ಡಿಕೆಶಿ ಬಂಧನ ಖಂಡಿಸಿ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ; ಸಾವಿರಾರು ಮಂದಿ ಭಾಗಿ
ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಿಂದ ಹೊರಟು ಫ್ರೀಡಂ ಪಾರ್ಕಿನತ್ತ ಸಾಗಿರುವ ಪ್ರತಿಭಟನಾಕಾರರು ಕೇಂದ್ರ ಸರ್ಕಾರ, ನರೇಂದ್ರ ಮೋದಿ ಮತ್ತು ಅಮಿತ್ ಷಾ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು: ಅಕ್ರಮ ಹಣವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ, ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಇಡಿ ಅಧಿಕಾರಿಗಳು ಬಂಧಿಸಿರುವುದನ್ನು ಖಂಡಿಸಿ ಬೆಂಗಳೂರಿನಲ್ಲಿ ಒಕ್ಕಲಿಗ ಸಮುದಾಯದವರು ಹಮ್ಮಿಕೊಂಡಿರುವ ಪ್ರತಿಭಟನೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಡಿಕೆಶಿ ಬೆಂಬಲಿಗರು ಭಾಗಿಯಾಗಿದ್ದು, ಫ್ರೀಡಂ ಪಾರ್ಕ್ ನತ್ತ ಬೃಹತ್ ರ್ಯಾಲಿ ಹೊರಟಿದೆ.
ನಗರದ ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಿಂದ ಹೊರಟು ಫ್ರೀಡಂ ಪಾರ್ಕಿನತ್ತ ಸಾಗಿರುವ ಪ್ರತಿಭಟನಾಕಾರರು ಕೇಂದ್ರ ಸರ್ಕಾರ, ನರೇಂದ್ರ ಮೋದಿ ಮತ್ತು ಅಮಿತ್ ಷಾ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯದ ವಿವಿಧೆಡೆಯಿಂದ ಆಗಮಿಸಿದ ಡಿಕೆಶಿ ಬೆಂಬಲಿಗರು
ಒಕ್ಕಲಿಗ ಸಮುದಾಯದವರು ಈ ಪ್ರತಿಭಟನೆಯನ್ನು ಆಯೋಜಿಸಿದ್ದರೂ ಸಹ ಕಾಂಗ್ರೆಸ್, ಜೆಡಿಎಸ್, ಮುಸ್ಲಿಂ ಸಂಘಟನೆಗಳೂ ಸೇರಿದಂತೆ ಯಾವುದೇ ಬೇಧ ಭಾವವಿಲ್ಲದೆ ಕನಕಪುರ, ರಾಮನಗರ, ಹಾಸನದಿಂದ ಡಿಕೆಶಿ ಬೆಂಬಲಿಗರು ಆಗಮಿಸಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ. ಮಂಡ್ಯ, ಹಾಸನ ಮೊದಲಾದ ಜಿಲ್ಲೆಗಳಿಂದ ಮಹಿಳೆಯರೂ ಸಹ ಆಗಮಿಸಿ ಪ್ರತಿಭಟನೆಯಲ್ಲಿ ಭಾಗವಹಿಸಿ, ಡಿಕೆಶಿ ಬಂಧನವನ್ನು ವಿರೋಧಿಸಿದ್ದಾರೆ.
ಒಕ್ಕಲಿಗ ವಿರೋಧಿ ಬಿಜೆಪಿಗೆ ಧಿಕ್ಕಾರ ಕೂಗಿದ ಬೆಂಬಲಿಗರು
ಪ್ರತಿಭಟನೆಯಲ್ಲಿ ಬಿಜೆಪಿ, ಅಮಿತ್ ಷಾ, ನರೇಂದ್ರ ಮೋದಿ ವಿರುದ್ಧ ಧಿಕ್ಕಾರ ಕೂಗಿದ ಡಿಕೆಶಿ ಬೆಂಬಲಿಗರು ಕೇಂದ್ರ ಸರ್ಕಾರ 420 ಸರ್ಕಾರ ಎಂದು ಘೋಷಣೆ ಕೂಗುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಾಂತಿಯುತವಾಗಿ ಪ್ರತಿಭಟಿಸಿ: ಡಿಕೆಶಿ
ಇದೇ ವೇಳೆ, ಪ್ರತಿಭಟನೆಯನ್ನು ಶಾಂತರೀತಿಯಲ್ಲಿ ನಡೆಸುವಂತೆ ಡಿ.ಕೆ.ಶಿವಕುಮಾರ್ ಮನವಿ ಮಾಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಬೆಂಗಳೂರಿನಲ್ಲಿ ನನ್ನನ್ನು ಬೆಂಬಲಿಸಿ ಪ್ರತಿಭಟನೆಯನ್ನು ಆಯೋಜಿಸಲಾಗಿದೆ. ಇದಕ್ಕೆ ನನ್ನ ಹೃತ್ಪೂರ್ವಕ ಧನ್ಯವಾದಗಳು. ಪ್ರತಿಭಟನೆ ಶಾಂತಿಯುತವಾಗಿರಲಿ ಎಂದು ನಾನು ಮನವಿ ಮಾಡುತ್ತೇನೆ. ದಯವಿಟ್ಟು ಸಾರ್ವಜನಿಕ ಆಸ್ತಿಗೆ ಹಾನಿಯಾಗದಂತೆ ನೋಡಿಕೊಳ್ಳಿ. ನಾನು ಯಾವುದೇ ತಪ್ಪು ಮಾಡಿಲ್ಲ. ರಾಜಕೀಯ ಷಡ್ಯಂತ್ರಕ್ಕೆ ಗುರಿಯಾಗಿದ್ದೇನೆ. ನಿಮ್ಮೆಲ್ಲರ ಬೆಂಬಲ ಮತ್ತು ದೇವರ ಆಶೀರ್ವಾದದಿಂದ ಕಾನೂನುಬದ್ಧವಾಗಿ ಹಾಗೂ ರಾಜಕೀಯವಾಗಿ ಜಯಶಾಲಿಯಾಗುತ್ತೇನೆ ಎಂಬ ವಿಶ್ವಾಸವಿದೆ" ಎಂದು ಹೇಳಿದ್ದಾರೆ.
