VIDEO: ಎಚ್ಐವಿ ಪೀಡಿತೆ ಆತ್ಮಹತ್ಯೆ; ಕೆರೆ ನೀರನ್ನೇ ಖಾಲಿ ಮಾಡಿಸಿದ ಗ್ರಾಮಸ್ಥರು!
36 ಎಕರೆ ಕೆರೆಯಲ್ಲಿ ತುಂಬಿರುವ ಸಂಪೂರ್ಣ ನೀರನ್ನು ಗ್ರಾಮಸ್ಥರು ಖಾಲಿ ಮಾಡಿಸಿರುವ ಘಟನೆ ಧಾರವಾಡ ಜಿಲ್ಲೆಯ ಮೊರಬ ಗ್ರಾಮದಲ್ಲಿ ನಡೆದಿದೆ.
ಧಾರವಾಡ: ಎಚ್‌ಐವಿ ಪೀಡಿತೆ ಕೆರೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡ ಕಾರಣ 36 ಎಕರೆ ಕೆರೆಯಲ್ಲಿ ತುಂಬಿರುವ ಸಂಪೂರ್ಣ ನೀರನ್ನು ಗ್ರಾಮಸ್ಥರು ಖಾಲಿ ಮಾಡಿಸಿರುವ ಘಟನೆ ಧಾರವಾಡ ಜಿಲ್ಲೆಯ ಮೊರಬ ಗ್ರಾಮದಲ್ಲಿ ನಡೆದಿದೆ. ಈ ನೀರನ್ನು ಬಳಸಿದವರೂ ಕೂಡ ಎಚ್ಐವಿ / ಏಡ್ಸ್ ಗೆ ತುತ್ತಾಗಬಹುದು ಎಂದು ಭಯಭೀತರಾಗಿ ಗ್ರಾಮಸ್ಥರು ಹೀಗೆ ಮಾಡಿದ್ದಾರೆ.
ಮಾಹಿತಿ ಪ್ರಕಾರ, ಕೆರೆಗೆ ತಾಜಾ ನೀರನ್ನು ತುಂಬುವವರೆಗೂ ತಾವು ಈ ನೀರನ್ನು ಬಳಸುವುದಿಲ್ಲ ಎಂದು ಗ್ರಾಮಸ್ಥರು ಸ್ಥಳೀಯ ಆಡಳಿತ ಅಧಿಕಾರಿಗಳಿಗೆ ತಿಳಿಸಿದ್ದಾರೆ.
ಎಚ್‌ಐವಿ ಪೀಡಿತೆ ಆತ್ಮಹತ್ಯೆ ಮಾಡಿಕೊಂಡ ಬಳಿಕ ಗ್ರಾಮದ ಜನರು ಕೆರೆಯ ನೀರನ್ನು ತೆಗೆದುಹಾಕಲು ಆರಂಭಿಸಿದ್ದಾರೆ. ಎಚ್ಐವಿ ನೀರಿನಿಂದ ಹರಡುವುದಿಲ್ಲ. ಇದು ಸಂಪೂರ್ಣವಾಗಿ ಅವೈಜ್ಞಾನಿಕವಾಗಿದೆ ಎಂದು ಹುಬ್ಬಳ್ಳಿ-ಧಾರವಾಡ ಸಿಟಿ ಮುನಿಸಿಪಲ್ ಕಾರ್ಪೊರೇಶನ್ (ಮುಖ್ಯ ವೈದ್ಯಕೀಯ ಅಧಿಕಾರಿ) ಡಾ. ಪ್ರಭು ಬಿರಾದರ್ ಸುದ್ದಿಸಂಸ್ಥೆ ಎಎನ್ಐ ಗೆ ತಿಳಿಸಿದ್ದಾರೆ.
ಆದರೆ ಇದರಿಂದ ಯಾವುದೇ ಅಪಾಯವಿಲ್ಲ ಎಂದು ಸ್ಥಳೀಯ ಆಡಳಿತ ಹೇಳಿದರೂ ಗ್ರಾಮಸ್ಥರು ಕೇಳದೇ ಒತ್ತಾಯ ಮಾಡಿದ ಕಾರಣ ಕೆರ ನೀರನ್ನು ಖಾಲಿ ಮಾಡಿ ಕೆರೆಗೆ ಮತ್ತೆ ಶುದ್ಧ ನೀರನ್ನು ತುಂಬಿಸುವ ನಿರ್ಧಾರಕ್ಕೆ ಬರಲಾಗಿದೆ. ಮಲಪ್ರಭಾ ನದಿಯ ಕಾಲುವೆ ನೀರಿನಿಂದ ಈ ಕೆರೆಯನ್ನು ತುಂಬಿಸಲಾಗಿತ್ತು. ಆದರೆ ಈಗ ಸಂಪೂರ್ಣ ನೀರನ್ನು ಖಾಲಿ ಮಾಡಲಾಗಿದೆ. ಇನ್ನು 10-15 ದಿನಗಳಲ್ಲಿ ಕೆರೆಯನ್ನು ಭರ್ತಿ ಮಾಡಲಾಗುವುದು ಎಂದು ಸ್ಥಳೀಯ ಆಡಳಿತ ತಿಳಿಸಿದೆ.