ಬೆಂಗಳೂರು: ಉಪಚುನಾವಣೆಯಲ್ಲಿ ರಾಜ್ಯದ ಎಲ್ಲಾ 15 ವಿಧನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದ್ದು, ಎಲ್ಲಾ ಕ್ಷೇತ್ರಗಳಲ್ಲೂ ಗೆಲುವು ನಿಶ್ಚಿತ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 


COMMERCIAL BREAK
SCROLL TO CONTINUE READING

ಚುನಾವಣಾ ಆಯೋಗವು ರಾಜ್ಯದಲ್ಲಿ ಉಪಚುನಾವಣೆ ದಿನಾಂಕ ಘೋಷಣೆ ಮಾಡಿದ ಬೆನ್ನಲ್ಲೇ ಶನಿವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಬಾರಿ ಯಾವುದೇ ಮೈತ್ರಿ ಇರುವುದಿಲ್ಲ. ಎಲ್ಲಾ 15 ವಿಧಾನಸಭಾ ಕ್ಷೇತ್ರಗಳಲ್ಲೂ ನಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದ್ದೇವೆ. ಎಲ್ಲಾ ಕ್ಷೇತ್ರಗಳಲ್ಲೂ ತಯಾರಿ ಮಾಡಿಕೊಂಡಿದ್ದೇವೆ. ಅನರ್ಹರ ಸ್ಪರ್ಧೆಗೆ ಬಿಜೆಪಿಯಲ್ಲೇ ವಿರೋಧವಿದ್ದು, ಜನರಲ್ಲೂ ಅಸಮಧಾನವಿದೆ. ಹಾಗಾಗಿ ಉಪ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಗಳ ಗೆಲುವು ನಿಶ್ಚಿತ ಎಂದಿದ್ದಾರೆ.


ಅನರ್ಹ ಶಾಸಕರು ಬಿಜೆಪಿ ಜೊತೆ ಶಾಮಿಲಾಗಿದ್ದರು. ಸಮ್ಮಿಶ್ರ ಸರ್ಕಾರ ಬೀಳಿಸಲು ಷಡ್ಯಂತ್ರ ಮಾಡಿದ್ದರು. ಅವರ ನಡವಳಿಕೆಯಿಂದ ಇದು ಸಾಬೀತಾಗಿದೆ. ರಾಜ್ಯದ ಜನರಿಗೆ ಇದು ಗೊತ್ತಿರುವ ವಿಚಾರ. ಹಾಗಾಗಿ ಪಕ್ಷಕ್ಕೆ, ಮತದಾರರಿಗೆ, ಕಾರ್ಯಕರ್ತರಿಗೆ ದ್ರೋಹ ಮಾಡಿದವರ ವಿರುದ್ಧ ಜನರು ಮತ ಚಲಾಯಿಸುವ ವಿಶ್ವಾಸವಿದೆ ಎಂದು ಹೇಳಿದ್ದಾರೆ.


ಮುಂದುವರೆದು ಮಾತನಾಡಿದ ಅವರು, ಕೇಂದ್ರದಿಂದ ನೆರೆ ಪರಿಹಾರ ತರುವಲ್ಲಿ ರಾಜ್ಯದ ಬಿಜೆಪಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಬೆಳಗಾವಿಯಲ್ಲಿ ಬೃಹತ್ ಪ್ರತಿಭಟನೆ ನಡೆಸುವ ಮೂಲಕ ರಾಜ್ಯ, ಕೇಂದ್ರ ಬಿಜೆಪಿ ಸರ್ಕಾರಗಳ ಗಮನ‌ಸೆಳೆಯುವ ಪ್ರಯತ್ನ ಮಾಡುತ್ತೇವೆ. ರಾಜ್ಯದ ಜನರಿಗೆ ಸತ್ಯಾಂಶಗಳನ್ನು ಮನವರಿಕೆ ಮಾಡಿಕೊಡುತ್ತೇವೆ. ಇದಕ್ಕಾಗಿ ಎಲ್ಲಾ ಸಿದ್ಧತೆ ನಡೆಸಿರುವುದಾಗಿ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.