ಜಮೀರ್ ವಕ್ಪ್ ಆಸ್ತಿ ವಿಚಾರದಲ್ಲಿ ನಿರ್ಧಾರ ಮಾಡುವಾಗ ಉಳಿದ ಸಚಿವರು ಕತ್ತೆ ಕಾಯುತ್ತಿದ್ದರಾ: ಬಿ.ಶ್ರೀರಾಮುಲು
B. Sriramulu: ಹಾವೇರಿ( ಶಿಗ್ಗಾವಿ) ವಕ್ಪ್ ಸಚಿವ ಜಮೀರ್ ಅಹಮದ್ ವಕ್ಪ್ ಆಸ್ತಿ ವಿಚಾರದಲ್ಲಿ ನಿರ್ಧಾರ ಮಾಡುವಾಗ ಉಳಿದ ಸಚಿವರೆಲ್ಲಾ ಕತ್ತೆ ಕಾಯುತ್ತಿದ್ದರಾ ಎಂದು ಮಾಜಿ ಸಚಿವ ಬಿ. ಶ್ರೀರಾಮುಲು ಪ್ರಶ್ನಿಸಿದ್ದಾರೆ.
Shiggaon: ಅವರು ಶಿಗ್ಗಾವಿ ಹಾಗೂ ಸವಣೂರಿನಲ್ಲಿ ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ ಪರವಾಗಿ ರೋಡ್ ಶೋ ನಡೆಸಿ ಸಮಾವೇಶ ಉದ್ದೇಶಿಸಿ ಮಾತನಾಡಿದರು. ಅಧಿಕಾರಿಗಳ ಮೇಲೆ ಒತ್ತಡ ಕಿರುಕುಳ ಹೆಚ್ಚಾಗಿದೆ. ಇವರು ವಾಲ್ಮೀಕಿ ಹಗರಣ ಮಾಡಿದ್ದಕ್ಕೆ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡ. ಈಗ ಮತ್ತೊಬ್ಬ ಅಧಿಕಾರಿ ಒತ್ತಡದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ದಿನಬೆಳಗಾದರೆ ಸಚಿವರು ಲೂಟಿ ಮಾಡುತ್ತಿದ್ದಾರೆ. ಇವರು ಲೂಟಿ ಮಾಡುತ್ತಿರುವುದರಿಂದ ಅಧಿಕಾರಿಗಳು ಒತ್ತಡಕ್ಕೆ ಒಳಗಾಗುತ್ತಿದ್ದಾರೆ ಎಂದು ಹೇಳಿದರು.
ಕಾಂಗ್ರೆಸ್ ಸರ್ಕಾರದಲ್ಲಿ ತುಘಲಕ್ ಝಮೀರ್ ಗೆ ಎಲ್ಲ ಸರ್ವಾಧಿಕಾರ ನೀಡಿದ್ದಾರೆ. ತುಘಲಕ್ ಝಮೀರ್ ಸರ್ವಾಧಿಕಾರಿ ಥರ ವಕ್ಫ್ ಆಸ್ತಿ ಬಗ್ಗೆ ನಿರ್ಧಾರ ಮಾಡುವಾಗ ಉಳಿದ ಸಚಿವರೆಲ್ಲ ಕತ್ತೆ ಕಾಯುತ್ತಿದ್ದರಾ ಎಂದು ಪ್ರಶ್ನಿಸಿದರು.
ವಾಲ್ಮೀಕಿ ನಿಗಮದ ಹಣವನ್ನು ರಾಜಾರೋಷವಾಗಿ ಲೂಟಿ ಮಾಡಿದ್ದಾರೆ. ವಾಲ್ಮೀಕಿ ನಿಗಮದ ಹಣ ಬಳ್ಳಾರಿ ಲೋಕಸಭಾ ಚುನಾವಣೆಗೆ ಬಳಕೆ ಮಾಡಿದ್ದಾರೆ. ವಾಲ್ಮೀಕಿ ಹಣ ಲೂಟಿ ಹೊಡೆಯುವಾಗ ಸರ್ಕಾರದಲ್ಲಿರುವ ಸಚಿವರು ಕತ್ತೆ ಕಾಯುತ್ತಿದ್ದರಾ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮೀಸಲಾತಿ ಹೆಚ್ಚಳ
ಎಸ್ಸಿ ಎಸ್ಟಿ ಸಮುದಾಯದ ಮೀಸಲಾತಿ ಪ್ರಮಾಣ ಹೆಚ್ಚಳದ ಬೇಡಿಕೆ ಅನೇಕ ವರ್ಷದಿಂದ ಇತ್ತು, ಬಸವರಾಜ ಬೊಮ್ಮಾಯಿ ಅವರ ಸರ್ಕಾರದ ಅವಧಿಯಲ್ಲಿ ನಾವು ಎಸ್ಸಿ ಸಮುದಾಯದ ಮೀಸಲಾತಿಯನ್ನು 15% ರಿಂದ ಶೇ 17% ಕ್ಕೆ, ಎಸ್ಟಿ ಸಮುದಾಯದ ಮೀಸಲಾತಿಯನ್ನು ಶೇ 3 % ರಿಂದ ಶೇ 7% ಕ್ಕೆ ಹೆಚ್ಚಳ ಮಾಡಿದ್ದೇವೆ. ನಾನು ಹಾಗೂ ರಾಜುಗೌಡ ಈ ಚುನಾವಣೆಯಲ್ಲಿ ಸೋತಿರಬಹುದು, ಆದರೆ, ಸಮುದಾಯದ ಅನುಕೂಲಕ್ಕಾಗಿ ಮೀಸಲಾತಿ ಹೆಚ್ಚಳ ಮಾಡಿರುವ ಖುಷಿ ಇದೆ. ಸರ್ಕಾರಿ ಉದ್ಯೋಗ ಪಡೆಯುವ ನೂರು ಜನರಲ್ಲಿ ಏಳು ಜನ ಎಸ್ಟಿ ಸಮುದಾಯದವರಿಗೆ ಉದ್ಯೋಗ ದೊರೆಯುತ್ತಿರುವುದು ಖುಷಿ ತಂದಿದೆ ಎಂದು ಹೇಳಿದರು.
