10 ಕೋಟಿಗೂ ಹೆಚ್ಚು ದೇಣಿಗೆ ನೀಡುವ ಸಂಸ್ಥೆಗಳ ಹೆಸರನ್ನು ಗ್ರಾಮಗಳಿಗೆ ನಾಮಕರಣ ಮಾಡಲಾಗುವುದು: ಸಿಎಂ ಯಡಿಯೂರಪ್ಪ
ಕಳೆದ ಕೆಲ ದಿನಗಳಿಂದ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ನೆರೆ ಪರಿಸ್ಥಿತಿ ನಿರ್ಮಾಣವಾಗಿ ಲಕ್ಷಾಂತರ ಜನರು ನಿರಾಶ್ರಿತರಾಗಿದ್ದಾರೆ. ಇವರ ನೆರವಿಗೆ ಎಲ್ಲ ಕೈಗಾರಿಕೋದ್ದಿಮೆದಾರರು ಉದಾರವಾಗಿ ದೇಣಿಗೆ ನೀಡುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮನವಿ.
ಬೆಂಗಳೂರು: ಪ್ರವಾಹ ಪೀಡಿತ ಗ್ರಾಮಗಳ ಪುನಶ್ಚೇತನಕ್ಕೆ 10 ಕೋಟಿ ರೂಪಾಯಿಗೂ ಹೆಚ್ಚು ದೇಣಿಗೆ ನೀಡುವ ಸಂಸ್ಥೆಗಳ ಹೆಸರನ್ನು ಪುನಶ್ಚೇತನಗೊಳ್ಳುವ ಗ್ರಾಮಗಳಿಗೆ ನಾಮಕರಣ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.
ಕಳೆದ ಕೆಲ ದಿನಗಳಿಂದ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ನೆರೆ ಪರಿಸ್ಥಿತಿ ನಿರ್ಮಾಣವಾಗಿ ಲಕ್ಷಾಂತರ ಜನರು ನಿರಾಶ್ರಿತರಾಗಿದ್ದಾರೆ. ಇವರ ನೆರವಿಗೆ ಎಲ್ಲ ಕೈಗಾರಿಕೋದ್ದಿಮೆದಾರರು ಉದಾರವಾಗಿ ದೇಣಿಗೆ ನೀಡುವಂತೆ ಇದೇ ವೇಳೆ ಮನವಿ ಮಾಡಿದರು.
ಬುಧವಾರದಂದು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಎಲ್ಲಾ ಉದ್ದಿಮೆದಾರರನ್ನು ಆಹ್ವಾನಿಸಿ ನೆರೆ ಪೀಡಿತ ಪ್ರದೇಶಗಳಿಗೆ ದೇಣಿಗೆ ನೀಡುವಂತೆ ಅವರು ಮನವಿ ಮಾಡಿದರು. ಸರಕಾರದ ಕರೆಗೆ ಮನ್ನಣೆ ನೀಡಿ 60ಕ್ಕೂ ಹೆಚ್ಚು ಕಂಪನಿ ಮುಖ್ಯಸ್ಥರು ಆಗಮಿಸಿ ನೆರವು ನೀಡುವ ಭರವಸೆ ನೀಡಿದರು.
ಸಭೆಯಲ್ಲಿ ಉದ್ದಿಮೆದಾರರನ್ನು ಉದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ರಾಜ್ಯದಲ್ಲಿ ಈ ಬಾರಿ ಅತೀವ ಮಳೆ ಮತ್ತು ಪ್ರವಾಹದಿಂದ ಜನ ತತ್ತರಿಸಿದ್ದಾರೆ. 22 ಜಿಲ್ಲೆಯ 103 ತಾಲೂಕುಗಳನ್ನು ನೆರೆ ಪೀಡಿತ ಎಂದು ಘೋಷಿಸಲಾಗಿದೆ. ಮಹಾರಾಷ್ಟ್ರ, ಕೇರಳ, ಕರ್ನಾಟಕದಲ್ಲಿ ಮಳೆಯಿಂದ ಭೂ ಕುಸಿತ ಸಂಭವಿಸಿದೆ. ಹಳ್ಳಿ, ಪಟ್ಟಣ ಜಲಾವೃತವಾಗಿದೆ. ಸೇತುವೆಗಳು ಮುಳುಗಿದ್ದು, ರಸ್ತೆಗಳು ಹಾಳಾಗಿವೆ. ರಕ್ಷಣಾ ಕಾರ್ಯಗಳು ನಡೆಯುತ್ತಿವೆ. ಇದುವರೆಗೂ 6.97 ಲಕ್ಷ ಜನರನ್ನು ಪರಿಹಾರ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ. 1160 ಪರಿಹಾರ ಕೇಂದ್ರ ತೆರೆಯಲಾಗಿದೆ ಎಂದು ವಿವರ ನೀಡಿದರು.
56 ಸಾವಿರ ಮನೆ ವಾಸಕ್ಕೆ ಯೋಗ್ಯವಿಲ್ಲ ಎಂದು ಘೋಷಿಸಲಾಗಿದೆ. ಪ್ರವಾಹ ಪೀಡಿತ ಸ್ಥಳಗಳಿಗೆ ತೆರಳಿದ್ದೇವೆ. ರಕ್ಷಣೆ, ಪರಿಹಾರ ಕೆಲಸ ನಡೆಯುತ್ತಿದೆ. ಕಳೆದೆರಡು ದಿನದಿಂದ ಮಳೆ ಹತೋಟಿಗೆ ಬಂದಿದೆ. ಇನ್ನೂ ಸಂಪೂರ್ಣ ಚಿತ್ರಣ, ನಷ್ಟ ತಿಳಿಯಲು ಕೆಲವು ದಿನ ಬೇಕಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.
22 ಜಿಲ್ಲೆಗಳ ಪೈಕಿ 200 ಗ್ರಾಮವನ್ನು ಸ್ಥಳಾಂತರಿಸುವ ಪರಿಸ್ಥಿತಿ ಇದೆ. ಇಂಥ ಸ್ಥಿತಿಯಲ್ಲಿ ಉದ್ಯಮಿದಾರರು ಸಹಾಯ ಹಸ್ತ ಚಾಚಬೇಕು. ಉದಾರ ಮನಸ್ಸಿನಿಂದ ದೇಣಿಗೆ ನೀಡಿ ಎಂದು ಮನವಿ ಮಾಡಿದರು. 10 ಕೋಟಿಗೂ ಹೆಚ್ಚು ನೆರವು ನೀಡಿದ ಸಂಸ್ಥೆಯ ಹೆಸರನ್ನೇ ಗ್ರಾಮಕ್ಕೆ ಇಡಲು ನಿರ್ಧರಿಸಲಾಗಿದೆ. ಆ ಗ್ರಾಮವನ್ನು ಹಣ ನೀಡುವ ಸಂಸ್ಥೆ ದತ್ತು ಪಡೆದುಕೊಂಡಂತೆ ಬಿಂಬಿಸಲಾಗುವುದು ಎಂದು ಮುಖ್ಯಮಂತ್ರಿ ಹೇಳಿದರು.
ಬಟ್ಟೆ, ಆಹಾರ ಧಾನ್ಯ ಇತರೆ ಮೂಲಸೌಕರ್ಯ ಒದಗಿಸಿಕೊಡುವ ಬದಲು ಹಣವನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡಿದರೆ ಸಂತ್ರಸ್ತರಿಗೆ ಹೆಚ್ಚು ನೆರವಾಗಲಿದೆ ಎಂದು ಯಡಿಯೂರಪ್ಪ ಇದೇ ಸಂದರ್ಭದಲ್ಲಿ ತಿಳಿಸಿದರು.
ನಮ್ಮ ಸರ್ಕಾರ ಎಲ್ಲಾ ಕೈಗಾರಿಕೋದ್ಯಮಿಗಳೊಂದಿಗಿದೆ:
ಎಲ್ಲಾ ಕೈಗಾರಿಕೋದ್ಯಮಿಗಳೊಂದಿಗೆ ನಮ್ಮ ಸರಕಾರ ಇದೆ. ನೀವು ಏನು ಸಹಕಾರ ಬಯಸುತ್ತೀರ ಅದನ್ನು ನಾವು ಕೊಡಲು ಸಿದ್ಧ. ಉದ್ಯಮ ನಡೆಸಲು ಬೇಕಾದ ಮೂಲಸೌಕರ್ಯಕ್ಕೆ ಯಾವುದೇ ರೀತಿಯ ಸಮಸ್ಯೆ ಮಾಡದಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಸರಕಾರದಿಂದ ಯಾವುದೇ ಸಮಸ್ಯೆ ತೊಡಕು ಆಗುವುದಿಲ್ಲ. ಒಂದು ವೇಳೆ ಅನಗತ್ಯ ಸಮಸ್ಯೆ ಆಗುತ್ತಿದ್ದರೆ ತಮ್ಮ ಗಮನಕ್ಕೆ ತನ್ನಿ ಎಂದು ಎಲ್ಲಾ ಸಂಸ್ಥೆಗಳ ಮುಖ್ಯಸ್ಥರಿಗೆ ಸಿಎಂ ಭರವಸೆ ನೀಡಿದರು.
ಸರಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯ ಭಾಸ್ಕರ್, ಕೈಗಾರಿಕೆ ಇಲಾಖೆ ಪ್ರಧಾನ ಕಾರ್ಯದರ್ಶಿ ಗೌರವ್ ಗುಪ್ತಾ, ಕೈಗಾರಿಕಾ ಇಲಾಖೆ ಆಯುಕ್ತೆ ಗುಂಜಲ್ ಕೃಷ್ಣ ಉಪಸ್ಥಿತರಿದ್ದರು.
*ಕಂಪನಿಗಳ ಕೊಡುಗೆ:*
ಬ್ರಿಟಾನಿಯಾ ಕಂಪನಿಯು ಆಹಾರ ಪದಾರ್ಥಗಳ ಕೊಡುಗೆ ನೀಡಿದೆ. ಟಿವಿಎಸ್ ಮೋಟಾರ್ ಸಂಸ್ಥೆ 1 ಕೋಟಿ ರೂ. ದೇಣಿಗೆಯನ್ನು ಸಿಎಂ ಪರಿಹಾರ ನಿಧಿಗೆ ನೀಡಲಿದೆ.
ಜಿಎಸ್‌ಕೆ ಸಂಸ್ಥೆ ಹಾಗೂ ಯೂನಿವರ್ಸಲ್ ಬಿಲ್ಡರ್ಸ್ ಎಲ್ಲಾ ಜಿಲ್ಲೆಯಲ್ಲೂ ಪ್ರಾಥಮಿಕ ಆರೋಗ್ಯ ಕೇಂದ್ರ ಪುನಶ್ಚೇತನಕ್ಕೆ ಆದ್ಯತೆ ನೀಡಲಿದೆ.
ಶಾಹಿ ಎಕ್ಸ್‌ಪೋರ್ಟ್ಸ್ ಮಹಿಳೆಯರಿಗೆ ಸೀರೆ ಹಾಗೂ ಉಡುಪುಗಳ ನೆರವು, ಕಾರ್ಪೋರೇಷನ್ ಬ್ಯಾಂಕ್ ಒಂದು ವಾರದಲ್ಲಿ ದೇಣಿಗೆ ಮೊತ್ತವನ್ನು ಸಿಎಂ ಪರಿಹಾರ ನಿಧಿಗೆ ನೀಡಲು ತೀರ್ಮಾನ, ಟಯೋಟ ಸಂಸ್ಥೆಯು 2 ಕೋಟಿ ರೂ. ದೇಣಿಗೆ ನೀಡಲು ನಿರ್ಧಾರ, ಲೋಗೋಸ್ ಗ್ರೂಪ್ 25 ಲಕ್ಷ ರೂ. ದೇಣಿಗೆ, ಕ್ರೆಡಾಯ್ 3 ಕೋಟಿ ರೂಪಾಯಿ, ಯುನೈಟೆಡ್ ಟೆಕ್ನಾಲಜಿ ಅಗತ್ಯ ಮೂಲಸೌಕರ್ಯ ಪೂರೈಕೆ, ಜೆಕೆ ಸಿಮೆಂಟ್, ಆಹಾರ ಪದಾರ್ಥಗಳ ವಿತರಣೆ, ವೋಲ್ವೋ ಗ್ರೂಪ್‌ನ ನೌಕರರ ಒಂದು ದಿನದ ಸಂಬಳ ಸೇರಿದಂತೆ ಇತರೆ ಕಂಪನಿಗಳು ಸಹ ತಮ್ಮಕೈಲಾದ ಸಹಾಯ ಮಾಡುವುದಾಗಿ ಭರವಸೆ ನೀಡಿದವು. ಇನ್ನು ಕೆಲ ಸಂಸ್ಥೆಗಳು ತಮ್ಮ ನೆರವಿನ ಬಗ್ಗೆ ಸಭೆ ನಡೆಸಿ ಪರಿಹಾರ ನಿಧಿಗೆ ಹಣ ನೀಡುವುದಾಗಿ ಭರವಸೆ ನೀಡಿದವು.