ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿಗೆ ಎರಡಂಕಿ ದಾಟಲು ಬಿಡುವುದಿಲ್ಲ: ಹೆಚ್.ಡಿ.ದೇವೇಗೌಡ
ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಜಂಟಿಯಾಗಿ ನಿಂತು ಬಿಜೆಪಿಗೆ ಟಾಂಗ್ ನೀಡುತ್ತೇವೆ ಎಂದು ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಹೇಳಿದ್ದಾರೆ.
ಬೆಂಗಳೂರು: ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಜಂಟಿಯಾಗಿ ನಿಂತು ಬಿಜೆಪಿಗೆ ಟಾಂಗ್ ನೀಡುತ್ತೇವೆ ಎಂದು ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಹೇಳಿದ್ದಾರೆ.
ಬೆಂಗಳೂರಿನಲ್ಲಿಂದು ಕಾಂಗ್ರೆಸ್-ಜೆಡಿಎಸ್ ಪಕ್ಷಗಳ ಜಂಟಿ ಸುದ್ದಿಗೊಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಹೆಚ್.ಡಿ.ದೇವೇಗೌಡರು, ನಮ್ಮ ಛಲ ಏನಿದ್ದರೂ ಕರ್ನಾಟಕದಲ್ಲಿ ಬಿಜೆಪಿ ಗಳಿಸಿದ್ದ 16 ಸ್ಥಾನಗಳನ್ನು ಗಳಿಸುವುದು. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ 10 ಲೋಕಸಭಾ ಸ್ಥಾನಗಳನ್ನು ಕಾಂಗ್ರೆಸ್ ಗಳಿಸಿತ್ತು. ನಾವು 2 ಸ್ಥಾನಗಳನ್ನು ಗಳಿಸಿದ್ದೆವು. ಆದರೆ ಈ ಬಾರಿ ನಮ್ಮ ಸ್ಥಾನಗಳನ್ನು ಉಳಿಸಿಕೊಳ್ಳುವುದರ ಜೊತೆಗೆ ಬಿಜೆಪಿಯ 16 ಸ್ಥಾನಗಳಲ್ಲೂ ನಾವು ಗೆಲುವು ಸಾಧಿಸುವುದು ನಮ್ಮ ಗುರಿ. ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಗೆ ಎರಡಂಕಿಗಿಂತ ಹೆಚ್ಚು ಸ್ಥಾನ ಗಳಿಸಲು ನಾವು ಬಿಡುವುದಿಲ್ಲ ಎಂದು ದೇವೇಗೌಡರು ವಿಶ್ವಾಸ ವ್ಯಕ್ತಪಡಿಸಿದರು.
ಮಾರ್ಚ್ 21ರಂದು ಕಾಂಗ್ರೆಸ್-ಜೆಡಿಎಸ್ ಜಂಟಿ ಸಮಾವೇಶ
ಮಾರ್ಚ್ 31ರಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದಲ್ಲಿ ಬೃಹತ್ ಜಂಟಿ ಸಮಾವೇಶ ನಡೆಸುತ್ತೇವೆ. ಉಭಯ ಪಕ್ಷಗಳಲ್ಲಿ ಭಿನ್ನಾಭಿಪ್ರಾಯ ಬರದಂತೆ ಕ್ರಮಕೈಗೊಳ್ಳುತ್ತೇವೆ. ಎಲ್ಲ ವಿಚಾರಗಳಲ್ಲಿ ನಾವು ವಿಸ್ತೃತ ಚರ್ಚೆ ಮಾಡಿದ್ದೇವೆ. ನಮಗೆ ಬಹಳ ಕಡಿಮೆ ಸಮಯವಿದೆ. ಹಾಗಾಗಿ ಯಾವ ಕ್ಷೇತ್ರಗಳಲ್ಲಿ ಭಿನ್ನಾಭಿಪ್ರಾಯವಿದೆ ಎಂಬುದನ್ನು ಗಮನಿಸಿ ನಾನು, ಸಿದ್ದರಾಮಯ್ಯ ಮತ್ತು ದಿನೇಶ್ ಗುಂಡುರಾವ್ ಸೇರಿ ಬಗೆಹರಿಸುತ್ತೇವೆ ಎಂದು ಹೇಳಿದರು.