[[{"fid":"180587","view_mode":"default","fields":{"format":"default","field_file_image_alt_text[und][0][value]":false,"field_file_image_title_text[und][0][value]":false},"type":"media","field_deltas":{"1":{"format":"default","field_file_image_alt_text[und][0][value]":false,"field_file_image_title_text[und][0][value]":false}},"link_text":false,"attributes":{"class":"media-element file-default","data-delta":"1"}}]]
ಬಿಗಿ ಭದ್ರತೆ
ಒಕ್ಕಲಿಗ ಸಂಘಟನೆ ಆಯೋಜಿಸಿರುವ ಬೃಹತ್ ಪ್ರತಿಭಟನೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು ಬಿಗಿ ಪೋಲೀಸ್ ಭದ್ರತೆ ನಿಯೋಜಿಸಲಾಗಿದೆ. 50 ಕೆಎಸ್ಆರ್ಪಿ ತುಕಡಿ, 40 ಸಿಎಆರ್ ತುಕಡಿ, 4 ಹೆಚ್ಚುವರಿ ಪೊಲೀಸ್ ಆಯುಕ್ತರು, 11 ಡಿಸಿಪಿ, 42 ಎಸಿಪಿ, 106 ಇನ್ಸ್ಪೆಕ್ಟರ್, 373 ಎಸ್ಐ, 374 ಎಎಸ್ಐ, 2,280 ಮುಖ್ಯಪೇದೆ, ಪೇದೆಗಳನ್ನು ಭದ್ರತೆಗೆ ನಿಯೋಜನೆ ಮಾಡಲಾಗಿದೆ.
ಅಶೋಕ ಪಿಲ್ಲರ್ ಬಳಿ ಬಸ್ ಮೇಲೆ ಕಲ್ಲು ತೂರಾಟ
ಡಿಕೆಶಿ ಬಂಧನ ವಿರೋಧಿಸಿ ಪ್ರತಿಭಟನೆ ನಡೆಸಿರುವ ಬೆಂಬಲಿಗರು ಜಯನಗರದ ಅಶೋಕ ಪಿಲ್ಲರ್ ಬಳಿ ಪ್ರತಿಭಟನೆ ತೀವ್ರಗೊಳಿಸಿ, ಬಿಎಂಟಿಸಿ ಬಸ್ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಘಟನೆಯಲ್ಲಿ ಬಸ್ಸಿನ ಕಿಟಕಿ ಗಾಜು ಪುಡಿಪುಡಿಯಾಗಿದ್ದು, ಪೊಲೀಸರು ಪ್ರತಿಭಟನಾಕಾರರನ್ನು ನಿಯಂತ್ರಿಸಲು ಹರಸಾಹಸಪಡುತ್ತಿದ್ದಾರೆ. ಪ್ರತಿಭಟನೆಯಲ್ಲಿ 30 ಸಾವಿರಕ್ಕೂ ಅಧಿಕ ಮಂದಿ ಭಾಗಿಯಾಗಿದ್ದಾರೆ.
ಒಕ್ಕಲಿಗ ಸಂಘಟನೆಗಳು ಕರೆ ನೀಡಿರುವ ಪ್ರತಿಭಟನೆಯಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಮಾಜಿ ಸಂಸದ ವಿ.ಎಸ್.ಉಗ್ರಪ್ಪ, ಶಾಸಕಿ ಸೌಮ್ಯ ರೆಡ್ಡಿ, ಆನೇಕಲ್ ಶಿವಣ್ಣ, ಕನ್ನಡಪರ ಸಂಘಟನೆಯ ನಾಯಕರು, ಕಾರ್ಯಕರ್ತರು ಸೇರಿದಂತೆ ಸಾವಿರಾರು ಮಂದಿ ಪಾಲ್ಗೊಂಡಿದ್ದಾರೆ.