ರಾಜ್ಯದಲ್ಲಿ ಹಿಂದಿ ಹೇರಿಕೆ ಬಗ್ಗೆ ಕೇಂದ್ರ ಸಚಿವ ಡಿ.ವಿ. ಸದಾನಂದಗೌಡರು ಹೇಳಿದ್ದೇನು?
ಕನ್ನಡಿಗರದ್ದು ಯಾವತ್ತೂ ಕಟ್ಟಿ ಕೊಡುವ ಮನಸ್ಥಿತಿ ಹೊರತು ಕೆಡಹುವ ಮನಸ್ಥಿತಿಯಲ್ಲ ಅನ್ನುವುದು ಆ ಕಿಡಿಗೇಡಿಗಳಿಗೆ ತಿಳಿಯದ್ದು ವಿಪರ್ಯಾಸ.
ಬೆಂಗಳೂರು: ಬೆಂಗಳೂರಿನ ಜೈನ ಧಾರ್ಮಿಕ ಕೇಂದ್ರದ ಮುಂದೆ ಹಾಕಿದ್ದ ಹಿಂದಿ ಭಾಷೆಯನಾಮ ಫಲಕ ಕಿತ್ತು ಹಾಕಿದ ಘಟನೆಯನ್ನು ಭಾಷಾ ಸಂಘರ್ಷವಾಗಿ ಬದಲಾಯಿಸಿ ತಮ್ಮ ರಾಜಕೀಯ ಬೇಳೆ ಬೇಯಿಸಿಕ್ಕೊಳ್ಳುತ್ತಿರುವ ಕೈ ಯಾರದ್ದೆಂದು ತಿಳಿದಿದೆ ಎಂದು ಹಿಂದಿ ಹೇರಿಕೆ ಕುರಿತು ಬೆಂಗಳೂರು ಉತ್ತರ ಕ್ಷೇತ್ರದ ಸಂಸದ ಹಾಗೂ ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಅಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಬರೆದಿರುವ ಡಿ.ವಿ. ಸದಾನಂದಗೌಡರು, ಮುಖ್ಯಮಂತ್ರಿಗಳು ಕನ್ನಡ ಹೋರಾಟಗಾರರನ್ನು ಧಮನಿಸುತ್ತಿದ್ದಾರೆ ಎಂಬಂತೆ ಬಿಂಬಿಸಲು ಕೆಲ ಅಸ್ವಸ್ಥ ಮನಸ್ಥಿತಿಗಳು ಪ್ರಯತ್ನ ನಡೆಸಿವೆ. ಕೆಲ ಕಿಡಿಗೇಡಿಗಳು ಮಾಡಿದ ಈ ದುಷ್ಕೃತ್ಯವನ್ನು ಕನ್ನಡದ ಕಟ್ಟಾಳುಗಳ ಕೆಲಸ ಎಂದು ಬಿಂಬಿಸುವ ಪಿತೂರಿ ಕೂಡಾ ಅಷ್ಟೇ ವ್ಯವಸ್ಥಿತ ರೀತಿಯಲ್ಲಿ ನಡೆಯುತ್ತಿದೆ.
ಕನ್ನಡಿಗರದ್ದು ಯಾವತ್ತೂ ಕಟ್ಟಿ ಕೊಡುವ ಮನಸ್ಥಿತಿ ಹೊರತು ಕೆಡಹುವ ಮನಸ್ಥಿತಿಯಲ್ಲ ಅನ್ನುವುದು ಆ ಕಿಡಿಗೇಡಿಗಳಿಗೆ ತಿಳಿಯದ್ದು ವಿಪರ್ಯಾಸ. ಅದನ್ನು ಬಿಟ್ಟು ಶಾಂತಿಪ್ರಿಯ ಜೈನ ಸಮುದಾಯದ ಮೇಲೆ ನಡಿಸಿದ ನೈತಿಕ ದಾಳಿ ಎಷ್ಟು ಸರಿ ? ಅವರ ಧಾರ್ಮಿಕ ಭಾವನೆಗೆ ಘಾಸಿ ಉಂಟು ಮಾಡಿದ್ದು ಎಷ್ಟು ಸರಿ ? ಹಿಂದಿ ಭಾಷೆಯ ನಾಮ ಫಲಕ ಹಾಕಿದ ಕಾರ್ಯಕ್ರಮ ಸಂಘಟಕರನ್ನು ಸಂಪರ್ಕಿಸಿ ಗಮನ ಸೆಳೆಯಬೇಕಿತ್ತು ಮತ್ತು ತತ್ ಕ್ಷಣ ಸರಿ ಪಡಿಸಿಕ್ಕೊಳ್ಳುವಂತೆ ಸೂಚಿಸಬೇಕಿತ್ತು.
ಕನ್ನಡದ ವಿಷಯದಲ್ಲಿ ಕನ್ನಡಿಗರ ಮಾತನ್ನು ಧಿಕ್ಕರಿಸುವ ಮನಸ್ಥಿತಿ , ಧೈರ್ಯ ಯಾರಿಗಾದರೂ ಕರ್ನಾಟಕದಲ್ಲಿ ಇದೆಯಾ? ಕಾನೂನು ತನ್ನ ಕೆಲಸ ಮಾಡೇ ಮಾಡುತ್ತೆ . ಚಳುವಳಿ ಮಾಡಿ ತಪ್ಪೆಸಗಿದವರನ್ನು ಸರಿದಾರಿಗೆ ತರುವುದು ಕನ್ನಡಿಗ ಮನಸ್ಥಿತಿ. ದಾಳಿ ಮಾಡುವುದು ಕಿಡಿಗೇಡಿಗಳ ಕೆಲಸ.
ಇನ್ನು ಈ ಘಟನೆಯನ್ನು ತಮ್ಮ ಸ್ವಾರ್ಥಕ್ಕೆ ಬಳಸಿಕ್ಕೊಳ್ಳಲು ಯತ್ನಿಸಿ ಏನೋ ಆಗಬಾರದ್ದು ಆಗಿ ಬಿಟ್ಟಿದೆ ಎನ್ನುವಂತೆ ಬಿಂಬಿಸಲು ಯತ್ನಿಸುತ್ತಿರುವ ಹೊರಟಿರುವ ಕೆಲ ಮನಸ್ಥಿತಿಗಳನ್ನು ಇಲ್ಲೇ ಕಡಿವಾಣ ಹಾಕಿ ನಿಲ್ಲಿಸಬೇಕೆಂದು. ಇದನ್ನು ರಾಜಕೀಯಗೊಳಿಸಲು ಬಿಡಬಾರದೆಂದು ಕನ್ನಡದ ಹಿರಿಯರಲ್ಲಿ ಮನವಿ. ಇಲ್ಲವಾದಲ್ಲಿ ಸಮಾಜದ ಸ್ವಾಸ್ಥ ಇನ್ನಷ್ಟು ಕೆಡುವುದು ಖಂಡಿತಾ . ಈಗಾಗಲೇ ಪ್ರವಾಹಕ್ಕೆ ಸಿಲುಕಿ ನರಳಿರುವ ಕರ್ನಾಟಕದ ನಮ್ಮ ಸಹೋದರರಿಗೆ ನಮ್ಮಆಸರೆ ಬೇಕು ಬನ್ನಿ ಅಲ್ಲಿ ಕೈ ಜೋಡಿಸೋಣ. ಅದನ್ನು ಬಿಟ್ಟು ಇಂತಹ ಸಂಘರ್ಷಕ್ಕಲ್ಲ ಎಂದು ಸದಾನಂದಗೌಡರು ಕನ್ನಡಿಗರಿಗೆ ಕರೆ ನೀಡಿದ್ದಾರೆ.