ಕೇಂದ್ರ ಸರ್ಕಾರದ ದ್ವೇಷ ರಾಜಕಾರಣ ವಿರುದ್ಧ ಜೂ. 20 ರಂದು ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ: ಡಿಸಿಎಂ ಡಿ.ಕೆ. ಶಿವಕುಮಾರ್


COMMERCIAL BREAK
SCROLL TO CONTINUE READING

ಬೆಂಗಳೂರು,: ಕರ್ನಾಟಕ ರಾಜ್ಯದ ಪ್ರತಿಷ್ಠಿತ ಯೋಜನೆ ಅನ್ನಭಾಗ್ಯ ಜಾರಿಗೆ ಅಗತ್ಯ ಅಕ್ಕಿ ಖರೀದಿಗೆ ಕೇಂದ್ರ ಸರ್ಕಾರ ಹಾಗೂ ಭಾರತೀಯ ಆಹಾರ ಪ್ರಾಧಿಕಾರ ಅವಕಾಶ ನಿರಾಕರಿಸಿರುವುದು ಬಿಜೆಪಿಯ ದ್ವೇಷ ರಾಜಕಾರಣ ಹಾಗೂ ಬಡವರ ವಿರೋಧಿ ನೀತಿಗೆ ಸಾಕ್ಷಿ. ಇದರ ವಿರುದ್ಧ ಕರ್ನಾಟಕ ಕಾಂಗ್ರೆಸ್ ಇದೇ 20 ರಂದು ಮಂಗಳವಾರ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ಮಾಡಿ ಜನರಲ್ಲಿ ಅರಿವು ಮೂಡಿಸಲಿದೆ” ಎಂದು ಕೆಪಿಸಿಸಿ ಅಧ್ಯಕ್ಷ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದ್ದಾರೆ.


ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ‘ಕಾಂಗ್ರೆಸ್ ಸರ್ಕಾರವು ಅನ್ನಭಾಗ್ಯ ಯೋಜನೆಯಡಿ 10 ಕೆ.ಜಿ. ಅಕ್ಕಿ ನೀಡಲು ಬದ್ಧವಾಗಿದೆ’ ಎಂದು ಸ್ಪಷ್ಟಪಡಿಸಿದರು. ಈ ಸಂದರ್ಭದಲ್ಲಿ ಅವರು ಹೇಳಿದ್ದಿಷ್ಟು;


“ಕಾಂಗ್ರೆಸ್ ಐದು ಗ್ಯಾರಂಟಿ ಘೋಷಿಸಿತ್ತು. ಇದರ ಜಾರಿ ಬಗ್ಗೆ ವಿರೋಧ ಪಕ್ಷದ ಸ್ನೇಹಿತರು ಅನೇಕ ಟೀಕೆ ಮಾಡುತ್ತಾ ಬಂದಿದ್ದಾರೆ. ಸರ್ಕಾರ ಬಂದ ಮೊದಲ ದಿನವೇ ಮೊದಲ ಆದೇಶ ಹೊರಡಿಸಿ ನಮ್ಮ ಬದ್ಧತೆ ಪ್ರದರ್ಶಿಸಿದ್ದೇವೆ. ಎರಡನೇ ಸಂಪುಟ ಸಭೆಯಲ್ಲಿ ಈ ಯೋಜನೆ ಜಾರಿ ಸಮಯ ನಿರ್ಧರಿಸಿದ್ದೇವೆ. ವಿರೋಧ ಪಕ್ಷಗಳ ಟೀಕೆಗೆ ನಾವು ಉತ್ತರ ನೀಡುವುದಿಲ್ಲ. ಟೀಕೆ ಸಾಯುತ್ತವೆ, ಕೆಲಸ ಉಳಿಯುತ್ತವೆ" ಎಂಬ ಮಾತನ್ನು ನಾವು ನಂಬಿದ್ದೇವೆ.


ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಅವರು ಚುನಾವಣೆ ಪ್ರಚಾರದ ವೇಳೆ ಬಿಜೆಪಿ ಸೋತರೆ ಕೇಂದ್ರ ಅನುದಾನ ಸ್ಥಗಿತ ಎಂದು ಹೇಳಿದ್ದರು. ಈಗ ಕರ್ನಾಟಕ ರಾಜ್ಯಕ್ಕೆ ಅಕ್ಕಿ ಖರೀದಿಗೆ ಅವಕಾಶ ತಪ್ಪಿಸುವ ಮೂಲಕ ತಮ್ಮ ಮಾತು ಉಳಿಸಿಕೊಂಡಿದ್ದಾರೆ. ಒಕ್ಕೂಟ ವ್ಯವಸ್ಥೆಯಲ್ಲಿ ಕೆಲಸ ಮಾಡುವುದಾಗಿ ಪ್ರಧಾನ ಮಂತ್ರಿಗಳು ಹೇಳಿಕೆ ನೀಡಿದ್ದರು. ಆದರೆ ಬಿಜೆಪಿ ಅಧ್ಯಕ್ಷರು ಮತದಾರರನ್ನು ಬೆದರಿಸಿದ್ದರು. ರಾಜ್ಯದಲ್ಲಿ ಯಾರೂ ಹಸಿವಿನಿಂದ ಇರಬಾರದು ಎಂಬ ಉದ್ದೇಶದಿಂದ ಅನ್ನಭಾಗ್ಯ ಯೋಜನೆ ಮಾಡಿದ್ದು, ಮುಂದಿನ ತಿಂಗಳಿಂದ ಯೋಜನೆ ಜಾರಿಗೆ ತೀರ್ಮಾನ ಮಾಡಿದ್ದೆವು. ಇದಕ್ಕಾಗಿ ಭಾರತೀಯ ಆಹಾರ ಪ್ರಾಧಿಕಾರಕ್ಕೆ ಅಕ್ಕಿ ಖರೀದಿಗೆ ಮನವಿ ಮಾಡಿದ್ದೆವು. ಪ್ರಾಧಿಕಾರ ಕೂಡ ಜೂನ್ 12 ರಂದು ಜುಲೈ ತಿಂಗಳಲ್ಲಿ ಇ ಹರಾಜು ಮೂಲಕ ಅಕ್ಕಿ ನೀಡುವುದಾಗಿ ಅನುಮತಿ ನೀಡಿತ್ತು. 2,08,425.750 ಮೆಟ್ರಿಕ್ ಟನ್ ಅಕ್ಕಿ ಖರೀದಿಗೆ ಅನುಮತಿ ನೀಡುವುದಾಗಿ ಪ್ರಾಧಿಕಾರ ಪತ್ರ ಬರೆದಿತ್ತು. ಇದಾದ ಮರುದಿನ ಅಂದರೆ ಜೂನ್ 13 ರಂದು, ಗೋಧಿ ಮತ್ತು ಅಕ್ಕಿಯನ್ನು ಮುಕ್ತ ಮಾರುಕಟ್ಟೆಯಲ್ಲಿ ಮಾರುವುದನ್ನು ತಡೆಯಲಾಗಿದೆ ಎಂದು ತಿಳಿಸಿದೆ.


ಬಿಜೆಪಿಯ ದ್ವೇಷದ ರಾಜಕಾರಣಕ್ಕೆ ಇದು ಸಾಕ್ಷಿ. ಕಾಂಗ್ರೆಸ್ ಪಕ್ಷಕ್ಕೆ ಜನ ಹಾಕಿರುವ ಮತಗಳಿಗೆ ಬಿಜೆಪಿಯ ಭ್ರಷ್ಟ ಸರ್ಕಾರ ಧಿಕ್ಕಾರ ಹಾಕಿದೆ. ಬಡವರಿಗೆ ದ್ರೋಹ ಮಾಡುತ್ತಿದೆ. ಬಡವರ ಹೊಟ್ಟೆ ಮೇಲೆ ಬರೆ ಎಳೆದಿದೆ. ಬಿಜೆಪಿ ಎಂದರೆ ಬಡವರಿಗೆ ದ್ರೋಹ ಬಗೆಯುವ ಪಕ್ಷವಾಗಿದೆ. ಕೇಂದ್ರದ ಈ ದ್ರೋಹ ಖಂಡಿಸಿ ಬರುವ ಮಂಗಳವಾರ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಪಕ್ಷದ ವತಿಯಿಂದ ಪ್ರತಿಭಟನೆ ಮಾಡಲಾಗುವುದು. ಈ ಪ್ರತಿಭಟನೆಯಲ್ಲಿ ಆಯಾ ಜಿಲ್ಲೆಯ ಶಾಸಕರು ಭಾಗವಹಿಸಬೇಕು.


