ಬೆಂಗಳೂರು: ರಾಜ್ಯದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಸುಮಾರು ತಿಂಗಳ ಬಳಿಕ ರಚನೆಯಾದ ಸಚಿವ ಸಂಪುಟಕ್ಕೆ 100 ದಿನಗಳೇ ಕಳೆದಿವೆ. ಈ ನೂರು ದಿನಗಳಲ್ಲಿ ಸಚಿವರ ಸಾಧನೆಗಳೇನು? ಅವರು ಮುಂದೆ ಏನು ಮಾಡಲಿದ್ದಾರೆ? ಯಾವ ಗುರಿ ಹೊಂದಿದ್ದಾರೆ? ಎಂಬ ಕುತೂಹಲ ಸಾಮಾನ್ಯವಾಗಿ ಎಲ್ಲರಿಗೂ ಇದ್ದೇ ಇರುತ್ತದೆ.


COMMERCIAL BREAK
SCROLL TO CONTINUE READING

ಉಪ ಮುಖ್ಯಮಂತ್ರಿ ಡಾ. ಸಿ ಎನ್ ಅಶ್ವತ್ಥನಾರಾಯಣ(Dr CN Ashwathnarayana) ಅವರು ಉನ್ನತ ಶಿಕ್ಷಣ, ವೈದ್ಯಕೀಯ ಶಿಕ್ಷಣ ಖಾತೆಯ ಜವಾಬ್ದಾರಿ ವಹಿಸಿಕೊಂಡು ನೂರು ದಿನಗಳ ಆಡಳಿತ ಪೂರೈಸಿದ್ದಾರೆ.  ಈ ನೂರು ದಿನಗಳ ಅವಧಿಯಲ್ಲಿ ಸಾಧಿಸಿದ್ದು, ಮುಂದೆ ಸಾಧಿಸಬೇಕಾದ್ದ ಅಂಶಗಳು ಹೀಗಿವೆ:


ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದಂತೆ ಡಿಸಿಎಂ ಡಾ. ಸಿ ಎನ್ ಅಶ್ವತ್ಥನಾರಾಯಣ ಕೈಗೊಂಡಿರುವ ಕ್ರಮಗಳು:
*ಕರ್ನಾಟಕದ ಯುವ ಜನತೆ ಉನ್ನತ ಶಿಕ್ಷಣ ಪಡೆದು ಹೊಸ ಉದ್ಯೋಗಗಳಿಗೆ ಅರ್ಜಿ ಸಲ್ಲಿಸುವಾಗ ಎಲ್ಲರಿಗಿಂತ ಮೊದಲು ಆಯ್ಕೆಗೆ ಪರಿಗಣನೆಯಾಗಬೇಕಾಗಿದೆ. ಆದ್ದರಿಂದ  ಉನ್ನತ ಶಿಕ್ಷಣದಲ್ಲಿ ಮಹತ್ವದ ಬದಲಾವಣೆ ತರಲು ‘ವಿಷನ್ ಗ್ರೂಪ್’ ರಚಿಸಲಾಗಿದೆ.
*ಮೆಟ್ರಿಕ್ ನಂತರದ ಶಿಕ್ಷಣಕ್ಕೆ ವಿದ್ಯಾರ್ಥಿ ವೇತನದ ಹಂಚಿಕೆ ಪಾರದರ್ಶಕ ಮತ್ತು ಕಾಗದ ರಹಿತವಾಗಿಸಲು ಬ್ಲ್ಯಾಕ್‌ಚೇನ್‌ ತಂತ್ರಜ್ಞಾನ ಆಧರಿತ "ಇಂಟಗ್ರೇಟೆಡ್ ಸ್ಟೇಟ್ ಸ್ಕಾಲರ್ ಶಿಪ್ ಪೋರ್ಟಲ್" ನಿರ್ಮಿಸುತ್ತಿದ್ದೇವೆ.  
