ಸಮಾಜದ ಶ್ರೇಯೋಭಿವೃದ್ದಿಯೇ ಸಂವಿಧಾನದ ಆಶಯ: ಸಚಿವ ಎಸ್ ಮಧು ಬಂಗಾರಪ್ಪ
ಸಮಾಜವಾದದಲ್ಲಿ ನಂಬಿಕೆಯುಳ್ಳ ಜನಪ್ರಿಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರ ನೇತೃತ್ವದ ನಮ್ಮ ಸರ್ಕಾರ ಸರ್ವರಿಗೂ ಸಮಪಾಲು-ಸರ್ವರಿಗೂ ಸಮಬಾಳು ಎಂಬ ತತ್ವದಡಿಯಲ್ಲಿ ನಂಬಿಕೆಯಿರಿಸಿದ್ದು ಹಲವು ಹೊಸ ಯೋಜನೆಗಳ ಮೂಲಕ ನಾಡಿನ ಸರ್ವತೋಮುಖ ಅಭಿವೃದ್ದಿಗೆ ವಿಶೇಷ ಗಮನ ಹರಿಸಿದೆ.
ಶಿವಮೊಗ್ಗ: ಸಂವಿಧಾನ ಕರ್ತೃ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಹೇಳಿದಂತೆ ಸಮಾಜದ ಶ್ರೇಯೋಭಿವೃದ್ದಿಯೇ ನಮ್ಮ ಸಂವಿಧಾನದ ಅಂತಿಮ ಆಶಯವೆಂದು ಅರಿತು ಅಭಿವೃದ್ದಿಯ ಪಥದಲ್ಲಿ ನಾವೆಲ್ಲ ನಡೆಯೋಣವೆಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್. ಮಧು ಬಂಗಾರಪ್ಪ ನುಡಿದರು.
ಜಿಲ್ಲಾ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಇಂದು ಡಿಎಆರ್ ಪೊಲೀಸ್ ಪೆರೇಡ್ ಮೈದಾನದಲ್ಲಿ ಏರ್ಪಡಿಸಲಾಗಿದ್ದ 75 ನೇ ಗಣರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದ ಸಚಿವರಾದ ಎಸ್. ಮಧು ಬಂಗಾರಪ್ಪ, ಭಾರತವನ್ನು ವಿಶ್ವಮಾನ್ಯ ಹಾಗೂ ಬಲಾಢ್ಯ ಗಣರಾಜ್ಯವನ್ನಾಗಿ ರೂಪಿಸುವಲ್ಲಿ ತಮ್ಮ ತನು-ಮನ-ಧನಗಳಿಂದ ತ್ಯಾಗಗೈದ, ಬಲಿದಾನ ನೀಡಿದ ನಾಯಕರನ್ನು, ಅಸಂಖ್ಯಾತ ಯೋಧರನ್ನು ಹಾಗೂ ದೇಶಾಭಿಮಾನಿಗಳನ್ನು ನೆನೆಯುವುದು ಮತ್ತು ಅವರು ಆಶಿಸಿದಂತೆ ರಾಷ್ಟ್ರವನ್ನು ಅಭ್ಯುದಯದ ಪಥದಲ್ಲಿ ಮುನ್ನಡೆಸುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯವಾಗಿದೆ ಎಂದರು.
ಸಮಾಜವಾದದಲ್ಲಿ ನಂಬಿಕೆಯುಳ್ಳ ಜನಪ್ರಿಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರ ನೇತೃತ್ವದ ನಮ್ಮ ಸರ್ಕಾರ ಸರ್ವರಿಗೂ ಸಮಪಾಲು-ಸರ್ವರಿಗೂ ಸಮಬಾಳು ಎಂಬ ತತ್ವದಡಿಯಲ್ಲಿ ನಂಬಿಕೆಯಿರಿಸಿದ್ದು ಹಲವು ಹೊಸ ಯೋಜನೆಗಳ ಮೂಲಕ ನಾಡಿನ ಸರ್ವತೋಮುಖ ಅಭಿವೃದ್ದಿಗೆ ವಿಶೇಷ ಗಮನ ಹರಿಸಿದೆ. ಅಲ್ಲದೇ ಗೃಹಲಕ್ಷ್ಮಿ, ಗೃಹಜ್ಯೋತಿ, ಶಕ್ತಿ, ಅನ್ನಭಾಗ್ಯ ಮತ್ತು ಯುವನಿಧಿ ಗ್ಯಾರಂಟಿ ಯೋಜನೆಗಳ ಮೂಲಕ ರಾಜ್ಯದ ಪ್ರತಿ ಮನೆಯ ಕೋಟ್ಯಾಂತರ ಫಲಾನುಭವಿಗಳಿಗೆ ನೇರ ಆರ್ಥಿಕ ಸೌಲಭ್ಯವನ್ನು ಒದಗಿಸಿದೆ ಎಂದವರು ತಿಳಿಸಿದರು.