ಕೇಂದ್ರ ಸರಕಾರ ನೀಡದಿದ್ದರೂ ನಾವು 10 ಕೆ.ಜಿ ಅಕ್ಕಿ ನೀಡುತ್ತೇವೆ. ಅನ್ನ ಭಾಗ್ಯ ಯೋಜನೆ ಜಾರಿ ಆಗಲಿದೆ. ಮುಖ್ಯಮಂತ್ರಿಗಳು, ಸಚಿವರು ಬೇರೆ ರಾಜ್ಯಗಳ ಜತೆ ಚರ್ಚೆ ಮಾಡುತ್ತಿದ್ದೇವೆ. ನಾವು ಮುಕ್ತ ಮಾರುಕಟ್ಟೆಯಲ್ಲಿ ಅಕ್ಕಿ ಖರೀದಿ ಮಾಡಲು ಸಾಧ್ಯವಿಲ್ಲ ಎಂದೇನಿಲ್ಲ. ಇದು ಒಕ್ಕೂಟ ವ್ಯವಸ್ಥೆ. ದೇಶದಲ್ಲಿ ಈಗಾಗಲೇ ಇರುವ ವ್ಯವಸ್ಥೆ ಹಾಗೂ ಪ್ರಕ್ರಿಯೆ ಮೂಲಕ ಅಕ್ಕಿ ಖರೀದಿಗೆ ಮನವಿ ಮಾಡಿದ್ದೆವು. ಪಾರದರ್ಶಕ ವ್ಯವಸ್ಥೆಯಲ್ಲಿ ಖರೀದಿಗೆ ನಾವು ಎಫ್ ಸಿಐಗೆ ಕೇಳಿದ್ದೇವೆ. ಕೇಂದ್ರದ ಬಳಿ 7 ಲಕ್ಷ ಮೆಟ್ರಿಕ್ ಟನ್ ದಾಸ್ತಾನು ಇದೆ. ನಾವು ಕೇವಲ 2.85 ಲಕ್ಷ ಮೆಟ್ರಿಕ್ ಟನ್ ಖರೀದಿಗೆ ಕೇಳಿದ್ದೆವು. ದಾಸ್ತಾನು ಇದ್ದರೂ ಅಕ್ಕಿ ನೀಡಲು ನಿರಾಕರಿಸಿದ್ದಾರೆ. ಕೇಂದ್ರದ ಈ ಧೋರಣೆ ಪ್ರತಿಭಟಿಸಿ, ಜನರಿಗೆ ಅರಿವು ಮೂಡಿಸಿ ಕೇಂದ್ರದ ಮೇಲೆ ಒತ್ತಡ ಹೇರಬೇಕಿದೆ.