*ಉನ್ನತ ಶಿಕ್ಷಣ ಇಲಾಖೆಯಲ್ಲಿ ಪಾರದರ್ಶಕತೆ ತರಲು ಹಾಗೂ ಅರ್ಹ ಅಭ್ಯರ್ಥಿಗಳ ನೇಮಕ ಪ್ರಕ್ರಿಯೆಯಲ್ಲಿ  ಭ್ರಷ್ಟಾಚಾರ ತಡೆಗಟ್ಟಲು ರಾಜ್ಯ ಸರ್ಕಾರ, ಸಂಬಂಧಪಟ್ಟ ಇಲಾಖೆಗಳ ನೀತಿ ನಿಯಮಗಳಲ್ಲಿ ಅಗತ್ಯ ತಿದ್ದುಪಡಿ ತರಲು ನಿರ್ದೇಶಿಸಿದೆ. ಅದರಂತೆ, ಅಸಿಸ್ಟಂಟ್ ಪ್ರೊಫೆಸರ್ ಹುದ್ದೆಯ ನೇಮಕಕ್ಕೆ ‘ನೋ ಇಂಟರ್ ವ್ಯೂ’ ನಿಯಮ ಜಾರಿಗೊಳಿಸಲಾಗಿದೆ.


ವೈದ್ಯಕೀಯ ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಡಿಸಿಎಂ ಡಾ. ಸಿ ಎನ್ ಅಶ್ವತ್ಥನಾರಾಯಣ ಅವರ ಇಷ್ಟು ದಿನದ ಸಾಧನೆ:
*ಚಿಕ್ಕಬಳ್ಳಾಪುರ ಮೆಡಿಕಲ್ ಕಾಲೇಜ್‌ನ ಶಿಲಾನ್ಯಾಸ ಈಗಾಗಲೇ ನೆರವೇರಿಸಲಾಗಿದೆ.  ಚಿಕ್ಕಮಗಳೂರು, ಯಾದಗಿರಿ, ಹಾಗೂ ಹಾವೇರಿ ಜಿಲ್ಲೆಗಳಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆಗೆ ಕೇಂದ್ರ ಸರಕಾರದಿಂದ ಮಾನ್ಯತೆ ಪಡೆಯಲಾಗಿದೆ. 
*ರಾಜ್ಯದ ವೈದ್ಯಕೀಯ ಶಿಕ್ಷಣದಲ್ಲಿ ಮಹತ್ವದ ಬದಲಾವಣೆ ತರಲು ವಿಷನ್ ಗ್ರೂಪ್ ಸ್ಥಾಪಿಸಲಾಗಿದೆ.  
*ಡೀಪ್ ಜಿನೋಮಿಕ್ಸ್‌ಗಾಗಿ ಸೆಂಟರ್ ಫಾರ್ ಎಕ್ಸಲೆನ್ಸ್(CoE) ಘೋಷಿಸಲಾಗಿದೆ.
*ಕೊಡಗು ಜಿಲ್ಲೆಯಲ್ಲಿ 450 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಗೆ ವೈದ್ಯಕೀಯ ಶಿಕ್ಷಣ ಮಂಡಳಿ  100 ಕೋಟಿ ರೂ. ಅನುದಾನ ಹಂಚಿಕೆಗೆ ಆಡಳಿತಾತ್ಮಕ ಅನುಮೋದನೆ ನೀಡಿದೆ.  
*ಕಾರವಾರದ ವೈದ್ಯಕೀಯ ವಿಜ್ಞಾನ ಶಿಕ್ಷಣ ಸಂಸ್ಥೆಗೆ 150 ಕೋಟಿ ಮೊತ್ತದ  450 ಹಾಸಿಗೆ (ಕ್ಯಾನ್ಸರ್‌ ಹಾಗೂ ತುರ್ತು ಚಿಕಿತ್ಸಾ ಘಟಕ ಸೇರಿ) ಸಾಮರ್ಥ್ಯದ  ಆಸ್ಪತ್ರೆ ನಿರ್ಮಿಸಲು ಕ್ರಮ ಕೈಗೊಳ್ಳಲಾಗಿದೆ.
*ತುಮಕೂರು ಜಿಲ್ಲಾ ಆಸ್ಪತ್ರೆ ಆವರಣದಲ್ಲಿ  35 ಕೋಟಿ ವೆಚ್ಚದ ಕ್ಯಾನ್ಸರ್ ಚಿಕಿತ್ಸಾ ಕೇಂದ್ರ ನಿರ್ಮಾಣವಾಗಲಿದೆ.
*ರಾಯಚೂರು ಇನ್‌ಸ್ಟಿಟ್ಯೂಟ್‌ ಆಫ್‌ ಮೆಡಿಕಲ್‌ ಸೈನ್ಸ್‌ (ರಿಮ್ಸ್‌) ಹಾಗೂ ಮೈಸೂರು ಮೆಡಿಕಲ್‌ ಕಾಲೇಜಿಗೆ ತಲಾ 100 ಕೋಟಿ ರೂ. ಅನುದಾನ ಹಂಚಿಕೆ ಆಗಿದೆ. 
