ಅತೃಪ್ತ ಶಾಸಕರಿಗೆ ಶಾಕ್! ಖುದ್ದು ರಾಜೀನಾಮೆ ನೀಡಿದ ಬಳಿಕವೇ ಅಂಗೀಕಾರ ಪ್ರಕ್ರಿಯೆ ನಡೆಸುವೆ ಎಂದ ಸ್ಪೀಕರ್
ಖುದ್ದಾಗಿ ರಾಜೀನಾಮೆ ನೀಡಿದ ಬಳಿಕ ಚರ್ಚೆ ನಡೆಸಿ ಅಂಗಿಕಾರ ಪ್ರಕ್ರಿಯೆ ನಡೆಸುವುದಾಗಿ ಸ್ಪೀಕರ್ ರಮೇಶ್ ಕುಮಾರ್ ಹೇಳಿದ್ದಾರೆ.
ಬೆಂಗಳೂರು: ಅತೃಪ್ತ ಶಾಸಕರ ರಾಜಿನಾಮೆ ಅಂಗಿಕಾರವಾಗುತ್ತೆಯೇ, ಇಲ್ಲವೇ ಎಂಬ ಕುತೂಹಲಕ್ಕೆ ಬ್ರೇಕ್ ಹಾಕಿರುವ ಸ್ಪೀಕರ್ ರಮೇಶ್ ಕುಮಾರ್ ಅವರು, ಖುದ್ದಾಗಿ ರಾಜೀನಾಮೆ ನೀಡಿದ ಬಳಿಕ ಚರ್ಚೆ ನಡೆಸಿ ಅಂಗೀಕಾರ ಪ್ರಕ್ರಿಯೆ ನಡೆಸುವುದಾಗಿ ಹೇಳಿದ್ದಾರೆ.
ಇಂದಿಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ನಾನು ಕೆಲವು ನಿಯಮಗಳನ್ನು ಹೊಂದಿದ್ದೇನೆ, ಅದರ ಪ್ರಕಾರ ನಾನು ನಡೆದುಕೊಳ್ಳುತ್ತೇನೆ. ಸಂವಿಧಾನದ ಪ್ರಕಾರ ನಿರ್ಧಾರಗಳನ್ನು ಕೈಗೊಳ್ಳುತ್ತೇನೆ. ಸ್ಪೀಕರ್ ಕಚೇರಿ ಈ ವಿಚಾರದಲ್ಲಿ ಜವಾಬ್ದಾರಿಯುತವಾಗಿ ವರ್ತಿಸಬೇಕಿದೆ. ತುರ್ತಾಗಿ ಯಾವ ಕಾರ್ಯವನ್ನೂ ಮಾಡಲು ಸಾಧ್ಯವಿಲ್ಲ" ಎಂದು ಹೇಳಿದ್ದಾರೆ.
ಮುಂದುವರೆದು ಮಾತನಾಡುತ್ತಾ, "ನಿಯಮದ ಪ್ರಕಾರ ಶಾಸಕರು ಖುದ್ದಾಗಿ ರಾಜೀನಾಮೆ ಸಲ್ಲಿಸಬೇಕು. ಸಲ್ಲಿಸಿದ ರಾಜೀನಾಮೆಗಳು ಸ್ವಯಂ ಪ್ರೇರಿತ ಮತ್ತು ಸತ್ಯವಾದುವು ಎಂದು ಸ್ಪೀಕರ್ ಗೆ ಮನವರಿಕೆಯಾದರೆ ಮಾತ್ರ ಅವರು ರಾಜೀನಾಮೆ ಅಂಗೀಕರಿಸಬಹುದು. ನೋಡೋಣ ಮುಂದೇನಾಗುತ್ತದೆ" ಎಂದು ರಮೇಶ್ ಕುಮಾರ್ ಹೇಳಿದ್ದಾರೆ.