ಪ್ರಧಾನಿ ಕೊಡಗಿನ ವೈಮಾನಿಕ ಸಮೀಕ್ಷೆ ನಡೆಸಲಿ: ಡಿಸಿಎಂ ಡಾ.ಜಿ. ಪರಮೇಶ್ವರ್ ಆಗ್ರಹ
ನೆರೆಪೀಡಿತ ಪ್ರದೇಶಗಳಲ್ಲಿ ಆಗಿರುವ ಹಾನಿಯನ್ನು ಕಂಡು ನೋವುಂಟಾಯಿತು. ಅಲ್ಲಿನ ಜನಜೀವನವನ್ನು ಮೊದಲಿನ ಪರಿಸ್ಥಿತಿಗೆ ತರಲು ಕೇಂದ್ರದ ನೆರವೂ ಬೇಕಿದೆ.
ಕೊಡಗು: ಮಳೆಹಾನಿಯಿಂದ ಉಂಟಾಗಿರುವ ನಷ್ಟವನ್ನು ಅಂದಾಜಿಸಿದ ಬಳಿಕ ಕೇಂದ್ರ ಸರ್ಕಾರದಿಂದ ಧನಸಹಾಯಕ್ಕೆ ಮನವಿ ಮಾಡಲಾಗುವುದು ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಹೇಳಿದ್ದಾರೆ.
ಕೊಡಗು, ಮಡಿಕೇರಿ, ಕುಶಾಲನಗರಕ್ಕೆ ಸೋಮವಾರ ಭೇಟಿ ನೀಡಿದ ಅವರು, ಅಲ್ಲಿನ ಪರಿಸ್ಥಿತಿ ವೀಕ್ಷಿಸಿ, ಸಂತ್ರಸ್ತರ ನೋವು ಆಲಿಸಿದರು. ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಕೇರಳಕ್ಕೆ 500 ಕೋಟಿ ರೂ. ನೀಡಿದಂತೆ ಕೊಡಗಿಗೂ ಸಹಾಯ ಧನ ನೀಡಬೇಕು. ನೆರೆಪೀಡಿತ ಪ್ರದೇಶಗಳಲ್ಲಿ ಆಗಿರುವ ಹಾನಿಯನ್ನು ಕಂಡು ನೋವುಂಟಾಯಿತು. ಅಲ್ಲಿನ ಜನಜೀವನವನ್ನು ಮೊದಲಿನ ಪರಿಸ್ಥಿತಿಗೆ ತರಲು ಕೇಂದ್ರದ ನೆರವೂ ಬೇಕಿದೆ. ಮೊದಲು ಇಲ್ಲಿನ ಆಸ್ತಿ, ಬೆಳೆ, ರಸ್ತೆ ಸೇರಿದಂತೆ ಎಲ್ಲ ನಷ್ಟವನ್ನು ಅಂದಾಜಿಸಿ ವರದಿ ಪಡೆದ ಬಳಿಕ ಕೇಂದ್ರಕ್ಕೆ ಹಣದ ನೆರವಿಗೆ ಮನವಿ ಮಾಡಲಾಗುವುದು. ಪ್ರಧಾನಿ ನರೇಂದ್ರ ಮೋದಿ ಅವರು ಕೊಡಗಿನಲ್ಲೂ ವೈಮಾನಿಕ ಸಮೀಕ್ಷೆ ನಡೆಸಬೇಕು ಎಂದು ಆಗ್ರಹಿಸಿದರು.
ಕೊಡಗಿನಲ್ಲಿ ಹಿಂದೆಂದಿಗಿಂತಲೂ ಈ ಬಾರಿ ಹೆಚ್ಚು ಮಳೆಯಾದ್ದರಿಂದ ಈ ಭಾಗ ಸಂಪೂರ್ಣ ಹಾನಿಗೊಳಲಾಗಿದೆ. 50,000 ಜನ ಮಳೆಯಿಂದ ಸಂಕಷ್ಟಕ್ಕೆ ಸಿಲುಕಿದ್ದು, 5,000 ಜನರಿಗೆ ಸಂತ್ರಸ್ತ ಕೇಂದ್ರಗಳಲ್ಲಿ ಆಶ್ರಯ ನೀಡಲಾಗಿದೆ. ಸಾಕಷ್ಟು ಮನೆಗಳು ಕೊಚ್ಚಿ ಹೋಗಿವೆ. ರಸ್ತೆ ಸಂಪರ್ಕ ಕೂಡ ಕಡಿತಗೊಂಡಿದೆ.
