ತುಮಕೂರು: ಮುಂದಿನ ಆರೇಳು ತಿಂಗಳುಗಳಲ್ಲಿ ಸಿದ್ಧಗಂಗಾ ಶ್ರೀ ಶಿವಕುಮಾರ ಸ್ವಾಮೀಜಿಗೆ ಭಾರತ ರತ್ನ ಪ್ರಶಸ್ತಿ ನೀಡುವ ಅವಕಾಶ ನಮಗೆ ದೊರೆಯಲಿದೆ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಇಲ್ಲಿನ ಸಿದ್ಧಗಂಗಾ ಮಠದಲ್ಲಿ ನಡೆದ ಶ್ರೀ ಲಿಂ. ಡಾ. ಶಿವಕುಮಾರ ಸ್ವಾಮಿಗಳ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಶ್ರೀಗಳಿಗೆ ಭಾರತ ರತ್ನ ನೀಡುವಂತೆ ಎಲ್ಲರೂ ಒತ್ತಾಯಿಸಿದ್ದರು. ಅದರಂತೆ ನಾವೂ ಸಹ ಪತ್ರ ಬರೆದು, ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದೆವು. ಆದರೆ ಕೇಂದ್ರ ಸರ್ಕಾರ ಪ್ರಶಸ್ತಿ ಘೋಷಿಸದಿರುವುದು ಬೇಸರ ತಂದಿದೆ ಎಂದು ಹೇಳಿದರು.


ಮುಂದುವರೆದು ಮಾತನಾಡಿದ ಅವರು, ಸಿದ್ದಗಂಗಾ ಶ್ರೀಗಳು ಧಾರ್ಮಿಕ ಶೈಕ್ಷಣಿಕ ಕ್ಷೇತ್ರದಲ್ಲಿ‌ ನಾಡಿಗೆ ಸಲ್ಲಿಸಿದ ಸೇವೆಯ ಬಗ್ಗೆ ಪದಬಳಕೆ ಮಾಡುವ ಶಕ್ತಿ ನಮ್ಮಲ್ಲಿಲ್ಲ. ಅಷ್ಟೊಂದು ಅಪಾರ, ಸುದೀರ್ಘವಾಗಿ ಕ್ಷೇತ್ರದ ಮುಖಾಂತರ ಜಾತ್ಯಾತೀತವಾಗಿ‌ ಅನ್ನ, ಆಶ್ರಯ, ಜ್ಞಾನ ದಾಸೋಹ ನೀಡಿದ‌ ಮಹನೀಯರು. ಅವರಿಗೆ ಭಾರತ ರತ್ನ ನೀಡಿದ್ದರೆ ಆ ಪ್ರಶಸ್ತಿಗೇ ಗೌರವ ಬರುತ್ತಿತ್ತು. ಮುಂದಿನ ಆರೇಳು ತಿಂಗಳಲ್ಲಿ ಶ್ರೀಗಳಿಗೆ ಭಾರತ ರತ್ನ ಕೊಡುವ ಅವಕಾಶ ನಮಗೆ ಸಿಗುತ್ತದೆ. ನಿಮ್ಮ ಆಶೀರ್ವಾದದಿಂದಲೇ ಅದು ಸಾಧ್ಯವಾಗುತ್ತದೆ. ನಾನು ಈ ಮಾತನ್ನು ಸೂಕ್ಷ್ಮವಾಗಿ ಹೇಳುತ್ತಿದ್ದೇನೆ ಎನ್ನುವ ಮೂಲಕ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮಹಾಘಟಬಂಧನ್ ಮೂಲಕ ಕೇಂದ್ರದಲ್ಲಿ ಅಧಿಕಾರಕ್ಕೆ ಬರುವ ವಿಶ್ವಾಸ ವ್ಯಕ್ತಪಡಿಸಿದರು.