಗಳು ಪ್ರಾರಂಭವಾಗುವುದು ಇನ್ನೂ ವಿಳಂಬವಾಗುವ ಸಾದ್ಯತೆಗಳು ಇರುವುದರಿಂದ ಮಕ್ಕಳು ಶಿಕ್ಷಣ ಮತ್ತು ಪಠ್ಯದಿಂದ ದೂರವಾಗಿ ಬಾಲ್ಯವಿವಾಹ, ಬಾಲಕಾರ್ಮಿಕ ಪದ್ಧತಿಗೆ ಈಡಾಗುವ ಸಂಭವ ತಪ್ಪಿಸಲು ವಿದ್ಯಾಗಮ ಕಾರ್ಯಕ್ರಮ ರೂಪಿಸಲಾಗಿದೆ. ಶಾಲೆಯಿಂದ ಮಕ್ಕಳು ಹೊರಗುಳಿದರೆ ಅವರನ್ನು ಪುನ: ಮುಖ್ಯವಾಹಿನಿಗೆ ಕರೆತರುವುದು ಕಷ್ಟವಾಗಲಿದೆ. ಸರ್ಕಾರಿ ಶಾಲೆಗಳಷ್ಟೇ ಅಲ್ಲದೇ ಖಾಸಗಿ ಶಾಲೆಗಳು ಕೂಡಾ ವಿದ್ಯಾಗಮ ಕಾರ್ಯಕ್ರಮ ಅನುಷ್ಠಾನಗೊಳಿಸಬಹುದು ಅಥವಾ ಇದಕ್ಕಿಂತಲೂ ಉತ್ತಮವಾದ ಚಟುವಟಿಕೆಯೊಂದಿಗೆ ಮಕ್ಕಳ ಸಂಪರ್ಕ ಹೊಂದಿರಬೇಕು.
ಧಾರವಾಡ ವಿಭಾಗದ ಶಿಕ್ಷಕರ ಕಾರ್ಯಕ್ಕೆ ಸಚಿವರ ಮೆಚ್ಚುಗೆ: ವಿದ್ಯಾಗಮ ಯಶಸ್ವಿಗೆ ಧಾರವಾಡ ವಿಭಾಗದ ಶಿಕ್ಷಕರು ಉತ್ತಮ ಕಾರ್ಯ ಮಾಡುತ್ತಿದ್ದಾರೆ. ಹಳ್ಳಿಗಳಲ್ಲಿ ಸರದಿ ಆಧಾರದಲ್ಲಿ ಎಲ್ಲ ಪ್ರದೇಶಗಳಲ್ಲಿ ಶಿಕ್ಷಕರು ತೆರಳಿ ಪಠ್ಯದ ಕುರಿತು ಮಕ್ಕಳಲ್ಲಿರುವ ಸಂದೇಹಗಳನ್ನು ನಿವಾರಿಸುತ್ತಿದ್ದಾರೆ. ಇದು ಶಾಲೆಯ ಬಗ್ಗೆ ಮಕ್ಕಳ ಆಸಕ್ತಿಯನ್ನು ಉಳಿಸಿಕೊಳ್ಳಲು ಸಹಕಾರಿಯಾಗಿದೆ ಎಂದರು. ಅದೇ ರೀತಿ ಇತ್ತೀಚಿಗೆ ಜರುಗಿದ ಎಸ್‍ಎಸ್‍ಎಲ್‍ಸಿ ಪರೀಕ್ಷೆ ವೇಳೆ ಈ ಭಾಗದ ಪ್ರೌಢಶಾಲಾ ಶಿಕ್ಷಕರು ತಮ್ಮ ಮೋಟಾರ್‍ಬೈಕ್‍ಗಳ ಮೂಲಕ ವಿದ್ಯಾರ್ಥಿಗಳ ಮನೆಗಳಿಗೆ ತೆರಳಿ ಮಾರ್ಗದರ್ಶನ ಮಾಡಿದ್ದು ಪ್ರಶಂಸನೀಯವಾಗಿದೆ. ಇಂತಹ ಪ್ರಯತ್ನಗಳಿಂದ ಅನೇಕ ದುರ್ಬಲ ಮತ್ತು ಅನಾರೋಗ್ಯ ಪೀಡಿತ ಮಕ್ಕಳು ಕೂಲಿಕಾರರು ಹಾಗೂ ಕಾರ್ಮಿಕರ ಮಕ್ಕಳು ಉತ್ತಮ ದರ್ಜೆಯಲ್ಲಿ ಉತ್ತೀರ್ಣರಾಗಲು ಸಾಧ್ಯವಾಗಿದೆ ಎಂದು ಸಚಿವರು ತೃಪ್ತಿ ವ್ಯಕ್ತಪಡಿಸಿದರು.
