‘ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಕಾಯ್ದೆ(ಕೆಪಿಎಂಇ)– 2017’ ಕಾಯ್ದೆಯ ಸರ್ಕಾರ ಜಾರಿಗೊಳಿಸಲು ಹೊರಟಿದೆ. ಆದರೆ ಇದಕ್ಕೆ ಸಹಕಾರ ನೀಡುವವರಿಗಿಂತ ವಿರೋಧ ವ್ಯಕ್ತ ಪಡಿಸುತ್ತಿರುವವರ ಸಂಖ್ಯೆಯೇ ಹೆಚ್ಚಾಗಿದೆ. ಅಷ್ಟಕ್ಕೂ ವೈದ್ಯಕೀಯ ತಿದ್ಧುಪಡಿ ವಿಧೇಯಕ ಅಥವಾ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಕಾಯ್ದೆ(ಕೆಪಿಎಂಇ) ಎಂದರೆ ಏನು ಎಂಬುದು ಯಾರಿಗೆ ಎಷ್ಟರಮಟ್ಟಿಗೆ ತಿಳಿದಿದೆ ಎಂಬುದು ಮುಖ್ಯ. 


COMMERCIAL BREAK
SCROLL TO CONTINUE READING

ಒಬ್ಬ ಜನ ಸಾಮಾನ್ಯನಿಗೆ ಈ ವಿಧೇಯಕ ಹೇಗೆ ಸಹಕಾರಿಯಾಗಲಿದೆ ಎಂಬುದನ್ನು ನಾವು ತಿಳಿದುಕೊಳ್ಳೋಣ...


ಖಾಸಗಿ ಆಸ್ಪತ್ರೆ ಎಂದರೆ ಜನರು ಬೆಚ್ಚಿ ಬೀಳುತ್ತಾರೆ. ತಮಗೆ ಅನಿವಾರ್ಯ ಎಂಬ ಸ್ಥಿತಿಯಲ್ಲೂ ಖಾಸಗಿ ಆಸ್ಪತ್ರೆಗಳಿಗೆ ಜನ ಹೋಗಲು ಹಿಂಜರಿಯುತ್ತಾರೆ. ಕಾರಣ ಇಷ್ಟೇ ಖಾಸಗಿ ಆಸ್ಪತ್ರೆಗಳಲ್ಲಿ ಪ್ರತಿ ತಪಾಸಣೆಗೂ ಕಟ್ಟಬೇಕಾದ ಹಣದ ವೆಚ್ಚ. ಎಲ್ಲರೂ ಅದನ್ನು ಭರಿಸಲು ಶಕ್ತರಾಗುವುದಿಲ್ಲ. ಖಾಸಗಿ ಆಸ್ಪತ್ರೆಗಳ ಧನದಾಹಕ್ಕೆ ಎಲ್ಲ ವರ್ಗದ ಜನರೂ ಬಲಿಯಾಗುತ್ತಿದ್ದಾರೆ. ವೈದ್ಯಕೀಯ ವರದಿಗಳನ್ನು ತಿರುಚುವುದು, ಇಲ್ಲದ ರೋಗ ಇದೆ ಎಂದು ವಿವಿಧ ತಪಾಸಣೆ ಮಾಡಿಸುವುದು, ರೋಗಿ ಸತ್ತ ಮೇಲೂ ಹೆಣವನ್ನು ತೀವ್ರ ನಿಗಾ ಘಟಕದಲ್ಲಿಟ್ಟು ಹಣ ಮಾಡಿಕೊಳ್ಳುವುದು ಇವೆಲ್ಲವೂ ಜನ ಸಾಮಾನ್ಯರ ಅನುಭವಗಳಾಗಿವೆ. ಈ ಅಮಾನವೀಯ ಕೃತ್ಯಗಳನ್ನು ತಡೆಗಟ್ಟಲು ರಾಜ್ಯ ಸರ್ಕಾರ ಕೆಪಿಎಂಇ ಯೋಜನೆಯನ್ನು ಜಾರಿಗೆ ತರಲು ಮುಂದಾಗಿದೆ.


