ಮೈಸೂರು: ತಾವು ಯುವಕನಾಗಿದ್ದಾಗ ಸಾಕಷ್ಟು ಸಿಗರೇಟ್ ಸೇದುತ್ತಿದ್ದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ನಗರದಲ್ಲಿ ಆಯೋಜಿಸಿದ್ದ ಸ್ತನ, ಗರ್ಭಕೋಶ ಕ್ಯಾನ್ಸರ್'ಗಳ ಉಚಿತ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, "ನಾನು ದಿನಕ್ಕೆ 40 ಸಿಗರೇಟ್'ಗಳನ್ನು ಸೇದುತ್ತಿದ್ದೆ. ನಂತರದಲ್ಲಿ ಅದರಿಂದಾದ ದುಷ್ಪರಿಣಾಮದ ಬಗ್ಗೆ ಅರಿತು ಚಟ ಬಿಟ್ಟೆ' ಎಂದು ಸಿದ್ದರಾಮಯ್ಯ ಹೇಳಿದ್ದಾರೆ.


"ನಾನು ದಿನಕ್ಕೆ 40 ಸಿಗರೇಟ್ ಸೇದುತ್ತಿದ್ದೆ. ವಿಲ್ಸ್ ಸಿಗರೇಟ್ ಅಂದ್ರೆ ಇಷ್ಟ. ಹಾಗಾಗಿ ಅದನ್ನೇ ಸೇದುತ್ತಿದ್ದೆ. ಆದರೆ 1987ರ ಆ.17ರಂದು ಸಿಗರೇಟ್ ಸೇದುವುದನ್ನು ಬಿಟ್ಟೆ. ಫಾರಿನ್ ನಿಂದ ನನ್ನ ಸ್ನೇಹಿತರು ವೆರೈಟಿ ಸಿಗರೇಟ್ ತಂದು ಕೊಟ್ಟಿದ್ರು. ಅಷ್ಟನ್ನೂ ಸೇದಿಬಿಟ್ಟೆದ್ದೆ, ಆದರೆ ಮರುಕ್ಷಣವೇ ಇಷ್ಟೊಂದು ಸಿಗರೇಟ್ ಸೇದುಬಿಟ್ಟೆನಲ್ಲ ಎಂದು ಬೇಜಾರಾಯ್ತು. ಅಂದೇ ಸಿಗರೇಟ್​ ಸೇದುವುದು ಬಿಟ್ಟೆ. ಅವತ್ತಿನಿಂದ ವಾಸನೆ ಕಂಡರೂ ಆಗಲ್ಲ" ಎಂದು ತಮ್ಮ ಕೆಟ್ಟ ಚಟದಿಂದ ಹೊರ ಬಂದ ಕುರಿತು ಸಭೆಯಲ್ಲಿ ಹೇಳಿಕೊಂಡರು.


ಸಿಗರೇಟ್ ಪ್ಯಾಕ್ ಮೇಲೆಯೇ '‘smoking is injuries to health’ ಎಂದು ಬರೆದಿದ್ದರೂ ಜನ ಅದನ್ನು ಕೊಂಡು ಸೇದುತ್ತಾರೆ. ಆದರೆ ಅದು ಕ್ಯಾನ್ಸರ್ ಗೆ ತಿರುಗಿ ಕಟ್ಟ ಕಡೆಯ ಹಂತ ತಲುಪಿದಾಗ ಸಿಗರೇಟ್ ಸೇದುವುದು ಬಿಟ್ಟು ಆರೋಗ್ಯದ ಬಗ್ಗೆ ಗಮನ ಹರಿಸಲು ಪ್ರಯತ್ನಿಸುತ್ತೇವೆ. ಇದು ಸರಿಯಲ್ಲ. ಕೆಟ್ಟ ಚಟಗಳನ್ನು ಆದಷ್ಟು ಬೇಗ ಬಿಟ್ಟರೆ ಒಳ್ಳೆಯದು ಮತ್ತು ಕ್ಯಾನ್ಸರ್ ಅಂತಿಮ ಹಂತ ತಲುಪುವ ಮುನ್ನವೇ ತಪಾಸಣೆ ಮಾಡಿಸಿಕೊಳ್ಳುವುದು ಒಳ್ಳೆಯದು ಎಂದು ಸಿದ್ದರಾಮಯ್ಯ ಸಲಹೆ ನೀಡಿದರು.