ಈ ಉಪ ಚುನಾವಣೆಯಲ್ಲಿ ಭರತ್ ಬೊಮ್ಮಾಯಿಯನ್ನು ಗೆಲ್ಲಿಸುವ ಮೂಲಕ ನಮ್ಮ ಸಮುದಾಯಕ್ಕೆ ಮೀಸಲಾತಿ ಹೆಚ್ಚಳ ಮಾಡಿರುವ ಬಸವರಾಜ ಬೊಮ್ಮಾಯಿ ಅವರ ಋಣ ತೀರಿಸಬೇಕು ಎಂದು ಮನವಿ ಮಾಡಿದರು.
ಸಂಸದ ಬಿ.ವೈ. ರಾಘವೇಂದ್ರ ಮಾತನಾಡಿ, ಮುಡಾ ವಿಚಾರದಲ್ಲಿ ನಾಳೆ ಸಿಎಂ ಲೋಕಾಯುಕ್ತದ ಮುಂದೆ ಹಾಜರಾಗಬೇಕು. ಎಲ್ಲದಕ್ಕೂ ತಾರ್ಕಿಕ ಅಂತ್ಯ ಸಿಗಲಿದೆ.
ಮುಡಾ ಆಯುಕ್ತರ ಮನೆಯ ಸಿಸಿಟಿವಿಯನ್ನೇ ಮುರಿದು ಹಾಕಿದ್ದಾರೆ. ಕೇವಲ 14-15 ಸೈಟಿನ ಪ್ರಶ್ನೆ ಅಲ್ಲ ಇದು, ಸಾವಿರಾರು ಸೈಟುಗಳ ಹಂಚಿಕೆ ಆಗಿದೆ. ಸರ್ಕಾರದ ಬಗ್ಗೆ ಕಾಂಗ್ರೆಸ್ ಕಾರ್ಯಕರ್ತರೇ ಆಕ್ರೋಶಗೊಂಡಿದ್ದಾರೆ. ಕಳೆದ ಏಳು ತಿಂಗಳಲ್ಲಿ 27 ಸಾವಿರ ವಕ್ಫ್ ನೋಂದಣಿ ಮಾಡಲಾಗಿದೆ ಸಂಸತ್ತಿನ ಜಂಟಿ ಅಧಿವೇಶನದಲ್ಲಿ ವಕ್ಫ್ ವಿರುದ್ದ ಕಾಯ್ದೆ ಮಂಡಿಸುತ್ತೇವೆ ಎಂದರು.
ಸಂಡೂರಿನ ಸಂಸದ ತುಕಾರಾಂ ವಾಲ್ಮೀಕಿ ಹಣವನ್ನೇ ಲೂಟಿ ಮಾಡಿ ಚುನಾವಣೆಗೆ ಬಳಸಿಕೊಂಡಿದ್ದಾರೆ. ಈ ಎಲ್ಲ ಕಾರಣಗಳಿಂದ ಉಪ ಚುನಾವಣೆಯಲ್ಲಿ ಬಿಜೆಪಿ ಮೂರಕ್ಕೆ ಮೂರೂ ಕ್ಷೇತ್ರದಲ್ಲಿ ಗೆಲ್ಲುತ್ತದೆ ಎಂದು ಹೇಳಿದರು. ಸಮಾವೇಶದಲ್ಲಿ ಮಾಜಿ ಸಚಿವ ರಾಜು ಗೌಡ ಸೇರಿದಂತೆ ಅನೇಕರು ಹಾಜರಿದ್ದರು.