*ಬೆಂಗಳೂರು ಮೆಡಿಕಲ್‌ ಕಾಲೇಜ್‌ ಅಡಿಯಲ್ಲಿ ವಿಕ್ಟೋರಿಯಾ ಆಸ್ಪತ್ರೆಯ  ಆವರಣದಲ್ಲಿ 1000 ಹಾಸಿಗೆ ಸಾಮರ್ಥ್ಯದ ಕಟ್ಟಡ ಮತ್ತು ಸೌಕರ್ಯ ಕಲ್ಪಿಸಲು ಕ್ರಮ ಕೈಗೊಳ್ಳಲಾಗಿದೆ.


ಉನ್ನತ ಶಿಕ್ಷಣ, ವೈದ್ಯಕೀಯ ಶಿಕ್ಷಣ ಖಾತೆಗೆ ಸಂಬಂಧಿಸಿದಂತೆ ಉಪ ಮುಖ್ಯಮಂತ್ರಿ ಡಾ. ಸಿ ಎನ್ ಅಶ್ವತ್ಥನಾರಾಯಣ ಅವರ ಮುಂದಿನ ಗುರಿ:
ಮುಂದಿನ ದಿನಗಳಲ್ಲಿ ಉನ್ನತ ಶಿಕ್ಷಣದ ಸಮರ್ಥ ನಿರ್ವಹಣೆಗೆ ನಮ್ಮ ಯುವಜನತೆಯ ಭವಿಷ್ಯಕ್ಕೆ ಭದ್ರ ಬುನಾದಿ ಹಾಕಿ ಕೊಡಲು ಬಹಳಷ್ಟು ಕಾರ್ಯಕ್ರಮಗಳನ್ನು ಮಾಡಿ ಮುಗಿಸಲಿದ್ದೇವೆ. ಎಲ್ಲಾ ರೀತಿಯಲ್ಲೂ ನಮ್ಮ ಜನತೆಗೆ, ಸಮಾಜಕ್ಕೆ ಇನ್ನಷ್ಟು ಗುಣಮಟ್ಟದ ಕೊಡುಗೆ ನೀಡಲಿಕ್ಕೆ ಏನೆಲ್ಲಾ ಬೇಕು ಎಂಬುದನ್ನು ನಾವು ಯೋಚಿಸಿದ್ದೇವೆ ಎಂದು ಉಪ ಮುಖ್ಯಮಂತ್ರಿ ಡಾ. ಸಿ ಎನ್ ಅಶ್ವತ್ಥನಾರಾಯಣ ಭರವಸೆ ನೀಡಿದ್ದಾರೆ.


ಉನ್ನತ ಶಿಕ್ಷಣ ಇಲಾಖೆಯಲ್ಲಿ:
*ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಉಪನ್ಯಾಸಗಳ ವೀಡಿಯೋಗಳು ಹಾಗೂ ಪಠ್ಯಕ್ರಮಗಳಿಗೆ ಪ್ರತ್ಯೇಕ ಡಿಜಿಟಲ್‌ ವೇದಿಕೆ.
*ಭಾಷಾ ಅಲ್ಪಸಂಖ್ಯಾತರ ಹಿತಾಸಕ್ತಿಗಳ ರಕ್ಷಣೆಗಾಗಿ ಭಾಷಾ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳ ರಾಜ್ಯ ಆಯೋಗ ಸ್ಥಾಪಿಸಲಾಗುವುದು.
*ಪದವೀಧರರ ಕೌಶಲ್ಯದ ಗುಣಮಟ್ಟ ಮತ್ತು ಉದ್ಯಮದ ನಿರೀಕ್ಷೆ ಪರಸ್ಪರ ತಾಳೆ ಆಗುತ್ತಿಲ್ಲ ಎಂಬ ಅಂಶ ಗಮನದಲ್ಲಿದ್ದು,  ಈ ಸಮಸ್ಯೆಯನ್ನು ನೀಗಿಸಲು "ಟ್ಯಾಲೆಂಟ್‌ ಆಕ್ಸಿಲರೇಟರ್" ಕಾರ್ಯಕ್ರಮ ಆರಂಭಿಸುವ ಬಗ್ಗೆ ಬೆಂಗಳೂರಿನ ಟೆಕ್‌ ಸಮಿಟ್‌ನಲ್ಲಿ ಘೋಷಿಸಲಾಗಿದೆ. ಮುಂದಿನ ವರ್ಷದಲ್ಲಿ ಇದು ಕಾರ್ಯರೂಪಕ್ಕೆ ಬರಲಿದೆ.  ಯೋಜನೆಯಡಿ, ವಿದ್ಯಾರ್ಥಿಗಳಿಗೆ  ಸೂಕ್ತ ಮಾರ್ಗದರ್ಶನ (ಮೆಂಟರ್‌ಶಿಪ್‌) ನೀಡಲಾಗುವುದು.  
