ಮಹದಾಯಿ ನದಿ ನೀರಿನ ವಿಚಾರದಲ್ಲಿ ನಾವು ಕಾನೂನಿನ ಚೌಕಟ್ಟು ಮೀರಿಲ್ಲ: ಡಿಕೆಶಿ
ಗೋವಾ ಅತ್ಯಂತ ಸಣ್ಣ ರಾಜ್ಯವಾಗಿದ್ದು, ಅವರೊಂದಿಗೆ ಜಗಳ ಅಥವಾ ಯುದ್ಧ ಮಾಡಲು ಸಿದ್ಧರಿಲ್ಲ. ಮಹದಾಯಿ ನೀರು ಹಂಚಿಕೆ ವಿಚಾರದಲ್ಲಿ ಕಾನೂನಾತ್ಮಕ ಹೋರಾಟ ಮುಂದುವರಿಸಲಾಗುವುದು- ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್
ಬೆಂಗಳೂರು: ಮಹದಾಯಿ ನದಿ ನೀರಿನ ವಿಚಾರದಲ್ಲಿ ಕರ್ನಾಟಕ ಕಾನೂನು ಚೌಕಟ್ಟು ಮೀರಿಲ್ಲ. ಮಹದಾಯಿ ನೀರು ಹಂಚಿಕೆ ವಿಚಾರದಲ್ಲಿ ಕಾನೂನಾತ್ಮಕ ಹೋರಾಟ ಮುಂದುವರಿಸಲಾಗುವುದು ಎಂದು ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಕರ್ನಾಟಕ ಮಹದಾಯಿ ನದಿ ನೀರನ್ನು ಮಲಪ್ರಭಾ ನದಿಗೆ ತಿರುಗಿಸಿದೆ ಎಂಬ ಗೋವಾ ಆರೋಪದ ಹಿನ್ನಲೆಯಲ್ಲಿ ಪ್ರತಿಕ್ರಿಯಿಸಿದ ಜಲಸಂಪನ್ಮೂಲ ಸಚಿವರು, ನಮ್ಮ ರಾಜ್ಯಕ್ಕೆ ಸಿಗಬೇಕಾದ ನೀರಿನ ಪಾಲನ್ನಷ್ಟೇ ನಾವು ಕೇಳುತ್ತಿದ್ದೇವೆ. ಗೋವಾ ಅತ್ಯಂತ ಸಣ್ಣ ರಾಜ್ಯವಾಗಿದ್ದು, ಅವರೊಂದಿಗೆ ಜಗಳ ಅಥವಾ ಯುದ್ಧ ಮಾಡಲು ಸಿದ್ಧರಿಲ್ಲ. ಮಹದಾಯಿ ಲೀಕೇಜ್ ಬಗ್ಗೆ ಫೋಟೋ ಸಹಿತ ದಾಖಲೆಗಳನ್ನು ನ್ಯಾಯಾಧಿಕರಣಕ್ಕೆ ನೀಡಲಾಗಿದೆ. ನಾವು ಎಲ್ಲಿಯೂ ನೀರನ್ನು ಬಳಕೆ ಮಾಡಿಕೊಳ್ಳುತ್ತಿಲ್ಲ. ನಾವು ಕಾನೂನು ಚೌಕಟ್ಟಿನಲ್ಲೇ ಇದ್ದೇವೆ ಎಂದು ತಿಳಿಸಿದರು.
ಆಗಸ್ಟ್ 20 ರೊಳಗೆ ಮಹದಾಯಿ ನ್ಯಾಯಾಧಿಕರಣದ ತೀರ್ಪು ಬರಲಿದೆ. ಮಹದಾಯಿ ವಿಷಯದಲ್ಲಿ ರಾಜ್ಯಕ್ಕೆ ನ್ಯಾಯ ಸಿಗಲಿದೆ ಎಂಬ ಆತ್ಮವಿಶ್ವಾಸವನ್ನು ಡಿಕೆಶಿ ವ್ಯಕ್ತಪಡಿಸಿದರು.