ಹಾಸನ: ಕೊಡಗಿನಲ್ಲಿ ಉಂಟಾಗಿರುವ ಭಾರೀ ಪ್ರವಾಹದಿಂದಾಗಿ ತತ್ತರಿಸಿ, ನಿರಾಶ್ರಿತ ಕೇಂದ್ರದಲ್ಲಿ ಆಶ್ರಯ ಪಡೆದಿರುವ ಜನರನ್ನು ಭೇಟಿ ಮಾಡಿದ ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಡಿ.ರೇವಣ್ಣ ಅವರು, ಅಲ್ಲಿ ಆಶ್ರಯ ಪಡೆದಿರುವ ಪ್ರವಾಹ ಸಂತ್ರಸ್ತರಿಗೆ ಬಿಸ್ಕೆಟ್ ಪ್ಯಾಕೆಟ್'ಗಳನ್ನು ಕೈಗೆ ನೀಡದೆ ಎಸೆದಿರುವುದು ವ್ಯಾಪಕ ಟೀಕೆಗೆ, ಆಕ್ರೋಶಕ್ಕೆ ಕಾರಣವಾಗಿದೆ. 


COMMERCIAL BREAK
SCROLL TO CONTINUE READING

ಕಳೆದ ಕೆಲ ದಿನಗಳಿಂದ ಕೊಡಗಿನಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಪ್ರವಾಹ ಎದುರಾಗಿದ್ದು, ಪ್ರವಾಹದಲ್ಲಿ ಸಿಲುಕಿದ್ದ 3000ಕ್ಕೂ ಹೆಚ್ಚು ಜನರನ್ನು ರಕ್ಷಣಾ ಪಡೆಗಳು ರಕ್ಷಿಸಿವೆ. ಸರ್ಕಾರ ಇವರಿಗಾಗಿ ಗಂಜಿ ಕೇಂದ್ರ, ಆಶ್ರಯ ಕೇಂದ್ರಗಳನ್ನು ತೆರೆದಿದ್ದು, ಅವರ ಆರೈಕೆಯಲ್ಲಿ ನಿರತವಾಗಿದೆ. ರಾಜ್ಯದ ಜನತೆ ಕೂಡ ಪ್ರವಾಹ ಸಂತ್ರಸ್ಥರಿಗಾಗಿ ಆಹಾರ, ಬಟ್ಟೆ, ಔಷಧಿ ಸೇರಿದಂತೆ ಅಗತ್ಯ ವಸ್ತುಗಳ ನೆರವಿನ ಮಹಾಪೂರವನ್ನೇ ಹರಿಸಿದ್ದಾರೆ. ಆದರೆ, ಈ ಮಧ್ಯೆ ಸಚಿವ ರೇವಣ್ಣ ಅವರ ವರ್ತನೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. 


ಈ ಹಿಂದೆ ನಿರಾಶ್ರಿತ ಕೇಂದ್ರಕ್ಕೆ ಭೇಟಿ ನೀಡಿ, ಹಾಸನ ಕೆಎಂಎಫ್​ನಿಂದ ಉಚಿತವಾಗಿ ಸಾವಿರಾರು ಲೀಟರ್ ಹಾಲು ಮತ್ತು ಬಿಸ್ಕೆಟ್ ಸರಬರಾಜು ಮಾಡಿ ಮಾನವೀಯತೆ ಮೆರೆದಿದ್ದ ರೇವಣ್ಣ ಅವರು, ಭಾನುವಾರ ಜಿಲ್ಲೆಯ ರಾಮನಾಥಪುರದಲ್ಲಿನ ಗಂಜಿ ಕೇಂದ್ರಕ್ಕೆ ಭೇಟಿ ನೀಡಿ, ಸಂತ್ರಸ್ತರಿಗೆ ಬಿಸ್ಕೆಟ್ ಎಸೆದು ಪ್ರಾಣಿಗಳಂತೆ ಉಪಚರಿಸಿದ್ದಾರೆ. ಈ ಬಗ್ಗೆ ರಾಜ್ಯಾದ್ಯಂತ ವ್ಯಾಪಕ ಟೀಕೆ ವ್ಯಕ್ತವಾಗಿದೆ.



ಮತ್ತೊಂದೆಡೆ, ಕೆಲವರು ಅಲ್ಲಿ ಸ್ಥಳದ ಅಭಾವ ಇದ್ದುದರಿಂದ ಸಚಿವರು ಮುಂದೆ ಹೋಗಲಾಗದೆ, ಹಿಂದೆ ಇದ್ದ ಜನರಿಗೆ ಬಿಸ್ಕೆಟ್ ಹಿಡಿಯುವಂತೆ ಸೂಚಿಸಿ ಎಸೆದಿದ್ದಾರೆಯೇ ಹೊರತು, ಯಾವುದೇ ದುರುದ್ದೇಶದಿಂದಲ್ಲ ಎಂದು ರೇವಣ್ಣ ಅವರ ಬೆಂಬಲಿಗರು ಸಮರ್ಥಿಸಿಕೊಂಡಿದ್ದಾರೆ. ಸದ್ಯ ಆ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದ್ದು, ವಿರೋಧ ಪಕ್ಷ ಬಿಜೆಪಿ ಸಹ ಸಚಿವರ ವರ್ತನೆಯನ್ನು ಟೀಕಿಸಿದೆ.