ಇದನ್ನೂ ಓದಿ- Padma Awards 2024: ಗಣರಾಜ್ಯೋತ್ಸವದಂದು ಮೆಗಾಸ್ಟಾರ್‌ಗೆ ಲಭಿಸಿತು ಪದ್ಮವಿಭೂಷಣ ಪ್ರಶಸ್ತಿ!
ನಮ್ಮ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ಶಿಕ್ಷಣ ಕ್ಷೇತ್ರದಲ್ಲಿ ಗುಣಾತ್ಮಕ ಬದಲಾವಣೆ ತರಲು ಪ್ರಯತ್ನಿಸಲಾಗುತ್ತಿದೆ. ಸಿಎಸ್‍ಆರ್ ನಿಧಿಯ ಜೊತೆಗೆ ಇದೇ ವರ್ಷ 500 ಶಾಲೆಗಳನ್ನು ಕೆಪಿಎಸ್ ಶಾಲೆಗಳನ್ನಾಗಿ ಉನ್ನತೀಕರಿಸಲಾಗುತ್ತಿದೆ ಹಾಗೂ ಶರಾವತಿ ಮುಳುಗಡೆ ಸಂತ್ರಸ್ತರು, ಬಗರ್‍ಹುಕುಂ ಸಾಗುವಳಿದಾರರು ಮತ್ತು ಅರಣ್ಯ ವಾಸಿಗಳ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಜಿಲ್ಲೆಯಲ್ಲಿ ಮತ್ತು ಮಾನ್ಯ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಸಭೆಯನ್ನು ಆಯೋಜಿಸಲಾಗುತ್ತಿದೆ.
ವಚನ ಸಾಹಿತ್ಯದ ಮೂಲಕ ಆಧ್ಯಾತ್ಮ ಮತ್ತು ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನು ಸಾರಿದ 12 ನೇ ಶತಮಾನದ ಶರಣ, ಅನುಭವ ಮಂಟಪದ ಮೊದಲ ಪೀಠಾಧ್ಯಕ್ಷ ಅಲ್ಲಮಪ್ರಭುಗಳ ಜನ್ಮಸ್ಥಳ ಬಳ್ಳಿಗಾವಿಯನ್ನು ಸಮಗ್ರ ಅಭಿವೃದ್ದಿಗೆ ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅಲ್ಲದೇ ನಮ್ಮ ಕೋರಿಕೆಯಂತೆ ನಗರದ ಹೃದಯ ಭಾಗದಲ್ಲಿರುವ ಫ್ರೀಡಂ ಪಾರ್ಕಿಗೆ ಶೂನ್ಯ ಸಿಂಹಾಸನಾಧೀಶ ಅಲ್ಲಮಪ್ರಭುರವರ ಹೆಸರನ್ನು ನಾಮಕರಣ ಮಾಡಿರುವುದು ಹಾಗೂ ಮಾನ್ಯ ಮುಖ್ಯಮಂತ್ರಿಗಳು ಶ್ರೀ ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿರುವುದು ಹೆಮ್ಮೆಯ ವಿಷಯ ಎಂದವರು ನುಡಿದರು.
ಜಿಲ್ಲೆಯಲ್ಲಿ ಆಯುಷ್ ವಿಶ್ವವಿದ್ಯಾಲಯವನ್ನು ಪ್ರಾರಂಭಿಸಲು ಸರ್ಕಾರವು ಅನುಮತಿ ನೀಡಿದ್ದು ಈಗಾಗಲೇ ರೂ.20 ಕೋಟಿ ಪ್ರಾರಂಭಿಕ ಅನುದಾನ ಬಿಡುಗಡೆ ಮಾಡಿದೆ. ಸೊರಬ ತಾಲ್ಲೂಕಿನ ಕುಪ್ಪಗಡ್ಡೆ ಗ್ರಾಮದ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಗೆ ರೂ.22 ಕೋಟಿ ಮಂಜೂರು ಆಗಿದೆ. ಜಿಲ್ಲೆಯಲ್ಲಿ ಕೈಗಾರಿಕಾ ಬೆಳವಣಿಗೆ, ಪ್ರವಾಸೋದ್ಯಮ ಅಭಿವೃದ್ದಿಗಾಗಿ ಉನ್ನತ ಮಟ್ಟದ ಸಭೆಗಳನ್ನು ನಡೆಸಲಾಗಿದ್ದು, ಶಿವಮೊಗ್ಗ ಫೋಕಸ್ ಹಾಗೂ ಕೈಗಾರಿಕಾ ಮೇಳ ನಡೆಸಲು ಸಿದ್ದತೆ ನಡೆಸಲಾಗಿದೆ. ಹಾಗೂ ಉದ್ಯೋಗ ಮೇಳ ಮತ್ತು ಜನಸ್ಪಂದನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಜಿಲ್ಲೆಯು ಸಮಾಜವಾದದ ತವರೂರಾಗಿದ್ದು ಸಮಾಜವಾದಿ ಹೋರಾಟಗಾರರಾದ ಗೋಪಾಲಗೌಡರ ಸ್ಮರಣಾರ್ಥ ಸ್ಮಾರಕ ಮತ್ತು ಉಳುವವನೆ ಹೊಲದ ಒಡೆಯ ಹೋರಾಟದ ನೆನಪಿಗಾಗಿ ಕಾಗೋಡು ಸ್ಮಾರಕ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳಲಾಗುವುದು.