*ವೇತನ ನಿಯಮ ಸೇರಿ, ಈಗಿರುವ ಕಾನೂನಿನಲ್ಲೇ ಬದಲಾವಣೆ ತರುವ ಮೂಲಕ ತಾಂತ್ರಿಕ ಉದ್ಯಮದಲ್ಲಿ ಕೌಶಲ್ಯ ಕಲಿಕೆ  (ಅಪ್ರೆಂಟಿಸ್‌ಶಿಪ್)ಗೆ ಹೆಚ್ಚಿನ ಅವಕಾಶ ಮಾಡಿಕೊಡಲಾಗುವುದು.  ನ್ಯೂ ಏಜ್‌ ಇನ್‌ಕ್ಯೂಬೇಷನ್‌ ನೆಟ್‌ವರ್ಕ್‌(ಎನ್‌ಎಐಎನ್‌) ಸೇರಿ ಅಸ್ಥಿತ್ವದಲ್ಲಿರುವ ಯೋಜನೆಗಳ ವಿಸ್ತರಣೆಗೆ ಒತ್ತು ನೀಡಲಾಗುವುದು. ಈ ಎಲ್ಲ ಕ್ರಮಗಳ ಮೂಲ ಉದ್ದೇಶ ರಾಜ್ಯದ ಯುವ ಜನರ ಸರ್ವತೋಮುಖ ಅಭಿವೃದ್ಧಿ ಹಾಗೂ ಅವರಿಗೆ ಸೂಕ್ತ ಉದ್ಯೋಗಾವಕಾಶ ಸೃಷ್ಟಿಸುವುದು.
*ಕಾಗದ ಪತ್ರಗಳ ಬಳಕೆ ಕಡಿಮೆ ಮಾಡುವ ನಿಟ್ಟಿನಲ್ಲಿ ಕಾಲೇಜುಗಳು ಹಾಗೂ ವಿಶ್ವವಿದ್ಯಾಲಯಗಳು  ಐಟಿ ವ್ಯವಸ್ಥೆಯನ್ನು ಬಳಸುತ್ತಿವೆ. ಆದರೆ,  ಪ್ರತಿ ಸಂಸ್ಥೆಯೂ ಬೇರೆ ಬೇರೆ ಐಟಿ ವ್ಯವಸ್ಥೆ ಬಳಸುತ್ತಿರುವುದರಿಂದ ಅಗತ್ಯಕ್ಕಿಂತ ಹೆಚ್ಚು ಡೇಟಾ ಸಂಗ್ರಹವಾಗುತ್ತಿದ್ದು, ಅವುಗಳ ಜೋಡಣೆ, ವಿನಿಮಯ ಆಗುತ್ತಿಲ್ಲ. ಕಾಲಕಾಲಕ್ಕೆ ಅಪ್‌ಡೇಟ್‌ ಸಹ ಆಗುತ್ತಿಲ್ಲ.  ಜತೆಗೆ, ವಿಶ್ವವಿದ್ಯಾಲಯಗಳಲ್ಲಿ ಮಾಹಿತಿ ತಂತ್ರಜ್ಞಾನದ ಅಳವಡಿಕೆ ನೀರಿಕ್ಷಿತ ಮಟ್ಟದಲ್ಲಿ ಆಗುತ್ತಿಲ್ಲ.  ಈ  ಎಲ್ಲ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಟು ಉನ್ನತ ಶಿಕ್ಷಣ ಇಲಾಖೆಯು,  ವಿಶ್ವವಿದ್ಯಾಲಯ ಮತ್ತು ಕಾಲೇಜು ನಿರ್ವಹಣೆಗೆ ಏಕೀಕೃತ ವ್ಯವಸ್ಥೆ (ಯೂನಿಫೈಡ್‌ ಯೂನಿವರ್ಸಿಟಿ ಅಂಡ್‌ ಕಾಲೇಜ್‌ ಮ್ಯಾನೇಜ್ಮೆಂಟ್‌ ಸಿಸ್ಟೆಮ್‌) ರೂಪಿಸಲಾಗುವುದು.  ಇದರಲ್ಲೇ  ವಿದ್ಯಾರ್ಥಿಗಳ ಸಮಸ್ಯೆ ಪರಿಹರಿಸುವ ಆನ್‌ಲೈನ್‌ ವೇದಿಕೆಯೂ ಇರಲಿದೆ.  