ಪ್ರಶ್ನೋತ್ತರ


ಎಫ್ ಸಿಐ ನೀತಿ ಬದಲಾಗಿದ್ದು, ಈ ಬಗ್ಗೆ ನಮ್ಮ ಅಧಿಕಾರಿಗಳಿಗೆ ಗೊತ್ತಿಲ್ಲದೇ ಅನುಮತಿ ನೀಡಿ ಪತ್ರ ಬರೆದಿದ್ದಾರೆ ಎಂಬ ಎಫ್ಸಿಐ ಅಧಿಕಾರಿಗಳ ಸ್ಪಷ್ಟನೆ ಬಗ್ಗೆ ಕೇಳಿದಾಗ, ‘ಅಲ್ಲಿಗೆ ಭಾರತ ಆಹಾರ ಪ್ರಾಧಿಕಾರಕ್ಕೆ ತಮ್ಮ ಅಧಿಕಾರಿಗಳ ಮೇಲೆ ನಿಯಂತ್ರಣವಿಲ್ಲ ಎಂಬುದು ಸ್ಪಷ್ಟವಾಗುತ್ತದೆಯಲ್ಲವೇ?’ ಎಂದರು.


ಗೃಹಲಕ್ಷ್ಮಿ ಯೋಜನೆ ಜಾರಿ ಬಗ್ಗೆ ಕೇಳಿದ ಪ್ರಶ್ನೆಗೆ, “ಗೃಹಲಕ್ಷ್ಮಿ ಯೋಜನೆ ಜಾರಿಗೆ ಮುಂದಾಗಿದ್ದೇವೆ. ಸೇವಾ ಸಿಂಧುವಿನಲ್ಲಿ ಪ್ರತಿನಿತ್ಯ 200ಕ್ಕಿಂತ ಹೆಚ್ಚು ಅರ್ಜಿ ಪಡೆಯಲು ಆಗುವುದಿಲ್ಲ. ಪ್ರತಿ ಪಂಚಾಯ್ತಿಯಲ್ಲಿ ಒಂದು ಗ್ರಾಮ ಒನ್ ಮಾತ್ರ ಇದೆ. ಈ ಪ್ರದೇಶದಲ್ಲಿ ಎರಡೂವರೆ ಸಾವಿರ ಕುಟುಂಬಗಳಿವೆ. ಹೀಗಾಗಿ ಅಲ್ಲಿ ಮಹಿಳೆಯರನ್ನು ಸರದಿ ಸಾಲಿನಲ್ಲಿ ನಿಲ್ಲಿಸಿ ಭ್ರಷ್ಟಾಚಾರಕ್ಕೆ ಅವಕಾಶ ನೀಡುವುದಿಲ್ಲ. ಅವರ ಅರ್ಜಿ ಅವರೇ ಹಾಕಲು ಅವಕಾಶ ಮಾಡಿಕೊಡಲಾಗುತ್ತದೆ. ಸ್ವಲ್ಪ ತಡವಾದರೂ ಈ ಪ್ರಕ್ರಿಯೆ ಪಾರದರ್ಶಕವಾಗಿ ನಡೆಯಲಿದೆ. ಆನ್ ಲೈನ್ ಮೂಲಕ ಅರ್ಜಿ ಆಹ್ವಾನ ಮಾಡಲಾಗುವುದು. ಇದಕ್ಕಾಗಿ ಪ್ರತ್ಯೇಕ ಆಪ್ ನಿರ್ಮಾಣ ಮಾಡಬಹುದು. ಪ್ರತಿಯೊಬ್ಬರು ತಮ್ಮ ಅರ್ಜಿಯನ್ನು ಅವರದೇ ಸ್ಮಾರ್ಟ್ ಫೋನ್ ಮೂಲಕ ಸಲ್ಲಿಸಲು ಅವಕಾಶ ಮಾಡಿಕೊಡಲಾಗುವುದು” ಎಂದು ತಿಳಿಸಿದರು.


