ಯೋಗ್ಯತೆ ಇಲ್ಲದಿದ್ರೆ ಅಧಿಕಾರ ಬಿಡಿ, ನಾವು ಸರ್ಕಾರ ರಚನೆ ಮಾಡ್ತೇವೆ: ಬಿ.ಎಸ್.ಯಡಿಯೂರಪ್ಪ
ಜೆಡಿಎಸ್-ಕಾಂಗ್ರೆಸ್ ಪಕ್ಷದವರು ಯೋಗ್ಯತೆಯಿದ್ದರೆ ಅಧಿಕಾರ ನಡೆಸಲಿ. ಇಲ್ಲವಾದರೆ ಹೊರಗೆ ಬರಲಿ. ನಾವು ಸರ್ಕಾರ ರಚಿಸಿ ಆಡಳಿತ ನಡೆಸುತ್ತೇವೆ ಎಂದು ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಬೆಂಗಳೂರು: ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರು ಮಧ್ಯಂತರ ಚುನಾವಣೆ ಬಗ್ಗೆ ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು, ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಮಧ್ಯಂತರ ಚುನಾವಣೆಗೆ ಅವಕಾಶ ಮಾಡಿಕೊಡುವುದಿಲ್ಲ ಎಂದಿದ್ದಾರೆ.
ಇಂದಿಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಜೆಡಿಎಸ್-ಕಾಂಗ್ರೆಸ್ ಪಕ್ಷದವರು ಯೋಗ್ಯತೆಯಿದ್ದರೆ ಅಧಿಕಾರ ನಡೆಸಲಿ. ಇಲ್ಲವಾದರೆ ಹೊರಗೆ ಬರಲಿ. ನಾವು ಸರ್ಕಾರ ರಚಿಸಿ ಆಡಳಿತ ನಡೆಸುತ್ತೇವೆ. ಯಾವುದೇ ಕಾರಣಕ್ಕೂ ಮಧ್ಯಂತರ ಚುನಾವಣೆಗೆ ಅವಕಾಶ ನೀಡುವುದಿಲ್ಲ. ರಾಜ್ಯದ ಜನತೆಯೂ ಇದಕ್ಕೆ ಒಪ್ಪುವುದಿಲ್ಲ ಎಂದು ಹೇಳಿದ್ದಾರೆ.
ಮುಂದುವರೆದು ಮಾತನಾಡುತ್ತಾ, ಕಾಂಗ್ರೆಸ್ ನಲ್ಲಿ 20 ಮಂದಿ ಅತೃಪ್ತ ಶಾಸಕರಿದ್ದು, ಅವರನ್ನು ನಾವು ಸಂಪರ್ಕ ಮಾಡಿಲ್ಲ. ಆದರೆ, ಅವರು ಯಾವುದೇ ಸಂದರ್ಭದಲ್ಲಿ ಹೊರ ಬರುವುದು ಖಚಿತ. ಅದೇ ರೀತಿ ನಾವೂ ಸಹ ಯಾವುದೇ ರೀತಿಯಲ್ಲಿ ಸರ್ಕಾರ ಉರುಳಿಸುವ ಕೆಲಸದಲ್ಲಿ ನಿರತನಾಗಿಲ್ಲ. ಹಾಗಾಗಿ ಅವರಿಗೆ ಯೋಗ್ಯತೆ ಇದ್ರೆ ಕೆಲಸ ಮಾಡಲಿ, ಇಲ್ಲವಾದರೆ ನಾವು 105 ಜನ ಶಾಸಕರಿದ್ದೇವೆ. ಸರ್ಕಾರ ರಚಿಸಿ ಉತ್ತಮ ಆಡಳಿತ ನಡೆಸುತ್ತೇವೆ ಎಂದು ಯಡಿಯೂರಪ್ಪ ತಿಳಿಸಿದ್ದಾರೆ.