 *ವಿಶ್ವವಿದ್ಯಾಲಯಗಳಲ್ಲಿ ಫಿಟ್ ಇಂಡಿಯಾ ಯೋಜನೆಯ ಅಳವಡಿಕೆ: ಕರ್ನಾಟಕದ ಜಾನಪದ ಕ್ರೀಡೆಗಳಾದ ಕಬಡ್ಡಿ, ಮಲ್ಲಕಂಬ, ಕುಸ್ತಿ ಮುಂತಾದವುಗಳನ್ನು ಪ್ರೋತ್ಸಾಹಿಸಲಾಗುವುದು.
*ಕೇಂದ್ರ ಸರಕಾರದ ಹೊಸ ಶಿಕ್ಷಣ ನೀತಿಯನ್ನು ಗಮನದಲ್ಲಿರಿಸಿಕೊಂಡು ರಾಜ್ಯದ ಶಿಕ್ಷಣ ಪದ್ದತಿಯನ್ನು ಪುನಾರಚಿಸಲಾಗುವುದು.  ಗುಣಮಟ್ಟದ ಕಲಿಕೆ ಹಾಗೂ ಸಂಶೋಧನೆಯ ಖಾತ್ರಿಗಾಗಿ ಎಲ್ಲಾ ಪದವಿ ಕಾಲೇಜುಗಳಿಗೆ NAAC ಮಾನ್ಯತೆ ಕಡ್ಡಾಯಗೊಳಿಸಲಾಗುವುದು. 
*ಇತರ ರಾಷ್ಟ್ರಗಳಿಗೆ ಹೋಲಿಸಿದರೆ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ದಾಖಲಾತಿಯ ಒಟ್ಟು ಅನುಪಾತ ತೀರಾ ಕಡಿಮೆ. ಅದೇ ರೀತಿ,  ನಮ್ಮ ಪಠ್ಯಕ್ರಮ ಹಾಗೂ  ಉದ್ಯಮದ ನಿರೀಕ್ಷೆ ಪರಸ್ಪರ ಪೂರಕವಾಗಿಲ್ಲ ಎಂಬ ಅಂಶ ಗಮನದಲ್ಲಿದೆ.  ಈ ಅಸಮತೋಲನವನ್ನು ಸರಿಪಡಿಸಲು,  ಉನ್ನತ ಶಿಕ್ಷಣ ಸಂಸ್ಥೆಗಳ ಶೈಕ್ಷಣಿಕ ಗುಣಮಟ್ಟ ಸುಧಾರಣೆಗೆ ಕಾರ್ಯಕಾರಿ ಸಮಿತಿಗಳನ್ನು ರೂಪಿಸಲಾಗುವುದು.  ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿರುವ ನ್ಯೂನತೆಯನ್ನು ಗುರುತಿಸಿ, ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು. 


ವೈದ್ಯಕೀಯ ಶಿಕ್ಷಣ ಇಲಾಖೆಗೆ ಸಂಬಂಧಿಸಿದಂತೆ ಮುಂದಿನ ಗುರಿ:
ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಪ್ರಧಾನ ಕಚೇರಿಯನ್ನು ರಾಮನಗರದಲ್ಲಿ  178 ಎಕರೆಯ ಕ್ಯಾಂಪಸ್ ಗೆ ಸ್ಥಳಾಂತರಿಸಿ ಒಂದು ‘ಆರೋಗ್ಯ ನಗರ' ನಿರ್ಮಿಸಲಾಗುತ್ತದೆ. ಇದಕ್ಕೆ ಸಂಬಂಧಿಸಿದಂತೆ Salford University, Manchester  ಜತೆಗೆ State Higher Education Council ಒಂದು ಒಪ್ಪಂದಕ್ಕೆ  ಈಗಾಗಲೇ ಸಹಿ ಮಾಡಿದೆ. ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದ ವಿವಿಧ ರೀತಿಯ ಚಟುವಟಿಕೆಗಳ ಮೂಲಕ ಭವಿಷ್ಯದ ಸ್ಮಾರ್ಟ್ ನಗರಗಳು, ಆರೋಗ್ಯ ಕ್ಷೇತ್ರಗಳ ಮೇಲೆ ಈ ಕೇಂದ್ರ ಗಮನವಿರಿಸಲಿದೆ ಎಂದು ಉಪ ಮುಖ್ಯಮಂತ್ರಿ ಡಾ. ಸಿ ಎನ್ ಅಶ್ವತ್ಥನಾರಾಯಣ ತಿಳಿಸಿದ್ದಾರೆ.
*ಆರೋಗ್ಯ ಕೇಂದ್ರಗಳ ನಿರ್ವಹಣೆಯಲ್ಲಿ ತಂತ್ರಜ್ಞಾನದ ಬಳಕೆಗೆ ಒತ್ತು ನೀಡುವ ನಿಟ್ಟಿಲ್ಲಿ  ಮೆಡಿಕಲ್‌ ಕಾಲೇಜುಗಳಲ್ಲಿ ಇ- ಆಫೀಸ್‌ಗಳ ಬಳಕೆ ಮೂಲಕ ಇ-ಆಸ್ಪತ್ರೆಗಳನ್ನು ಪ್ರಾಥಮಿಕ ಆರೋಗ್ಯಕೇಂದ್ರಗಳ ಜತೆ  ಸಂಪರ್ಕ ಬೆಸೆಯಲಾಗುವುದು.
*ವಿದ್ಯಾರ್ಥಿಗಳಿಗೆ ತರಬೇತಿಗಾಗಿ ನರ್ಸಿಂಗ್ ಹಾಗೂ ಅಲೈಡ್ ಹೆಲ್ಸ್ತ್ ಸಯನ್ಸ್ ಇನ್‌ಸ್ಟಿಟ್ಯೂಟ್‌ಗಳ ಸ್ಥಾಪನೆಯ ಸಾಧ್ಯತೆಗಳ ಕುರಿತು ಸರಕಾರ ಅಧ್ಯಯನ ನಡೆಸಲಿದೆ.  
*ರಾಜ್ಯದ ಪ್ರತಿ ಜಿಲ್ಲೆಗಳಲ್ಲಿ  ಮೆಡಿಕಲ್‌ ಕಾಲೇಜು- ಸರ್ಕಾರಿ ಅಥವಾ ಖಾಸಗಿ  ಆಸ್ಪತ್ರೆ ಸೇವೆ ಲಭ್ಯವಾಗಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದೆ.
*ಮೆಡಿಕಲ್‌ ಕಾಲೇಜುಗಳ ಎಲ್ಲ ಆಸ್ಪತ್ರೆಗಳಿಗೆ ಎನ್‌ಎಬಿಹೆಚ್‌ನಿಂದ ಮಾನ್ಯತೆ ಪಡೆಯುವ ಜತೆಗೆ ರಾಜ್ಯದಲ್ಲಿರುವ ಎಲ್ಲ ಮೆಡಿಕಲ್‌ ಕಾಲೇಜುಗಳ ಪ್ರಯೋಗಾಲಯಗಳಿಗೂ ಎನ್‌ಎಬಿಎಲ್‌ ಮಾನ್ಯತೆ ದೊರೆಯಲಿದೆ.
ಮುಂದಿನ ದಿನಗಳಲ್ಲಿ ಉನ್ನತ ಶಿಕ್ಷಣದ ಸಮರ್ಥ ನಿರ್ವಹಣೆಗೆ ನಮ್ಮ ಯುವಜನತೆಯ ಭವಿಷ್ಯಕ್ಕೆ ಭದ್ರ ಬುನಾದಿ ಹಾಕಿ ಕೊಡಲು ಬಹಳಷ್ಟು ಕಾರ್ಯಕ್ರಮಗಳನ್ನು ಮಾಡಿ ಮುಗಿಸಲಿದ್ದೇವೆ. ಎಲ್ಲಾ ರೀತಿಯಲ್ಲೂ ನಮ್ಮ ಜನತೆಗೆ, ಸಮಾಜಕ್ಕೆ ಇನ್ನಷ್ಟು ಗುಣಮಟ್ಟದ ಕೊಡುಗೆ ನೀಡಲಿಕ್ಕೆ ಏನೆಲ್ಲಾ ಬೇಕು ಎಂಬುದನ್ನು ನಾವು ಯೋಚಿಸಿದ್ದೇವೆ ಎಂದವರು ಮಾಹಿತಿ ನೀಡಿದರು.