ಬೆಂಗಳೂರು: ಕರ್ನಾಟಕದ ಎರಡು ವಿಧಾನಸಭೆ ಕ್ಷೇತ್ರ ಮತ್ತು ಮೂರು ಲೋಕಸಭಾ ಕ್ಷೇತ್ರಗಳ ಉಪಚುನಾವಣೆಗೆ ಶನಿವಾರ ಬೆಳಿಗ್ಗೆ 7 ಗಂಟೆಯಿಂದ ಮತದಾನ ಆರಂಭವಾಗಿದೆ. 


COMMERCIAL BREAK
SCROLL TO CONTINUE READING

ಜಮಖಂಡಿ, ರಾಮನಗರ ವಿಧಾನಸಭಾ ಕ್ಷೇತ್ರ ಮತ್ತು ಬಳ್ಳಾರಿ, ಶಿವಮೊಗ್ಗ, ಮಂಡ್ಯ ಲೋಕಸಭೆ ಕ್ಷೇತ್ರಗಳಿಗೆ ನಡೆಯುತ್ತಿರುವ ಉಪಚುನಾವಣೆಗೆ ಮತದಾನ ಮಾಡಲು ಈಗಾಗಲೇ ಮತದಾರರು ಗುರುತಿನ ಚೀಟಿ ಹಿಡಿದು ಮತಗಟ್ಟೆಗಳ ಬಳಿ ಸಾಲುಗಟ್ಟಿ ನಿಂತಿದ್ದಾರೆ.


ಜಮಖಂಡಿ ವಿಧಾನಸಭೆ ಕ್ಷೇತ್ರದ ಹಿರೇಪಡಸಲಗಿ ಗ್ರಾಮದ ಮತಗಟ್ಟೆ ಸಂಖ್ಯೆ 50ರಲ್ಲಿ  ಬಿಜೆಪಿ ಅಭ್ಯರ್ಥಿ ಶ್ರೀಕಾಂತ್ ಕುಲಕರ್ಣಿ ಮತ ಚಲಾಯಿಸಿದರೆ, ಮಂಡ್ಯ ಲೋಕಸಭಾ ಕ್ಷೇತ್ರದ ಯತ್ತಗದಹಳ್ಳಿ ಮತಗಟ್ಟೆ ಸಂಖ್ಯೆ 18 ರಲ್ಲಿ ಬಿಜೆಪಿ ಅಭ್ಯರ್ಥಿ ಡಾ.ಸಿದ್ದರಾಮಯ್ಯ ಮತದಾನ ಮಾಡಿದ್ದಾರೆ. ಇನ್ನು, ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಶಿಕಾರಿಪುರದಲ್ಲಿ ಮತದಾನ ಮಾಡಿದ್ದಾರೆ. 


ಐದು ಕ್ಷೇತ್ರಗಳಿಗೆ ನಡೆಯುತ್ತಿರುವ ಉಪ ಚುನಾವಣೆಗೆ ಒಟ್ಟು 6,453 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, 9,822 ಮತ ಯಂತ್ರಗಳ ಜತೆಗೆ 8,922 ವಿವಿ ಪ್ಯಾಟ್​ಗಳನ್ನು ಬಳಸಲಾಗುತ್ತಿದೆ. ಅಷ್ಟೇ ಅಲ್ಲದೆ, ಐದು ಕ್ಷೇತ್ರಗಳಲ್ಲಿ ಮಹಿಳೆಯರಿಗೆ 57 ಪಿಂಕ್ ಮತಕೇಂದ್ರಗಳನ್ನು ತೆರೆಯಲಾಗಿದೆ.


ಉಪಚುನಾವಣೆಯ ಮತಎಣಿಕೆ ಕಾರ್ಯ ನವೆಂಬರ್ 6 ರಂದು ಬಳ್ಳಾರಿಯ ರಾವ್ ಬಹದ್ದೂರ್ ವೈ ಮಹಬಲೇಶ್ವರಪ್ಪ ಇಂಜಿನಿಯರಿಂಗ್ ಕಾಲೇಜು, ಶಿವಮೊಗ್ಗದ ಸಹ್ಯಾದ್ರಿ ಕಲಾ ಕಾಲೇಜು, ಮಂಡ್ಯದ ಸರ್ಕಾರಿ ಕಾಲೇಜು, ಜಮಖಂಡಿಯ ಮಿನಿ ವಿಧಾನಸೌಧ ಮತ್ತು ರಾಮನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆಯಲಿದೆ.