ಮೈಸೂರು: ಜಿಲ್ಲೆಯ ನಂಜನಗೂಡಿನಲ್ಲಿ ಇಂದು ವಿಜೃಂಭಣೆಯಿಂದ ನಡೆದ ಶ್ರೀ ಶ್ರೀಕಂಠೇಶ್ವರ ಸ್ವಾಮಿ ಜಾತ್ರಾ ಮಹೋತ್ಸವದಲ್ಲಿ ಜನರಿಗೆ ಮತದಾನದ ಬಗ್ಗೆ ಜಾಗೃತಿ ಮೂಡಿಸಲಾಯಿತು.


COMMERCIAL BREAK
SCROLL TO CONTINUE READING

ನಂಜನಗೂಡು  ಶ್ರೀ ಶ್ರೀಕಂಠೇಶ್ವರ ಸ್ವಾಮಿ ಜಾತ್ರಾ ಮಹೋತ್ಸವಕ್ಕೆ ರಾಜ್ಯದ ವಿವಿಧೆಡೆಯಿಂದ ಆಗಮಿಸಿದ್ದ ಸಾವಿರಾರು ಭಕ್ತರು ಹಾಗೂ ನಾಗರಿಕರಿಗೆ ಮಂಗಳವಾರ ತಾಲ್ಲೂಕು ಸ್ವೀಪ್ ಸಮಿತಿ ವತಿಯಿಂದ ಲೋಕಸಭೆ ಚುನಾವಣೆಯಲ್ಲಿ ಕಡ್ಡಾಯವಾಗಿ ಮತದಾನ ಮಾಡುವಂತೆ ಜಾಗೃತಿ ಮೂಡಿಸಲಾಯಿತು.


ಮತದಾನ ಪ್ರಕ್ರಿಯೆಯಲ್ಲಿ ಪ್ರತಿಯೊಬ್ಬ ವ್ಯಕ್ತಿಯೂ ಪಾಲ್ಗೊಂಡು ತಮ್ಮ ಅತ್ಯಮೂಲ್ಯವಾದ ಮತದಾನ ಹಕ್ಕನ್ನು ಚಲಾಯಿಸಬೇಕು. ಸಮಾಜದ ಅಂಕು ಡೊಂಕುಗಳನ್ನು ತಿದ್ದಲು ಮತದಾನವು ಬ್ರಹ್ಮಾಸ್ತ್ರವಾಗಿದೆ  ಎಂದು ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಶ್ರೀಕಂಠ ರಾಜೇ ಅರಸ್ ತಿಳಿಸಿದರು.


ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳೇ ಪ್ರಭುಗಳು, ಜನಪರ ಕಾಳಜಿ ಹಾಗೂ ದೇಶದ ಅಭಿವೃದ್ಧಿಯ ಮಾನದಂಡ ಇಟ್ಟುಕೊಂಡು ಉತ್ತಮ ಆಡಳಿತ ನಡೆಸುವ ಸರ್ಕಾರವನ್ನು ಆಯ್ಕೆ ಮಾಡುವ ಅವಕಾಶ ನಿಮ್ಮ ಕೈಯಲ್ಲಿದೆ. ಚುನಾವಣೆಯ ದಿನ ಮತಗಟ್ಟೆಗೆ ಬಂದು ತಪ್ಪದೇ ಮತದಾನ ಮಾಡಿ ನಿಮ್ಮ ಕರ್ತವ್ಯವನ್ನು ನೆರವೇರಿಸಬೇಕು. ಹಣ, ಹೆಂಡ ಹಾಗೂ ಇನ್ನಿತರ ಆಮಿಷಗಳಿಗೆ ಒಳಗಾಗದೆ ಪ್ರಜಾಪ್ರಭುತ್ವವನ್ನು ಬಲಪಡಿಸಿ, ದೇಶ ಪ್ರಜೆಗಳಿಗೋಸ್ಕರ ಪಾರದರ್ಶಕ ಆಡಳಿತ ನಡೆಸುವ ನಾಯಕರನ್ನು ಆಯ್ಕೆ ಮಾಡಲು ಮುಂದಾಗುವಂತೆ ಮತದಾರರಿಗೆ ಕರೆ ನೀಡಿದರು.


ಲೋಕಸಭೆ ಚುನಾವಣೆ ಇನ್ನೇನು ಕೆಲವೇ ದಿನಗಳಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಸ್ಥಳೀಯ ಸಂಸ್ಥೆಗಳ ವತಿಯಿಂದ ಮತದಾನ ಜಾಗೃತಿ ಕಾರ್ಯಕ್ರಮ ನಡೆಸಲಾಗುತ್ತಿದೆ. ಜನರು ಹೆಚ್ಚು ಸೇರುವ ಸ್ಥಳಗಳಲ್ಲಿ ಮತದಾನ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಜನತೆ ಮತದಾನದ ಹಕ್ಕನ್ನು ಸಕಾರಾತ್ಮಕವಾಗಿ ಉಪಯೋಗಿಸುವಂತೆ ಜಾಗೃತಿ ಮೂಡಿಸಲಾಗುತ್ತಿದೆ.