ಡ್ರಗ್ ನಿಯಂತ್ರಣಕ್ಕೆ ಸಾರ್ವಜನಿಕರ ಸಹಕಾರ ಅಗತ್ಯ- ಡಾ.ಜಿ. ಪರಮೇಶ್ವರ
ಪಂಜಾಬ್‌ನಲ್ಲಿ ಮಾದವ ವ್ಯಸನಿಗಳ ಸಂಖ್ಯೆ ಹೆಚ್ಚಿದೆ. ಕ್ರಮೇಣ ಎಲ್ಲ ರಾಜ್ಯಗಳಿಗೂ ಡ್ರಗ್ ಪಸರಿಸಿದೆ. ಬೆಂಗಳೂರಿನಲ್ಲಿಯೇ ಡ್ರಗ್ ತಯಾರಾಗುವ ವಿಚಾರವೂ ಗಮನಕ್ಕೆ ಬಂದಿದೆ.
ಬೆಂಗಳೂರು: ಮಾದಕ ವಸ್ತುಗಳ ಬಳಕೆ ತಡೆಗಟ್ಟಲು ಸಾರ್ವಜನಿಕ ಹಾಗೂ ಶಿಕ್ಷಣ ಸಂಸ್ಥೆಗಳ ಸಹಕಾರ ಅತ್ಯಂತ ಅವಶ್ಯಕ ಎಂದು ಉಪಮುಖ್ಯಮಂತ್ರಿ ಹಾಗೂ ಗೃಹ ಸಚಿವ ಡಾ.ಜಿ. ಪರಮೇಶ್ವರ ಹೇಳಿದರು.
ಬೆಂಗಳೂರು ನಗರ ಪೊಲೀಸ್ ವತಿಯಿಂದ ಸೋಮವಾರ ನಿಮ್ಹಾನ್ಸ್ ಸಭಾಂಗಣದಲ್ಲಿ ಆಯೋಜಿಸಿದ್ದ ಮಾದಕ ವಸ್ತುಗಳ ಬಳಕೆ ತಡೆಗಟ್ಟುವ ಸಮಾವೇಶ ಹಾಗೂ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪಂಜಾಬ್‌ನಲ್ಲಿ ಮಾದವ ವ್ಯಸನಿಗಳ ಸಂಖ್ಯೆ ಹೆಚ್ಚಿದೆ. ಕ್ರಮೇಣ ಎಲ್ಲ ರಾಜ್ಯಗಳಿಗೂ ಡ್ರಗ್ ಪಸರಿಸಿದೆ. ಬೆಂಗಳೂರಿನಲ್ಲಿಯೇ ಡ್ರಗ್ ತಯಾರಾಗುವ ವಿಚಾರವೂ ಗಮನಕ್ಕೆ ಬಂದಿದೆ. ಶಾಲೆಗಳಲ್ಲಿ ಚಾಕೋಲೆಟ್ ಮೂಲಕ ಡ್ರಗ್ ವ್ಯಸಕ್ಕೆ ಅಡಿಪಾಯ ಹಾಕಿ, ಕಾಲೇಜು ಮೆಟ್ಟಿಲೇರುವ ಒಳಗಾಗಿ ಅವರನ್ನು ಸಂಪೂರ್ಣ ವ್ಯಸನಿಗಳನ್ನಾಗಿ ಪರಿವರ್ತಿಸುತ್ತಾರೆ ಎಂದರು.
ಪ್ರತಿ ಕಾಲೇಜುಗಳ ಮುಂಭಾಗ ಸಣ್ಣ ಪೆಟ್ಟಿ ಅಂಗಡಿ ಇಟ್ಟುಕೊಂಡು ಮಾರುತ್ತಾರೆ. ಹೀಗಾಗಿ ಮೂಲದಿಂದಲೇ ಜಾಗೃತಿ ಮೂಡಿಸಬೇಕು ಎಂದರು.
ಡ್ರಗ್ ಮಾರಾಟಗಾರರಿಗೆ ಕಾನೂನಿನಲ್ಲಿ ಕಠಿಣ ಶಿಕ್ಷೆ ಇದೆ. ಪೋಕ್ಸೋ ಕಾಯಿದೆ ಅಡಿಯಲ್ಲಿ ಬಂಧಿಸುವ ಅವಕಾಶವಿದೆ. ಕಾನೂನಿನ ಬಗ್ಗೆ ಅರಿವು ಮೂಡಿಸಿದರೆ ಮಾರಾಟಗಾರರು ಭಯದಿಂದ ದೂರ ಉಳಿಯುತ್ತಾರೆ ಎಂದರು.
ನಮ್ಮರಾಜ್ಯದಲ್ಲೇ ಗಾಂಜಾ ಬೆಳೆಯುವವರೂ ಇದ್ದಾರೆ. ಹೀಗಾಗಿ ಸಾರ್ವಜನಿಕರ ಸಹಕಾರದೊಂದಿಗೆ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಅಭಿಪ್ರಾಯ ಪಟ್ಟ ಪರಮೇಶ್ವರ್, ಡ್ರಗ್ ಸೇವನೆ ತ್ಯಜಿಸುವ ಕುರಿತು ಬೈಕ್ ಮೂಲಕ ಜಾಗೃತಿ ಮೂಡಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಡ್ರಗ್ ಸೇವನೆಯ ದುಷ್ಪರಿಣಾಮದ ಕುರಿತು ಚಿತ್ರಕಲಾ ಪ್ರದರ್ಶನ, ಕಿರುಚಿತ್ರ ಪ್ರದರ್ಶನ ಹಾಗೂ ಬೀದಿನಾಟಕ ಪ್ರದರ್ಶಿಸಲಾಯಿತು. ಕಾರ್ಯಕ್ರಮದಲ್ಲಿ ಆಯುಕ್ತ ಸುನೀಲ್ ಕುಮಾರ್ ಉಪಸ್ಥಿತರಿದ್ದರು.