ರಾಜ್ಯ ಸರ್ಕಾರ ನೆರೆ ನಿರಾಶ್ರಿತ ನೆರವಿಗೆ ಧಾವಿಸಿದೆ. ಸಿಎಂ, ಕಂದಾಯ ಸಚಿವರು ಸೇರಿದಂತೆ ಹಲವು ಸಚಿವರುಗಳು ಇಲ್ಲಿನ ಪರಿಸ್ಥಿತಿ ಅವಲೋಕಿಸಿ, ಇಲ್ಲಿಯೇ ಬೀಡುಬಿಟ್ಟಿದ್ದಾರೆ. ಮತ್ತೊಂದೆಡೆ ರಾಜ್ಯಾದ್ಯಂತ ಸಾರ್ವಜನಿಕರು ಇವರ ಕಷ್ಟಕ್ಕೆ ನೆರವಾಗಿ, ಆಹಾರ, ಇತರೆ ಸಾಮಾಗ್ರಿಗಳು ಸೇರಿದಂತೆ ಎಲ್ಲಾ ರೀತಿಯ ಸಹಾಯಹಸ್ತ ಚಾಚುತ್ತಿದ್ದಾರೆ ಎಂದರು.
ಪ್ರಕೃತಿ ವಿಕೋಪದಿಂದಾಗಿ ಇದುವರೆಗೂ ಒಟ್ಟು ಏಳು ಜನ ಸಾವನ್ನಪ್ಪಿರುವ ಮಾಹಿತಿ ಲಭ್ಯವಾಗಿದೆ. ಕೆಲವರು ಕಾಣೆಯಾಗಿದ್ದಾರೆ. ಅವರಿಗಾಗಿ ಹುಡುಕಾಟ ನಡೆಯುತ್ತಿದೆ. ಮನೆ ಕಳೆದುಕೊಂಡವರಿಗೆ ಸರ್ಕಾರದಿಂದಲೇ ಮನೆ ನಿರ್ಮಿಸಿಕೊಡಲು ತೀರ್ಮಾನಿಸಿದ್ದು, 'ಪ್ರೀ ಫ್ಯಾಬ್ರಿಕ್' ಮನೆ ನಿರ್ಮಿಸಲು ಚಿಂತಿಸಲಾಗಿದೆ. ಕೆಲವರ ಮನೆ ಇದ್ದ ಜಾಗವೂ ಗುರುತಿಸಲು ಸಾಧ್ಯವಾಗದ ರೀತಿ ಹಾಳಾಗಿದೆ. ಅಂಥವರಿಗೆ ಸರ್ಕಾರದ ಜಾಗದಲ್ಲಿಯೇ ಮನೆ ನಿರ್ಮಿಸಿ ಕೊಡಲಾಗುತ್ತದೆ ಎಂದರು.
ಆಹಾರ ಸಾಮಾಗ್ರಿಗಳನ್ನು ಕೆಲವರು ದುರುಪಯೋಗ ಪಡಿಸಿಕೊಳ್ಳುತ್ತಿರುವ ಬಗ್ಗೆ ನಮಗೂ ದೂರು ಬಂದಿದೆ ಎಂದು ತಿಳಿಸಿದ ಪರಮೇಶ್ವರ್ ಈ ಬಗ್ಗೆ ಪರಿಶೀಲನೆ ನಡೆಸುವಂತೆ ಎಸ್‌ಪಿ ಅವರಿಗೆ ಸೂಚನೆ ನೀಡಿರುವುದಾಗಿ ಹೇಳಿದರು.