ಗ್ಯಾರಂಟಿ ಯೋಜನೆ ಜಾರಿ ವಿಚಾರವಾಗಿ ಬಿಜೆಪಿ ನಾಯಕರ ಟೀಕೆ ಕುರಿತು ಕೇಳಿದಾಗ, “ಬಿಜೆಪಿ ನಾಯಕರು ಏನಾದರೂ ಟೀಕೆ ಮಾಡಲಿ. ಅವರಿಗೆ ನಾನು ವಿನಂತಿ ಮಾಡಿಕೊಳ್ಳುವುದೇನೆಂದರೆ, ಅವರು ಮೊದಲು ತಾವು ಕೊಟ್ಟಿರುವ ಭರವಸೆ ಈಡೇರಿಸುವ ಬಗ್ಗೆ ಮಾತನಾಡಲಿ. ಅವರು ವಿದೇಶದಿಂದ ಎಷ್ಟು ಕಪ್ಪು ಹಣ ತಂದಿದ್ದಾರೆ, ಎಷ್ಟು ಜನರ ಖಾತೆಗೆ 15 ಲಕ್ಷ ಹಾಕಿದ್ದಾರೆ? ರೈತರ ಆದಾಯ ಡಬಲ್ ಮಾಡಿದ್ದಾರಾ? ವರ್ಷಕ್ಕೆ 2 ಕೋಟಿ ಉದ್ಯೋಗ ಕೊಟ್ಟರಾ? ಎಂಬುದರ ಬಗ್ಗೆ ಮಾತನಾಡಲಿ” ಎಂದು ತಿರುಗೇಟು ನೀಡಿದರು.


ಬೇರೆ ರಾಜ್ಯಗಳಿಂದ ಅಕ್ಕಿ ಖರೀದಿ ಸಾಧ್ಯವಾಗದಿದ್ದರೆ ಸರ್ಕಾರದ ಮುಂದಿನ ನಡೆ ಏನು? ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ಮಾಡುವುದಕ್ಕಿಂತ ದೆಹಲಿಯಲ್ಲಿ ಪ್ರತಿಭಟನೆ ಮಾಡಬಹುದಿತ್ತಲ್ಲವೇ ಎಂದು ಕೇಳಿದಾಗ, ‘ನಾವು ಹೆಚ್ಚು ಅಕ್ಕಿ ಬೆಳೆಯುವ ರಾಜ್ಯಗಳನ್ನು ಸಂಪರ್ಕಿಸುತ್ತಿದ್ದೇವೆ. ಯಾರನ್ನು ಸಂಪರ್ಕಿಸುತ್ತೇವೆ ಎಂದು ಬಹಿರಂಗಪಡಿಸುವುದಿಲ್ಲ. ಬಹಿರಂಗಪಡಿಸಿದರೆ ಅವರಿಗೂ ಅಕ್ಕಿ ಮಾರಾಟ ಮಾಡದಂತೆ ಬೆದರಿಕೆ ಹಾಕುತ್ತಾರೆ. ಈ ಯೋಜನೆ ಕೇವಲ ಕಾಂಗ್ರೆಸಿಗರಿಗೆ ಮಾತ್ರವಲ್ಲ. ಎಲ್ಲಾ ಪಕ್ಷದ ಬೆಂಬಲಿಗರು, ಮತದಾರರಿಗೆ ಲಭ್ಯವಾಗುತ್ತದೆ. ಹೀಗಾಗಿ ರಾಜ್ಯದ ಸಂಸದರು ನಮ್ಮ ಹೋರಾಟಕ್ಕೆ ಬೆಂಬಲ ನೀಡುವ ವಿಶ್ವಾಸವಿದೆ. ಚುನಾವಣೆ ಮುಗಿದಿದೆ. ಜನಪ್ರತಿನಿಧಿಗಳಾಗಿ ರಾಜ್ಯದ ನೆಲ, ಜಲ, ಭಾಷೆ, ಗಡಿ ವಿಚಾರವಾಗಿ ಒಟ್ಟಾಗಿ ಕೆಲಸ ಮಾಡಬೇಕು. ನಾನು ಬೆಂಗಳೂರಿನ ಅಭಿವೃದ್ಧಿ ಕುರಿತು ನಡೆಸಿದ ಸಭೆಯಲ್ಲಿ ಎಲ್ಲಾ ಪಕ್ಷದವರನ್ನು ಅಹ್ವಾನ ಮಾಡಿದ್ದೆ. ಜೂನ್ 21 ರಂದು ನಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು, ರಾಜ್ಯದ ಸಚಿವರುಗಳನ್ನು ಕರೆದಿದ್ದು, ಪಕ್ಷದ ಪ್ರಣಾಳಿಕೆ ಜಾರಿ ವಿಚಾರವಾಗಿ ಮಾರ್ಗದರ್ಶನ ನೀಡಲಿದ್ದಾರೆ. ಈ ಸಮಯದಲ್ಲಿ ಕೇಂದ್ರದ ಸಚಿವರುಗಳನ್ನು ಭೇಟಿ ಮಾಡಿ ಬಾಕಿ ಇರುವ ಯೋಜನೆ ಜಾರಿಗೆ ಒತ್ತಾಯಿಸುವ ಬಗ್ಗೆ ಚರ್ಚೆ ಮಾಡುತ್ತೇವೆ’ ಎಂದು ಹೇಳಿದರು.