ಈ ಕಾಯ್ದೆಯನ್ನು ಜಾರಿಗೊಳಿಸುವ ಸಲುವಾಗಿ ಸರ್ಕಾರ ನಿವೃತ್ತ ನ್ಯಾಯಮೂರ್ತಿ ವಿಕ್ರಮ್‌ಜಿತ್ ಸೇನ್ ಅವರ ಅಧ್ಯಕ್ಷತೆಯಲ್ಲಿ ಒಂದು ಸಮಿತಿಯನ್ನು ರಚಿಸಿತ್ತು. ಈ ಸಮಿತಿಯು ಅಧ್ಯಯನ ನಡೆಸಿದ ನಂತರ ನೂತನ ಮಸೂದೆಯ ಅಗತ್ಯತೆಯನ್ನು ತಿಳಿಸಿದೆ.


ಈ ಮಸೂದೆ ಅನ್ವಯ ಖಾಸಗಿ ಆಸ್ಪತ್ರೆಗಳು ರಾಜ್ಯ ಸರ್ಕಾರ ನಿಗದಿಪಡಿಸುವುದಕ್ಕಿಂತ ಹೆಚ್ಚಿನ ಶುಲ್ಕವನ್ನು ಪಡೆದರೆ ಅವರಿಗೆ 25,000 ದಿಂದ ಐದು ಲಕ್ಷದವರೆಗೆ ದಂಡ ವಿಧಿಸಲಾಗುವುದು. ಜೊತೆಗೆ ಆರು ತಿಂಗಳಿಂದ ಮೂರು ವರ್ಷದವರೆಗೆ ಜೈಲು ಶಿಕ್ಷೆಗೆ ಒಳಪಡಿಸಲಾಗುವುದು ಎಂದು ತಿಳಿಸಿದೆ.


ಮೃತ ದೇಹವನ್ನು ಮೃತರ ಸಂಬಂಧಿಕರಿಗೆ ನೀಡಲು ಆಸ್ಪತ್ರೆಗೆ ಬಾಕಿ ಇರುವ ಹಣವನ್ನು ಪಾವತಿಸುವಂತೆ ಒತ್ತಾಯ ಮಾಡುವಂತಿಲ್ಲ. ತುರ್ತು ಚಿಕಿತ್ಸೆ ಸಂದರ್ಭದಲ್ಲಿ ರೋಗಿಯಿಂದ ಅಥವಾ ಅವರ ಸಂಬಂಧಿಕರಿಂದ ಯಾವುದೇ ರೀತಿಯ ಮುಂಗಡ ಹಣವನ್ನು ಪಾವತಿಸುವಂತೆ ಪೀಡಿಸುವಂತಿಲ್ಲ ಎಂಬ ಇನ್ನೂ ಹಲವಾರು ರೀತಿಯ ಬದಲಾವಣೆಗಳನ್ನು ವಿಧೇಯಕ ಒಳಗೊಂಡಿದೆ. 


ಈ ಎಲ್ಲಾ ನಿಟ್ಟಿನಲ್ಲಿ ನೋಡುವುದಾದರೆ ಕೆಪಿಎಂಇ ಯೋಜನೆಯು ಜನಸಾಮಾನ್ಯರ ದೃಷ್ಟಿಯಲ್ಲಿ ಒಂದು ಉತ್ತಮ ಯೋಜನೆ ಎಂದರೆ ತಪ್ಪಾಗಲಾರದು. ಅಂತೆಯೇ ಜನಸಾಮಾನ್ಯರಿಗೆ ಈ ಯೋಜನೆ ಜಾರಿಯಾಗುವುದೂ ಕೂಡ ಅತ್ಯವಶ್ಯಕ.