ಕೋಮು ಶಕ್ತಿ ತಡೆಗಟ್ಟುವುದೇ ನಮ್ಮ ಉದ್ದೇಶ
ನಮ್ಮ ಮೂಲ ಉದ್ದೇಶ ಕೋಮು ಶಕ್ತಿ ತಡೆಗಟ್ಟುವುದು. ರಾಜ್ಯದಲ್ಲಿ ಏನೇ ಬಿಕ್ಕಟ್ಟಿದ್ದರೂ ಅದಕ್ಕೆ ನಾನು, ಸಿದ್ದರಾಮಯ್ಯ ಹೊಣೆ ಹೊತ್ತು ಬಿಕ್ಕಟ್ಟು ಬಗೆಹರಿಸುವ ಪ್ರಯತ್ನ ಮಾಡುತ್ತೇವೆ. ಶಾಸಕರಾಗಲಿ, ಜಿಲ್ಲಾ ಮುಖಂಡರಾಗಲಿ ಒಡಕಿನ ಮಾತನಾಡಬಾರದು. ಏನೇ ಇದ್ದರೂ ನಮ್ಮ ಬಳಿ ಚರ್ಚೆ ಮಾಡಬೇಕು. ಚುನಾವಣೆ ಬಳಿಕವೂ ರಾಜ್ಯದ ಆಡಳಿತ ನಡೆಯುತ್ತದೆ ಅಂತ ಸ್ಪಷ್ಟಪಡಿಸಿದರು. ಇದೇ ವೇಳೆ, ನಾನು, ಸಿದ್ದರಾಮಯ್ಯ ಹಲವು ಭಾರಿ ಒಟ್ಟಾಗಿ ಕೆಲಸ ಮಾಡಿದ್ದೇವೆ. ಇಬ್ಬರೂ ಒಟ್ಟಾಗಿ ಪ್ರಚಾರ ಮಾಡ್ತೇವೆ. ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಕೂಡ ಒಟ್ಟಾಗಿ ಸೇರ್ತಾರೆ. ಆಕಸ್ಮಿಕವಾಗಿ ಪರಮೇಶ್ವರ್ ಇವತ್ತು ಬಂದಿಲ್ಲ ಅಷ್ಟೇ ಎಂದು ದೇವೇಗೌಡರು ತಿಳಿಸಿದರು.
ಮಹಾಘಟಬಂಧನ್ ಬಗ್ಗೆ ಅಪಹಾಸ್ಯ ಮಾಡುವ ಮೋದಿಗೆ ತಕ್ಕ ಉತ್ತರ
ಲೋಕಸಭೆ ಚುನಾವಣೆಗೆ ಪ್ರಾದೇಶಿಕ ಪಕ್ಷಗಳೆಲ್ಲಾ ಸೇರಿ ಮಹಾಘಟಬಂಧನ್ ಮಾಡಿಕೊಂಡಿರುವ ಬಗ್ಗೆ ಪ್ರಧಾನಿ ಮೋದಿ ಅವರು ಲಘುವಾಗಿ ಮಾತನಾಡುತ್ತಾರೆ. ಅವರು ಮಾಡುವ ಶಬ್ದ ಪ್ರಯೋಗ ನಮಗೆ ಪ್ರಚೋದನೆ ಸಹ ನೀಡುತ್ತದೆ. ಅಷ್ಟಕ್ಕೂ, ದೇಶದ 15 ರಾಜ್ಯಗಳಲ್ಲಿ ಬಿಜೆಪಿ ಒಂದಲ್ಲಾ ಒಂದು ರೀತಿಯಲ್ಲಿ ಘಟಬಂಧನ್ ಸರ್ಕಾರವನ್ನೇ ನಡೆಸುತ್ತಿದ್ದಾರೆ. ಆದರೂ ನಮ್ಮ ಬಗ್ಗೆ ಮಾತನಾಡುತ್ತಾರೆ. ಹೀಗಾಗಿ ನಾವು ಐಕ್ಯತೆಯಿಂದ ಬಿಜೆಪಿಗೆ ತಕ್ಕ ಉತ್ತರ ನೀಡುತ್ತೇವೆ. ಇಡೀ ದೇಶದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಕರ್ನಾಟಕದಲ್ಲಿ ಮಾತ್ರ ಇರುವುದು. ಇದು ರಾಷ್ಟ್ರಕ್ಕೆ ಮಾದರಿಯಾಗಲಿದೆ ಎಂದು ಹೇಳಿದರು.