ಎಫ್ ಸಿಐ ಜತೆ ಮನವಿ ಮಾಡದೇ ಕಾನೂನು ಹೋರಾಟ ಮಾಡಿ ಪಡೆಯಬಹುದಲ್ಲವೇ ಎಂದು ಕೇಳಿದಾಗ, ‘ಕಾನೂನು ಹೋರಾಟ ಬೇಡ. ಒಕ್ಕೂಟ ವ್ಯವಸ್ಥೆಯಲ್ಲಿ ಯಾರಿಗೆ ಏನು ಸಿಗಬೇಕೋ ಅವರಿಗೆ ಸಿಗಬೇಕು. ನಾವು ಕೇಂದ್ರ ಸರ್ಕಾರಕ್ಕೆ ಶೇ.40 ರಷ್ಟು ತೆರಿಗೆ ಪಾವತಿ ಮಾಡುತ್ತೇವೆ. ಆದರೆ ನಮಗೆ ವಾಪಸ್ ಕೇವಲ ಶೇ.17ರಷ್ಟು ಮಾತ್ರ ಸಿಗುತ್ತದೆ. ಎಲ್ಲರನ್ನು ಸಮಾನವಾಗಿ ನೋಡಬೇಕು ಎಂಬ ಸಂವಿಧಾನ ಪೀಠಿಕೆಯನ್ನು ಎಲ್ಲ ಶಾಲೆಗಳಲ್ಲಿ ಓದಿಸಲು ಸರ್ಕಾರ ತೀರ್ಮಾನಿಸಿದೆ’ ಎಂದು ತಿಳಿಸಿದರು.


ಬೇರೆ ರಾಜ್ಯಗಳು ಅಕ್ಕಿಯನ್ನು ಹೆಚ್ಚಿನ ದರಕ್ಕೆ ನೀಡುತ್ತೇವೆ ಎಂದರೆ ಏನು ಮಾಡುತ್ತೀರಿ ಎಂದು ಕೇಳಿದಾಗ, ‘ಈಗ ಎಫ್ ಸಿಐನಲ್ಲಿ ಏನು ದರ ನಿಗದಿಯಾಗಿದೆಯೋ ಆ ದರದಲ್ಲಿ ಖರೀದಿ ಮಾಡುತ್ತೇವೆ’ ಎಂದು ತಿಳಿಸಿದರು.


ಸಚಿವ ಎಂ. ಸಿ. ಸುಧಾಕರ್, ಕೆಪಿಸಿಸಿ ಕಾರ್ಯಾ ಧ್ಯಕ್ಷರಾದ ಸಲೀಂ ಅಹ್ಮದ್, ಚಂದ್ರಪ್ಪ, ಶಾಸಕ ಶ್ರೀನಿವಾಸ್ ಮಾನೆ, ಎಂಎಲ್ಸಿ ದಿನೇಶ್ ಗೂಳಿಗೌಡ, ಎನ್ ಎಸ್ ಯುಐ ರಾಜ್ಯಾಧ್ಯಕ್ಷ ಕೀರ್ತಿ ಗಣೇಶ್ ಉಪಸ್ಥಿತರಿದ್ದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.