ಇದನ್ನೂ ಓದಿ- Republic Day 2024: ಇದು 75ನೇ ಗಣರಾಜ್ಯೋತ್ಸವವೇ ಅಥವಾ 76ನೇ ಆಚರಣೆಯೇ..?
ಜಿಲ್ಲಾ ಪೊಲೀಸ್ ವತಿಯಿಂದ ರಾಗಿಗುಡ್ಡದಲ್ಲಿ ಸೌಹಾರ್ದ ಕ್ರೀಡಾಕೂಟ ನಡೆಸುವ ಮೂಲಕ ಕುವೆಂಪುರವರ ಸರ್ವಜನಾಂಗದ ಶಾಂತಿಯ ತೋಟಕ್ಕೆ ಉತ್ತಮ ಉದಾಹರಣೆಯಾಗಿರುವುದಕ್ಕೆ ನಾನು ವಿಶೇಷ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಕಾರ್ಯಕ್ರಮದಲ್ಲಿ ವಿವಿಧ ಶಾಲೆಗಳ ವಿದ್ಯಾರ್ಥಿಗಳು, ಪೋಲಿಸ್ ಸಶಸ್ತ್ರ ದಳಗಳು, ಎನ್‍ಸಿಸಿ, ಸ್ಕೌಟ್ಸ್ ಮತ್ತು ಗೈಡ್ಸ್ ಪಡೆಗಳು ಶಿಸ್ತಿನ ಪಥಸಂಚಲನ ನಡೆಸಿದರು. ಇದೇ ವೇಳೆ ಉತ್ತಮ ಆರೋಗ್ಯ ಸೇವೆ ಸಲ್ಲಿಸಿದ ಸರ್ಕಾರಿ, ಖಾಸಗಿ ವೈದ್ಯರು ಹಾಗೂ ಕ್ರೀಡೆಯಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸಲಾಯಿತು. ಹಾಗೂ ರಾಷ್ಟ್ರಪತಿ ಪ್ರಶಸ್ತಿ ಪಡೆದ ಎಎಸ್‍ಪಿ ಅನಿಲ್ ಕುಮಾರ್ ಭೂಮರಡ್ಡಿಯವರನ್ನು ಅಭಿನಂದಿಸಲಾಯಿತು.
ಪಥ ಸಂಚಲನದಲ್ಲಿ ಎನ್‍ಸಿಸಿ ಜ್ಯೂನಿಯರ್ ಬಾಲಕಿಯರ ವಿಭಾಗ ಪ್ರಥಮ, ಸರ್ಕಾರಿ ಬಾಲಕರ ಬಾಲಮಂದಿರದ ಬಾಲಕರು ದ್ವಿತೀಯ ಹಾಗೂ ಸಾಂದೀಪಿನಿ ಶಾಲೆ ವಿದ್ಯಾರ್ಥಿಗಳಿಗೆ ತೃತೀಯ ಬಹುಮಾನ ಪಡೆದರು.
ಸಂವಿಧಾನ ಜಾರಿಗೆ ಬಂದ 75 ವರ್ಷಗಳ ಸವಿನೆನಪಿಗೆ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಸಂವಿಧಾನದ ಆಶಯ ಸಾರುವ ಸ್ತಬ್ದ ಚಿತ್ರದ ಜಾಗೃತಿ ಜಾಥಾಕ್ಕೆ ಚಾಲನೆ ನೀಡಲಾಯಿತು. ಈ ಸ್ತಬ್ದ ಚಿತ್ರವುಳ್ಳ ವಾಹನವು ಜಿಲ್ಲಾದ್ಯಂತ 28 ದಿನ ಕಾಲ ಸಂಚರಿಸಿ ಸಂವಿಧಾನ ಕುರಿತಾದ ಮಾಹಿತಿಯನ್ನು ನೀಡಲಿದ್ದು ಫೆಬ್ರುವರಿ 24 ರಂದು ಬೆಂಗಳೂರಿನಲ್ಲಿ ಬೃಹತ್ ಸಮಾವೇಶ ಕಾರ್ಯಕ್ರಮ ನಡೆಯಲಿದೆ.
ಶಾಸಕರಾದ ಎಸ್ ಎನ್ ಚನ್ನಬಸಪ್ಪ, ರುದ್ರೆಗೌಡರು, ಡಿ ಎಸ್ ಅರುಣ್, ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಆರ್, ಜಿ.ಪಂ ಸಿಇಓ ಸ್ನೇಹಲ್ ಸುಧಾಕರ ಲೋಖಂಡೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್, ಇತರೆ ಅಧಿಕಾರಿಗಳು, ಸ್ವಾತಂತ್ರ್ಯ ಹೋರಾಟಗಾರರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=xFI-KJNrEP8
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.