ಬೆಂಗಳೂರು: ಬಾದಾಮಿ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಸರ್ಕಾರಕ್ಕೆ ಬರೆದಿದ್ದ ಪತ್ರಗಳನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದು ತಪ್ಪು ಎಂದು ಮಾಜಿ ಸ್ಪೀಕರ್ ಕೆ.ಬಿ.ಕೋಳಿವಾಡ ವಾಗ್ದಾಳಿ ನಡೆಸಿದ್ದಾರೆ. 


COMMERCIAL BREAK
SCROLL TO CONTINUE READING

ಇಂದಿಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷರಾಗಿದ್ದರೂ, ಹೊರಗಿನವರಂತೆ ಸರ್ಕಾರಕ್ಕೆ ಪತ್ರ ಬರೆಯುವ ಅಗತ್ಯವಿತ್ತೇ? ಅದನ್ನು ಸಮಿತಿ ಸಭೆಯಲ್ಲೇ ಚರ್ಚಿಸಬಹುದಿತ್ತಲ್ಲವೇ? ಎಂದು ಪ್ರಶ್ನಿಸಿದರಲ್ಲದೆ, ಪತ್ರಗಳನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿ, ಮೈತ್ರಿ ಸರ್ಕಾರದ ಗೊಂದಲಕ್ಕೆ ಕಾರಣವಾಗಿದ್ದಾರೆ ಎಂದು ಕೋಳಿವಾಡ ಕಿಡಿ ಕಾರಿದರು. 


ಬಿಜೆಪಿ ಮುಕ್ತ ಕರ್ನಾಟಕದ ಉದ್ದೇಶದಿಂದ ಕಾಂಗ್ರೆಸ್ ಹೈಕಮ್ಯಾಂಡ್ ಜೆಡಿಎಸ್ ಜೊತೆ ಮೈತ್ರಿ ಸರ್ಕಾರಕ್ಕೆ ಮುಂದಾಗಿದೆ. ಹೀಗಿರುವಾಗ ಸಿದ್ದರಾಮಯ್ಯ ಅವರು ಈ ರೀತಿ ಪತ್ರ ಬರೆಯುವ ಅಗತ್ಯವಿರಲಿಲ್ಲ. ಪಕ್ಷದ ಹಿತದೃಷ್ಟಿಯಿಂದ ನಾನು ಸಿದ್ದರಾಮಯ್ಯ ಅವರ ನಡೆಯನ್ನು ಪ್ರಶ್ನಿಸುತ್ತಿದ್ದೇನೆಯೇ ಹೊರತು, ಬೇರಾವ ಉದ್ದೇಶವಿಲ್ಲ ಎಂದು ಕೋಳಿವಾಡ ಹೇಳಿದರು.


ಕೆಲದಿನಗಳ ಹಿಂದೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಬಾದಾಮಿ ನಗರಕ್ಕೆ ಪಾಲಿಟೆಕ್ನಿಕ್ ಕಾಲೇಜು ಸೇರಿದಂತೆ ಹಲವು ಸೌಲಭ್ಯಗಳನ್ನು ಒದಗಿಸುವಂತೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ 5 ಕ್ಕೂ ಹೆಚ್ಚು ಪತ್ರ ಬರೆದಿದ್ದರು. ಇದು ಸಮ್ಮಿಶ್ರ ಸರ್ಕಾರದಲ್ಲಿ ಸಾಕಷ್ಟು ಗೊಂದಲಗಳಿಗೂ ಕಾರಣವಾಗಿತ್ತು.