ಕೊರೊನಾ ಶುಲ್ಕ ಸಂಗ್ರಹಿಸಿದರೆ ಕಾನೂನು ಕ್ರಮ: ಕೊವಿಡ್ ನಿಯಂತ್ರಣದ ಹೆಸರಿನಲ್ಲಿ ಕೆಲವು ಖಾಸಗಿ ಶಾಲೆಗಳು ವಿದ್ಯಾರ್ಥಿಗಳಿಂದ ಕೊರೊನಾ ಹೆಸರಿನಲ್ಲಿ ಶುಲ್ಕ ಸಂಗ್ರಹಣೆ ಮಾಡುತ್ತಿರುವ ಬಗ್ಗೆ ಮಾಹಿತಿ ಬರುತ್ತಿದೆ. ಅಂತಹ ಯಾವುದೇ ಶುಲ್ಕ ವಿಧಿಸಲು ಅವಕಾಶವಿಲ್ಲ. ನಿಯಮಬಾಹಿರವಾಗಿ ಯಾವುದಾದರೂ ಶಿಕ್ಷಣ ಸಂಸ್ಥೆಗಳು ಶುಲ್ಕ ವಸೂಲಿ ಮಾಡಿದರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಪ್ರಾಥಮಿಕ, ಪ್ರೌಢಶಿಕ್ಷಣ ಹಾಗೂ ಸಕಾಲ ಸಚಿವರಾದ ಎಸ್. ಸುರೇಶಕುಮಾರ್ ಹೇಳಿದರು.
ಬಾಡ ಗ್ರಾಮದಲ್ಲಿ ಮಾದ್ಯಮ ಪ್ರತಿನಿಧಿಗಳ ಪ್ರಶ್ನೆಯೊಂದಕ್ಕೆ ಅವರು ಈ ಉತ್ತರ ನೀಡಿದರು. ಖಾಸಗಿ ಶಿಕ್ಷಣ ಸಂಸ್ಥೆಗಳು ತಮ್ಮಲ್ಲಿ ದುಡಿಯುತ್ತಿರುವ ಶಿಕ್ಷಕರು ಹಾಗೂ ಸಿಬ್ಬಂದಿಯ ಹಿತ ಕಾಯಬೇಕು. ಮಕ್ಕಳಿಗೆ ನಿರ್ಧಿಷ್ಟ ವ್ಯಕ್ತಿ ಅಥವಾ ವ್ಯಾಪಾರಿಗಳಲ್ಲಿ ಪಠ್ಯಪುಸ್ತಕ, ಸಮವಸ್ತ್ರ ಖರೀದಿಸಲು ಸೂಚನೆ ನೀಡಬಾರದು ಎಂದು ಸಚಿವರು ಹೇಳಿದರು.
ವಿದ್ಯಾಗಮ ಮಕ್ಕಳಿಂದ ಪ್ರಾರ್ಥನೆ ಹೇಳಿಸಿ ಪಾಠ ಮಾಡಿದ ಶಿಕ್ಷಣ ಸಚಿವರು : ವಿದ್ಯಾಗಮ ಕಾರ್ಯಕ್ರಮದ ಪರಿಶೀಲನೆಗಾಗಿ ಇಂದು ಧಾರವಾಡ ಗ್ರಾಮೀಣ ವಿಭಾಗದ ಸಲಕಿನಕೊಪ್ಪ ಹಾಗೂ ಬಾಡ ಗ್ರಾಮಗಳಿಗೆ ಭೇಟಿ ನೀಡಿದ ಶಿಕ್ಷಣ ಸಚಿವ ಎಸ್. ಸುರೇಶಕುಮಾರ್ ಅವರು ಮಕ್ಕಳಿಂದ ನಾಡಗೀತೆ ಹಾಡಿಸಿ ಪಾಠ, ಮಗ್ಗಿ ಹೇಳಿಸಿ ಮಕ್ಕಳ ಶಿಕ್ಷಣಮಟ್ಟ ಪರೀಕ್ಷಿಸಿದರು.
ಸಲಕಿನಕೊಪ್ಪ ಗ್ರಾಮದಲ್ಲಿ ವಿದ್ಯಾಗಮ ಪಾಠದಲ್ಲಿ ನಿರತರಾಗಿರುವ ಮಕ್ಕಳಿಗೆ ಭಾರತದ ಮೊದಲ ರಾಷ್ಟ್ರಪತಿ ಯಾರು, ಮಗ್ಗಿಯನ್ನು ಕ್ರಮವಾಗಿ ಹಾಗೂ ವಿರುದ್ಧವಾಗಿ ಹೇಳಿಸಿದರು. ಮಕ್ಕಳ ಕೈಬರಹ ಕಂಡು ಸಂತಸಪಟ್ಟರು. ಕೊರೊನಾ ನಿಯಂತ್ರಣಕ್ಕೆ ಅನುಸರಿಸಬೇಕಾದ ಕ್ರಮಗಳನ್ನು ಮಕ್ಕಳಿಂದ ವಿವರಿಸಲು ಹೇಳಿದರು. ಹಾಗೂ ಶಾಲೆ ಪುನರಾರಂಭದ ಕುರಿತು ಮಕ್ಕಳ ಅಭಿಪ್ರಾಯ ಆಲಿಸಿದರು.
ಬಾಡ ಗ್ರಾಮದಲ್ಲಿ ಮಕ್ಕಳಿಂದ ನಾಡಗೀತೆ ಹಾಡಿಸಿದ ಸಚಿವರು, ನಾಡಗೀತೆಯ ರಚನೆಕಾರರು, ರಾಷ್ಟ್ರಗೀತೆಯ ಕರ್ತೃ, ಅವರಿಗೆ ದೊರೆತ ಪ್ರಶಸ್ತಿಗಳು, ಭಾರತದ ಈಗಿನ ರಾಷ್ಟ್ರಪತಿ ಯಾರು ಎಂಬ ಪ್ರಶ್ನೆಗಳನ್ನು ಕೇಳಿ ಕಲಿಕಾಮಟ್ಟ ಪರಿಶೀಲಿಸಿದರು.
ಸಾರ್ವಜನಿಕ ಶಿಕ್ಷಣ ಇಲಾಖೆಯ ಅಪರ ಆಯುಕ್ತ ಮೇಜರ್ ಸಿದ್ಧಲಿಂಗಯ್ಯ ಹಿರೇಮಠ, ಉಪನಿರ್ದೇಶಕ ಮೋಹನಕುಮಾರ್ ಹಂಚಾಟೆ, ಕ್ಷೇತ್ರ ಶಿಕ್ಷಣಾಧಿಕಾರಿ ಉಮೇಶ್ ಬೊಮ್ಮಕ್ಕನವರ, ಶಿಕ್ಷಕರಾದ ಪಿ.ಎಂ. ಪಾಟೀಲ, ಜಿ.ಎಂ. ಕೋಟಿಗೌಡರ, ಜಿನ್ನಿ ತರಗಲ್, ಶಾಲಾ ಸುಧಾರಣಾ ಸಮಿತಿಯ ಅಧ್ಯಕ್ಷರಾದ ಮಲ್ಲಪ್ಪ ಭಾವಿ ಮತ್ತಿತರರು ಇದ್ದರು.
ವಾರ್ತಾ ಇಲಾಖೆಯ ವಾಹನದಲ್ಲಿ ಸಚಿವರು : ವಿದ್ಯಾಗಮ ಪರಿಶೀಲನೆಗಾಗಿ ಸಲಕಿನಕೊಪ್ಪ ಗ್ರಾಮದಿಂದ ಬಾಡ ಗ್ರಾಮಕ್ಕೆ ತೆರಳುವ ವೇಳೆ ತಮ್ಮ ಕಾರಿನಿಂದಿಳಿದ ಸಚಿವರು ನೇರವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಪತ್ರಿಕಾ ವಾಹನ ಏರಿದರು. ಮಾಧ್ಯಮ ಪ್ರತಿನಿಧಿಗಳೊಂದಿಗೆ ಸರಳವಾಗಿ ಬೆರೆತ ಅವರು ಕೊರೊನಾ ಸಂಕಷ್ಟ ಕಾಲದಲ್ಲಿ ಶೈಕ್ಷಣಿಕ ಚಟುವಟಿಕೆಗಳನ್ನು ಕ್ರಿಯಾಶೀಲವಾಗಿರಿಸಲು ಅನುಸರಿಸಬಹುದಾದ ಕ್ರಮಗಳು ಹಾಗೂ ಶಾಲಾ ಪುನರಾರಂಭದ ಬಗ್ಗೆ ಮುಕ್ತವಾಗಿ ಚರ್ಚಿಸಿದರು.
ಮಾಹಿತಿ: ವಾರ್ತಾ ಇಲಾಖೆ